ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ಪಡೆದಿದ್ದಾರೆ.
ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಶಿವರಾಜ ತಂಗಡಗಿ ಹಾಗೂ ಬಿಜೆಪಿಯಿಂದ ಬಸವರಾಜ ದಢೇಸೂಗೂರು, ಕೆಆರ್‌ಪಿಪಿಯ ಡಾ.ಚಾರುಲ್ ವೆಂಕಟರಮಣ, ಜೆಡಿಎಸ್‌ನಿಂದ ಪಿ.ವಿ.ರಾಜಗೋಪಾಲ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದರು. ಮತಗಳ ಅಂತರ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ತಂಗಡಗಿ ಹಾಗೂ ದಢೇಸೂಗೂರು ಅವರ ನಡುವಿನ ನೇರ ಹಣಾಹಣಿಯ ಮೂರನೇ ಚುನಾವಣೆ ಇದಾಗಿದ್ದು ಒಟ್ಟು 2,24,042 ಮತಗಳ ಪೈಕಿ 1,75,439 ಮತಗಳು ಚಲಾವಣೆ ಆಗಿದ್ದವು.
ಮೀಸಲು ಕ್ಷೇತ್ರವಾದ (2008) ನಂತರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವರಾಜ ತಂಗಡಗಿ ಅವರು ಕಾಂಗ್ರೆಸ್‌ನ ಭವಾನಿಮಠ ಮುಕುಂದರಾವ್ ಅವರ ವಿರುದ್ಧ 2,183 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ತಂಗಡಗಿ 32,743 ಮತಗಳನ್ನು ಪಡೆದಿದ್ದರೆ ಭವಾನಿಮಠ 30,560 ಮತ ಪಡೆದು ಎರಡನೇ ಸ್ಥಾನಕ್ಕೆ ಹಾಗೂ ಬಿಜೆಪಿಯ ಶಾಮಣ್ಣ ನಾರಿನಾಳ ಮೂರನೇ ಸ್ಥಾನ ಪಡೆದಿದ್ದರು.
ಬದಲಾದ ರಾಜಕೀಯದಲ್ಲಿ 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಿವರಾಜ ತಂಗಡಗಿ ಅವರು ಕೆಜೆಪಿಯ ಬಸವರಾಜ ದಢೇಸೂಗೂರು ಅವರನ್ನು 5,052 ಮತಗಳ ಅಂತರದಲ್ಲಿ ಸೋಲಿಸಿದ್ದರು. ತಂಗಡಗಿ 49,415 ಮತಗಳನ್ನು ಪಡೆದಿದ್ದರೆ ದಢೇಸೂಗೂರು ಅವರಿಗೆ 44,399 ಮತಗಳು ಬಂದಿದ್ದವು. ಬಿಎಸ್‌ಆರ್ ಕಾಂಗ್ರೆಸ್ ಮೂರನೇ ಸ್ಥಾನ ಹಾಗೂ ಬಿಜೆಪಿ ನಾಲ್ಕನೇಯ ಸ್ಥಾನದಲ್ಲಿತ್ತು.
2018ರಲ್ಲಿ ಬಿಜೆಪಿಯ ದಢೇಸೂಗೂರು 14,225 ಮತಗಳ ಅಂತರದಲ್ಲಿ ತಂಗಡಗಿ ವಿರುದ್ಧ ಗೆಲ್ಲುವ ಮೂಲಕ 2013ರ ಸೋಲಿನ ಸೇಡು ತೀರಿಸಿಕೊಂಡಿದ್ದರು. ದಢೇಸೂಗೂರು ಅವರು 87,735 ಮತಗಳನ್ನು ಪಡೆದು ಜಯ ಸಾಧಿಸಿದ್ದರೆ ತಂಗಡಗಿ ಅವರು 73,510 ಮತಗಳನ್ನು ಪಡೆದು ಸೋಲುಂಡಿದ್ದರು. ಸೋಲು ಖಚಿತವಾಗುತ್ತಿದ್ದಂತೆ ದಢೇಸೂಗೂರು ನಿರಾಸೆಯಿಂದ ಮತ ಎಣಿಕೆ ಕೇಂದ್ರದಿಂದ ವಾಪಸ್ ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.