ಹುಬ್ಬಳ್ಳಿ: ‘ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎನ್ನುವ ಬಿಜೆಪಿಯವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಚ್ಚಿಕೊಳ್ಳದೆ ರಾಜ್ಯದಲ್ಲಿ ಚುನಾವಣೆ ಮಾಡಲಿ’ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಸವಾಲು ಹಾಕಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಪಕ್ಷಕ್ಕೆ ವ್ಯಕ್ತಿ ಎಷ್ಟು ಮುಖ್ಯವೋ, ವ್ಯಕ್ತಿಗೂ ಪಕ್ಷ ಅಷ್ಟೇ ಮುಖ್ಯ. ಬೆಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ಅವರ ರೋಡ್ ಶೋ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಮೇರು ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಎಲ್ಲಿದ್ದರು? ರಾಜ್ಯ ಬಿಜೆಪಿ ನಾಯಕತ್ವ ಎತ್ತ ಸಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ‘ ಎಂದದರು.
‘ಬಿಜೆಪಿಯಲ್ಲಿ ಲಿಂಗಾಯತ ಬಿಜೆಪಿ ನಾಯಕರನ್ನು ಮುಗಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾವ ಕಾರಣಕ್ಕೆ ಕೆಳಕ್ಕಿಳಿಸಿದರು? ವಯಸ್ಸಿನ ಕಾರಣಕ್ಕೆ ಇಳಿಸಿದ್ದರೆ, ಚುನಾವಣಾ ಪ್ರಚಾರಕ್ಕೆ ಯಾಕೆ ಬಳಸಿಕೊಳ್ಳುತ್ತಿದ್ದಾರೆ? ಇದೆಲ್ಲದರ ಹಿಂದೆ ಬಿ.ಎಲ್. ಸಂತೋಷ್ ಇದ್ದಾರೆ. ಅವರ ಬಗ್ಗೆ ಹಿಂದೊಮ್ಮೆ ಯಡಿಯೂರಪ್ಪ ಅವರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು’ ಎಂದು ನೆನೆದರು.
ಅನುಕೂಲ ಸಿಂಧು ನಡೆ: ‘ಲಿಂಗಾಯತರ ಕುರಿತು ಸಂತೋಷ್ ಹೇಳಿದ್ದಾರೆಂಬ ಹೇಳಿಕೆಯನ್ನು ಸುಳ್ಳು ಎನ್ನುವ ಬಿಜೆಪಿ, ಅದರ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿಸಬೇಕಲ್ಲವೆ? ಅದು ಬಿಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಿ ಸುಮ್ಮನಾಗಿದ್ದು ಏಕೆ? ಹಿಂದೆ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ಆಡಿಯೊ ಬಂದಾಗಲೂ ಇದೇ ರೀತಿ ಆಗಿತ್ತು. ತಮಗೆ ಅನುಕೂಲವಿದ್ದಾಗ ಸುಮ್ಮನಿರುವುದು ಹಾಗೂ ಅನಾನುಕೂಲವಿದ್ದಾಗ ಸುಳ್ಳು ಎನ್ನುವುದು ಬಿಜೆಪಿಯವರ ಚಾಳಿ’ ಎಂದು ವಾಗ್ದಾಳಿ ನಡೆಸಿದರು.
‘ನಾನು ಕಾಂಗ್ರೆಸ್ ಸೇರಿದ ಬಳಿಕ, ಬಿಜೆಪಿಯಲ್ಲಿದ್ದ ನನ್ನ ಹಲವು ಬೆಂಬಲಿಗರು ನನ್ನೊಂದಿಗೆ ಕಾಂಗ್ರೆಸ್‌ಗೆ ಬರಲು ಮುಂದಾದರು. ಇದು ಗೊತ್ತಾಗುತ್ತಿದ್ದಂತೆ ಬಿಜೆಪಿಯವರು ಅವರೆಲ್ಲರಿಗೂ ಕರೆ ಮಾಡಿ, ಶೆಟ್ಟರ್ ಜೊತೆ ಹೋಗದಂತೆ ಬೆದರಿಕೆ ಹಾಕುತ್ತಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಬಂದ ಕುರುಬ ಸಮುದಾಯದ ಶಾಂತಣ್ಣ ಕಡಿವಾಲ ಅವರಿಗೆ ದಿನವಿಡೀ ಇಂತಹ ಕರೆಗಳು ಬಂದವು. ಬಿಜೆಪಿಯವರ ಈ ನಡೆಯುವ ಚುನಾವಣೆಯಲ್ಲಿ ದೊಡ್ಡ ಒಳೇಟು ನೀಡಲಿದ್ದು, ಮುಂದಿನ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂಬುದನ್ನು ಕೇಂದ್ರ ಸಚಿವ ಜೋಶಿ ಅವರು ತಿಳಿದುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು
‘ನಾನು ಕಾಂಗ್ರೆಸ್ ಸೇರಿದ ಬಳಿಕ ಸೆಂಟ್ರಲ್ ಕ್ಷೇತ್ರವು ದೇಶದ ಗಮನ ಸೆಳೆಯುತ್ತಿದೆ. ಕುತಂತ್ರ ಮಾಡಿ ನನ್ನನ್ನು ಸೋಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನನ್ನನ್ನೇ ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಅಭ್ಯರ್ಥಿ ಬಗ್ಗೆ ಏನೂ ಹೇಳುತ್ತಿಲ್ಲ. ನನ್ನ ಸೋಲಿಸುವ ಬಿಜೆಪಿ ಕನಸು ಎಂದಿಗೂ ನನಸಾಗುವುದಿಲ್ಲ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.