ADVERTISEMENT

ದೇವನಹಳ್ಳಿ| ಮುನಿಸು ತಣಿಸಿದ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 4:56 IST
Last Updated 8 ಏಪ್ರಿಲ್ 2023, 4:56 IST
ದೇವನಹಳ್ಳಿಯ ಖಾದಿ ಬೋರ್ಡ್ ಕಚೇರಿಯಲ್ಲಿ ಸಂಘಟನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ
ದೇವನಹಳ್ಳಿಯ ಖಾದಿ ಬೋರ್ಡ್ ಕಚೇರಿಯಲ್ಲಿ ಸಂಘಟನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ   

ದೇವನಹಳ್ಳಿ: ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದ ಬೆನ್ನಲ್ಲೇ ಕ್ಷೇತ್ರದಾದ್ಯಂತ ಎದ್ದಿದ್ದ ಅಸಮಾಧಾನದ ಹೊಗೆ ಈಗ ಕೊಂಚ ಕಡಿಮೆಯಾಗಿದೆ.

ತಾಲ್ಲೂಕಿನ ಖಾದಿ ಬೋರ್ಡ್ ಕಚೇರಿಯಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂಧಾನ ಸಭೆಯು ಈ ಅಸಮಾಧಾನವನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದೆ. ಜತೆಗೆ, ಜಾತ್ಯತೀತವಾಗಿ ಮುನಿಯಪ್ಪ ಅವರನ್ನು ಬೆಂಬಲಿಸಲು ಮೂಲ ಕಾಂಗ್ರೆಸ್ಸಿಗರು ಘೋಷಣೆ
ಮಾಡಿದ್ದಾರೆ.

ಇನ್ನು ಮುನಿಯಪ್ಪ ಅವರನ್ನು ‘ಗೋ ಬ್ಯಾಕ್‌’ ಎಂದು ಈ ಹಿಂದೆ ಗದ್ದಲ ಮಾಡಿದ್ದ ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರು ಈಗ ‘ವೆಲ್‌ ಕಮ್‌’ ಎಂದು ಸ್ವಾಗತಿಸುತ್ತಿದ್ದಾರೆ. ಮುನಿಯಪ್ಪ ಅವರೊಂದಿಗೆ ವೇದಿಕೆ ಹಂಚಿಕೊಂಡು ಎಲ್ಲವೂ ಸರಿಯಾಗಿದೆ. ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿದ್ದ ಬೇಗುದಿ ಶಮನಗೊಂಡಿದೆ. ಪಕ್ಷದ ಏಳಿಗೆಗಾಗಿ ಎಲ್ಲರೂ ಸೇರಿ ದುಡಿಯೋಣ ಎಂಬ ತತ್ವದಲ್ಲಿ ಈ ಹಿಂದೆ ನೀಡಿದ್ದ ರಾಜೀನಾಮೆಯನ್ನು ಪಕ್ಕಕ್ಕೆ ಇಟ್ಟು ರಾಜೀ ರಾಜಕಾರಣಕ್ಕೆ ಮುಂದಾಗಿದ್ದಾರೆ.

ADVERTISEMENT

ಹೃದಯದ ತೊಂದರೆಯಿಂದ ಪಕ್ಷದ ಕಾರ್ಯ ಚಟುವಟಿಕೆಯಿಂದ ದೂರ ಉಳಿದಿದ್ದ ಮಾಜಿ ಶಾಸಕ ವೆಂಕಟಸ್ವಾಮಿ ಅವರು ಸಭೆಯಲ್ಲಿ ಕಾಣಿಸಿಕೊಂಡು, ಪಕ್ಷದ ಒಗ್ಗಟ್ಟಿಗೆ ಬೆಂಬಲ ನೀಡಿದ್ದಾರೆ. ಈ ಮೂಲಕ ತಮ್ಮ ಪಕ್ಷ ನಿಷ್ಠೆ ಮೆರೆದಿದ್ದಾರೆ. ಅವರ ಬೆಂಬಲಿಗರೆಲ್ಲ ಮುನಿಯಪ್ಪ ಅವರಿಗೆ ಜೈಕಾರ ಕೂಗಿದ್ದಾರೆ.

ಇದಕ್ಕೂ ಮುನ್ನ ತಾಲ್ಲೂಕಿನ ಚೌಡಪ್ಪನಹಳ್ಳಿಯಲ್ಲಿರುವ ಟಿಕೆಟ್‌ ಆಕಾಂಕ್ಷಿ ಲೋಕೇಶ್ ಅವರ ನೇತೃತ್ವದಲ್ಲಿ ಬೌದ್ಧ ವಿಹಾರದಲ್ಲಿ ಎಸ್‌.ಸಿ ಘಟಕದ ಸಭೆ ನಡೆಸಿದ್ದ ಮುನಿಯಪ್ಪ ಅವರು, ತಮ್ಮ ಐದು ದಶಕದ ರಾಜಕೀಯ ಅನುಭವದಿಂದ ಕೇವಲ ಐದು ದಿನದಲ್ಲಿಯೇ ಬಂಡಾಯಗಾರರನ್ನು ಸ್ನೇಹಿತರಾಗಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಬಲ ಟಿಕೆಟ್‌ ಆಕಾಂಕ್ಷಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಸದಸ್ಯ ಹೆಬ್ಬಾಳದ ಎಂ. ಆನಂದ್ ಕುಮಾರ್‌ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದರು. ಅವರು ಕೂಡ ಮುನಿಯಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ.

ದೇವನಹಳ್ಳಿಯಲ್ಲಿ ವಾಸಕ್ಕೆ ಹಿಂಜರಿಕೆ: ಕೋಲಾರದಲ್ಲಿ ವಾಸ ಮಾಡುತ್ತಿರುವ ಕೆ.ಎಚ್‌. ಮುನಿಯಪ್ಪ ಅವರು ದೇವನಹಳ್ಳಿಯಲ್ಲಿ ತಮ್ಮ ವಾಸ ಸ್ಥಳ ಬದಲಾವಣೆ ಮಾಡಿ, ರಾಜಕೀಯ ಪ್ರಚಾರ ಮಾಡಲಿದ್ದಾರೆ ಎಂಬ ನಿರೀಕ್ಷೆಯಿತ್ತು.

ಆದರೆ, ದೇವನಹಳ್ಳಿ ಅಭ್ಯರ್ಥಿಯಾದರೂ ಕೋಲಾರದಿಂದ ಬಂದು ದೇವನಹಳ್ಳಿಗೆ ವಾಸಸ್ಥಾನ ಬದಲಿಸುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ಇಂಥ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದೂ ಹೇಳಿದ್ದಾರೆ.

ಆದರೆ, ದೇವನಹಳ್ಳಿಯ ಶಾಂತಿನಗರದಲ್ಲಿ ಬಹುಮ
ಹಡಿ ಕಟ್ಟಡವನ್ನು ಅವರ ಆಪ್ತರು ಅವರಿಗಾಗಿ ಖರೀದಿ ಮಾಡಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.