ಕಲಬುರಗಿ: ವಿಶ್ವದ ಬಹುತೇಕ ಭಾಗ ಸಮಾಜವಾದಿ ಸಿದ್ಧಾಂತದ ರಾಜಕಾರಣಕ್ಕೆ ವಾಲಿದ್ದ ದಿನಗಳಿದ್ದವು. ಸೋವಿಯತ್ ರಷ್ಯಾ, ಚೀನಾ, ಉತ್ತರ ಕೊರಿಯಾ, ಕ್ಯೂಬಾ, ಅರ್ಜೆಂಟೀನಾ, ಲ್ಯಾಟಿನ್ ಅಮೆರಿಕದಲ್ಲಿ ಕಮ್ಯುನಿಸ್ಟರ ರಾಜ್ಯಾಧಿಕಾರ ಇತ್ತು. ಆ 1960, 70ರ ದಶಕದಲ್ಲಿ ಕಲಬುರಗಿ ಜಿಲ್ಲೆಯನ್ನೂ ಅಕ್ಷರಶಃ ಕಮ್ಯುನಿಸ್ಟರು ಆಳುತ್ತಿದ್ದರು.
ಇದಕ್ಕೆ ಕಾರಣವೂ ಇತ್ತು. ಕಲಬುರಗಿ ನಗರದಲ್ಲಿ ಎಂಎಸ್‌ಕೆ ಮಿಲ್ ಸಹಸ್ರಾರು ಕಾರ್ಮಿಕರಿಗೆ ಕೆಲಸ ಕೊಟ್ಟಿತ್ತು. ಶಹಾಬಾದ್, ಚಿತ್ತಾಪುರ, ವಾಡಿಯಲ್ಲಿ ಸಿಮೆಂಟ್ ಕಾರ್ಖಾನೆಗಳು ಕಾರ್ಯಾರಂಭ ಮಾಡಿದ್ದರಿಂದ ಅಲ್ಲಿಯೂ ಸಹಸ್ರಾರು ಮಂದಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಸಹಜವಾಗಿಯೇ ಕಾರ್ಮಿಕ ಸಂಘಟನೆಗಳು ಇಲ್ಲಿ ಬೇರು ಬಿಟ್ಟಿದ್ದರಿಂದ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಕಮ್ಯುನಿಸ್ಟ್ ನಾಯಕರಾಗಿದ್ದ ಗಂಗಾಧರ ನಮೋಶಿ (ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಅವರ ತಂದೆ), ಶರಣಪ್ಪ ಭೈರಿ, ಕೆ.ಬಿ. ಶಾಣಪ್ಪ ಅವರು ಅವಿಭಜಿತ ಸಿಪಿಐ ಪಕ್ಷದಿಂದ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಎಲ್ಲೆಲ್ಲಿ ದುಡಿಯುವ ವರ್ಗದ ಜನರಿದ್ದರೋ ಅಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ವಿಶೇಷವಾಗಿ ಎಂಎಸ್‌ಕೆ ಮಿಲ್ ಇದ್ದ ಕಲಬುರಗಿ, ಸಿಮೆಂಟ್ ಕಾರ್ಖಾನೆಗಳು ಸೇರಿದಂತೆ ಇತರೆ ಉದ್ಯಮಗಳು ಬೀಡು ಬಿಟ್ಟಿದ್ದ ಶಹಾಬಾದ್ ಹಾಗೂ ಚಿತ್ತಾಪುರ ತಾ ಲ್ಲೂಕಿನಲ್ಲಿ ಗೆದ್ದಿದ್ದರು.
ಕಮ್ಯುನಿಸ್ಟ್ ಪಕ್ಷ ದಿಂದ ಮೊದಲು ಖಾತೆ ತೆರೆದವರು ಗುಲಬರ್ಗಾ ಕ್ಷೇತ್ರದಿಂದ 1962ರಲ್ಲಿ ಸ್ಪರ್ಧಿಸಿದ್ದ ಗಂಗಾಧರ ನಮೋಶಿ ಅವರು. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮೊಹಮ್ಮದ್ ಅಲಿಯವರಿಗೆ ಪರಾಭವಗೊಳಿಸಿ 14,208 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 1964ರಲ್ಲಿ ಸಿಪಿಐನಿಂದ ಸಿಡಿದು ಸಿಪಿಐ (ಎಂ) ಪಕ್ಷ ಅಸ್ತಿತ್ವಕ್ಕೆ ಬಂದಾಗ ನಮೋಶಿ ಅವರು ಸಿಪಿಐ (ಎಂ)ಗೆ ಸೇರ್ಪಡೆಯಾದರು. ನಂತರ 1967ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಎಎಂ ಅಲಿ ಅವರ ಎದುರು ಪರಾಭವಗೊಂಡರು. ಅದಾದ ಬಳಿಕ ಕೆಲ ಚುನಾವಣೆಗಳಲ್ಲಿ ಸ್ಪರ್ಧಿಸಿದರಾದರೂ ಗೆಲುವು ದಕ್ಕಲಿಲ್ಲ.
ಅದೇ ಅವಧಿಯಲ್ಲಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ. ಅನಂತರಾವ್ ಸಹ ಗೆಲುವು ಸಾಧಿಸಲಿಲ್ಲ. 1978ರಲ್ಲಿ ಶಹಾಬಾದ್ ಮೀಸಲು ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರಣಪ್ಪ ಫಕ್ಕೀರಪ್ಪ ಭೈರಿ ಅವರು 22,685 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ನಂತರ ಅದೇ ಶಹಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ ಕೆ.ಬಿ. ಶಾಣಪ್ಪ ಅವರು 1983ರಲ್ಲಿ 16,888 ಮತಗಳು ಹಾಗೂ 1985ರಲ್ಲಿ 16,263 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಅದಾದ ಬಳಿಕ ಜಿಲ್ಲೆಯಲ್ಲಿ ಅಧಿಕಾರ ರಾಜಕಾರಣದಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ ಕುಸಿಯತೊಡಗಿತು. ಅದಾಗಲೇ ಪ್ರವರ್ಧಮಾನಕ್ಕೆ ಬಂದಿದ್ದ ಕಾಂಗ್ರೆಸ್ ಹಾಗೂ ಜನತಾ ದಳದ ಅಭ್ಯರ್ಥಿಗಳು ಗೆಲುವು ಸಾಧಿಸಲಾರಂಭಿಸಿದರು.
ಕಮ್ಯುನಿಸ್ಟ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದ ಬಹುತೇಕ ನಾಯಕರು ಕಾಂಗ್ರೆಸ್ ಹಾಗೂ ಜನತಾದಳದತ್ತ ಮುಖ ಮಾಡಿದರು.
ಕೆ.ಬಿ. ಶಾಣಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ರಾಜ್ಯ ಸಭೆ ಸದಸ್ಯರಾದರು. ಗಂಗಾಧರ ನಮೋಶಿ ಅವರ ಪುತ್ರ ಶಶೀಲ್ ನಮೋಶಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
‘ಸೋಲು–ಗೆಲುವಿಗಿಂತ ಹೋರಾಟ ಮುಖ್ಯ’
ಸಿಪಿಐನಿಂದ ಹೋಳಾಗಿ ಸೃಷ್ಟಿಯಾದ ಸಿಪಿಐ (ಎಂ) ಪಕ್ಷವು ಜಿಲ್ಲೆಯಲ್ಲಿ ಒಮ್ಮೆಯೂ ಖಾತೆ ತೆರೆದಿಲ್ಲ. ಪಕ್ಷದ ಪ್ರಭಾವಿ ಮುಖಂಡರಾಗಿದ್ದ ಮಾರುತಿ ಮಾನಪಡೆ ಅವರು ಕಮಲಾಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ ಒಮ್ಮೆಯೂ ಗೆಲುವು ಸಾಧಿಸಲಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿದ್ದರು.
ಜಿಲ್ಲೆಯಲ್ಲಿ ಸಿಪಿಐ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಶ್ರೀನಿವಾಸ ಗುಡಿ ಅವರು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ ಗೆಲುವು ಸಾಧಿಸಲಿಲ್ಲ.
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಆದರೆ, ಗೆಲುವು ದಕ್ಕಿಲ್ಲ. ಜನ ಚಳವಳಿಯ ಭಾಗವಾಗಿಯೇ ಚುನಾವಣೆಯನ್ನು ಎದುರಿಸುತ್ತೇವೆ. ಸೋಲು, ಗೆಲುವಿನ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ ಎನ್ನುತ್ತಾರೆ ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್.
___
ಜಿಲ್ಲೆಯಲ್ಲಿ ಸಾಕಷ್ಟು ಉದ್ಯಮಗಳು ಆರಂಭಗೊಂಡಿದ್ದರಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ, ದುಡಿಯುವ ವರ್ಗದ ಪರವಾಗಿದ್ದ ಕಮ್ಯುನಿಸ್ಟ್ ಪಕ್ಷ ಗೆಲುವು ಸಾಧಿಸಿತ್ತು
ಭೀಮಾಶಂಕರ ಮಾಡಿಯಾಳ, ಸಿಪಿಐ ಪಕ್ಷದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.