ADVERTISEMENT

ಕಾಂಗ್ರೆಸ್‌ ಭದ್ರಕೋಟಿ ಬಬಲೇಶ್ವರ: 11 ಬಾರಿ ಜಯಸಾಧಿಸಿದ ಕಾಂಗ್ರೆಸ್‌

11 ಬಾರಿ ಜಯಸಾಧಿಸಿದ ಕಾಂಗ್ರೆಸ್‌ ಪಕ್ಷ; ಬಿಜೆಪಿ, ಜನತಾದಳಕ್ಕೂ ಒಮ್ಮೆ ಅವಕಾಶ

ಬಸವರಾಜ ಸಂಪಳ್ಳಿ
Published 16 ಏಪ್ರಿಲ್ 2023, 11:35 IST
Last Updated 16 ಏಪ್ರಿಲ್ 2023, 11:35 IST
ಬಬಲೇಶ್ವರ ವಿಧಾನಸಭಾ ಕ್ಷೇತ್ರ ನಕ್ಷೆ
ಬಬಲೇಶ್ವರ ವಿಧಾನಸಭಾ ಕ್ಷೇತ್ರ ನಕ್ಷೆ   

ವಿಜಯಪುರ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎಂದು ಯಾವುದಾದರೂ ಕ್ಷೇತ್ರ ಪ್ರಸಿದ್ಧವಾಗಿದ್ದರೇ ಅದು ಬಬಲೇಶ್ವರ (ತಿಕೋಟಾ) ವಿಧಾನಸಭಾ ಕ್ಷೇತ್ರ ಮಾತ್ರ.

ಹೌದು, ಇದುವರೆಗೆ ಈ ಕ್ಷೇತ್ರಕ್ಕೆ ನಡೆದ ಒಂದು ಉಪ ಚುನಾವಣೆ ಸೇರಿದಂತೆ ಒಟ್ಟು 15 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಇನ್ನುಳಿದಂತೆ ಜನತಾದಳ, ಜೆಎನ್‌ಪಿ, ಎನ್‌ಸಿಓ, ಬಿಜೆಪಿಗೆ ತಲಾ ಒಂದೊಂದು ಬಾರಿ ಅವಕಾಶ ದೊರಕಿದೆ.

ಆರಂಭದಲ್ಲಿ ತಿಕೋಟಾ ಹೆಸರಿನಿಂದ ಗುರುತಿಸಲಾಗುತ್ತಿದ್ದ ಈ ಕ್ಷೇತ್ರ ಸದ್ಯ ಬಬಲೇಶ್ವರ ವಿಧಾನಸಭಾ ಕ್ಷೇತ್ರವಾಗಿ ಬದಲಾಗಿದೆ. ದ್ರಾಕ್ಷಿ ಬೆಳೆಯಿಂದ ಪ್ರಸಿದ್ಧವಾಗಿರುವ ಈ ಕ್ಷೇತ್ರ ಒಂದು ಕಡೆ ಮಹಾರಾಷ್ಟ್ರ, ಇನ್ನೊಂದು ಕಡೆ ಬೆಳಗಾವಿ, ಮತ್ತೊಂದು ಕಡೆ ಬಾಗಲಕೋಟೆ ಜಿಲ್ಲೆಯನ್ನು ಆವರಿಸಿದೆ.

ADVERTISEMENT

ಶಾಸಕ ಶಿವಾನಂದ ಪಾಟೀಲ ಅವರು ಈ ಕ್ಷೇತ್ರದಲ್ಲಿ 1994ರಲ್ಲಿ ಜನತಾದಳ ಮತ್ತು 1999ರಲ್ಲಿ ಬಿಜೆಪಿಯಿಂದ ಜಯಗಳಿಸಿರುವುದು ವಿಶೇಷ. ಬಳಿಕ ಅವರು ಈ ಕ್ಷೇತ್ರವನ್ನು ಬದಲಿಸಿ, ಬಸವನ ಬಾಗೇವಾಡಿಗೆ ವಲಸೆ ಹೋಗಿ ಇದೀಗ ಕಾಂಗ್ರೆಸ್‌ನಿಂದ ಹಾಲಿ ಶಾಸಕರಾಗಿದ್ದಾರೆ.

ಹಾಲಿ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಹೆಚ್ಚು ಬಾರಿ ಅಂದರೆ, ಒಂದು ಉಪ ಚುನಾವಣೆ ಸೇರಿದಂತೆ ಐದು ಬಾರಿ ಬಬಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸಿ, ದಾಖಲೆ ಬರೆದಿದ್ದಾರೆ. ಅಲ್ಲದೇ, ಇದೀಗ ನಡೆಯುತ್ತಿರುವ ಚುನಾವಣೆಗೂ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಎಂ.ಬಿ.ಪಾಟೀಲ ಅವರ ತಂದೆ ಬಿ.ಎಂ. ಪಾಟೀಲ ಅವರು ಮೂರು ಬಾರಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿದ್ದರು. ಒಟ್ಟಾರೆ ಈ ಕ್ಷೇತ್ರ ಎಂ.ಬಿ.ಪಾಟೀಲರ ಕುಟುಂಬಕ್ಕೆ ಹೆಚ್ಚು ಬಾರಿ ಅವಕಾಶ ನೀಡಿರುವುದು ವಿಶೇಷ. ಜೊತೆಗೆ ಎಂ.ಬಿ. ಪಾಟೀಲರು ಲೋಕಸಭೆಗೂ ಸ್ಪರ್ಧಿಸಿ ವಿಜಯಶಾಲಿಯಾಗಿದ್ದು, ಇನ್ನೊಂದು ವಿಶೇಷತೆ.

ಶಿವಾನಂದ ಪಾಟೀಲ ಅವರು ಜೆಡಿಎಸ್‌, ಬಿಜೆಪಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿ ಬಳಿಕ ಕಾಂಗ್ರೆಸ್‌ ಸೇರ್ಪಡೆಯಾದ ಬಳಿಕ ಈ ಕ್ಷೇತ್ರದಲ್ಲಿ ಅವರ ಸಹೋದರ ವಿಜುಗೌಡ ಪಾಟೀಲ ನಾಲ್ಕು ಬಾರಿ ಎಂ.ಬಿ.ಪಾಟೀಲರಿಗೆ ಮುಖಾಮುಖಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಸ್ಪರ್ಧೆ ಒಡ್ಡಿದ್ದಾರೆ.

1962ರಲ್ಲಿ ತಾಳಿಕೋಟೆ (ಇಂದಿನ ದೇವರಹಿಪ್ಪರಗಿ) ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಮಾಡಿದ್ದ ಗದಿಗೆಪ್ಪಗೌಡ ಪಾಟೀಲರು 1972 ರಲ್ಲಿ ತಿಕೋಟಾ (ಇಂದಿನ ಬಬಲೇಶ್ವರ) ಕ್ಷೇತ್ರದಿಂದಲೂ ಗೆದ್ದು ಬಂದಿದ್ದರು. ಅದೇ ತೆರನಾಗಿ 1967 ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಬಿ.ಎಂ. ಪಾಟೀಲರು 1983ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಈ ಕ್ಷೇತ್ರದ ಪ್ರಥಮ ಶಾಸಕರಾಗಿದ್ದ ಚೆನ್ನಬಸಪ್ಪ ಅಂಬಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಅವರು ಮುಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ‘ಕರ್ನಾಟಕದ ಸರ್ಧಾರ್‌ ಪಟೇಲ್’ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಬಿ.ಎಂ. ಪಾಟೀಲರು ಸಹ ರಾಜಕೀಯವಾಗಿ ಸಚಿವ ಸ್ಥಾನವನ್ನು ಅಲಂಕರಿಸಿದರು. ಅಷ್ಟೇ ಅಲ್ಲದೇ, ‘ಅಜಾತಶತ್ರು’ ಎಂಬ ಕೀರ್ತಿಗೆ ಪಾತ್ರರಾಗಿ ಬಿಎಲ್‌ಡಿಇ ಸಂಸ್ಥೆಯನ್ನು ಮುನ್ನಡೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.

ಸರಳತೆಯ ಸಾಕಾರ ಮೂರ್ತಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ದಿ.ಶರಣಯ್ಯ ವಸ್ತ್ರದ ಸಹ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಶಾಸಕ ಎಂ.ಬಿ. ಪಾಟೀಲ ಅವರು ನೀರಾವರಿ ಯೋಜನೆ, ಕೆರೆಗಳಿಗೆ ನೀರು ತುಂಬುವ ಯೋಜನೆ ಮೂಲಕ ಕ್ಷೇತ್ರವನ್ನು ಕೃಷಿ, ತೋಟಗಾರಿಕೆ, ಹೈನುಗಾರಿಕೆ ವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಯು ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳಿಗೆ ಅತ್ಯಂತ ಮಹತ್ವಪೂರ್ಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.