ADVERTISEMENT

LS polls | ಭಿನ್ನಮತ: ಅಮಿತ್‌ ಶಾ ಮಾತಿಗೆ ಬೆಚ್ಚಿದ ರಾಜ್ಯ ಬಿಜೆಪಿ ನಾಯಕರು

ಒಳ ಏಟು ನೀಡುವವರಿಗೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
<div class="paragraphs"><p>ಅಮಿತ್‌ ಶಾ (ಸಂಗ್ರಹ ಚಿತ್ರ)</p></div>

ಅಮಿತ್‌ ಶಾ (ಸಂಗ್ರಹ ಚಿತ್ರ)

   

ಬೆಂಗಳೂರು: ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದಲ್ಲಿ ಬಂಡಾಯ, ಭಿನ್ನಮತ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡರೂ, ಸಮಸ್ಯೆ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಗಮನಕ್ಕೆ ಬಂದಿದ್ದು, ಇತ್ತೀಚಿನ ಬೆಂಗಳೂರು ಭೇಟಿ ವೇಳೆ ಪಕ್ಷದ ಪ್ರಮುಖ ನಾಯಕರನ್ನು ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಂಡಾಯ ಮತ್ತು ಭಿನ್ನಮತವನ್ನು ತಕ್ಷಣವೇ ಶಮನಗೊಳಿಸಬೇಕು. ಪಕ್ಷಕ್ಕೆ ಹೊಡೆತ ಕೊಡುವ ರೀತಿಯಲ್ಲಿ ವರ್ತಿಸುತ್ತಿರುವ ಕೆಲವು ನಾಯಕರನ್ನು ಸ್ವಕ್ಷೇತ್ರಗಳನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಕಳುಹಿಸಬೇಕು ಎಂಬ ಖಡಕ್ ಸೂಚನೆಯ ಬೆನ್ನಲ್ಲೇ ಹಲವರಿಗೆ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಲಾಗಿದೆ.

ADVERTISEMENT

ಶಾ ಅವರ ಕಣ್ಣಿಗೆ ಬಿದ್ದವರ ಪೈಕಿ ಮೈಸೂರಿನ ಸಂಸದ ಪ್ರತಾಪ್‌ ಸಿಂಹ, ಹಾಸನದ ಮಾಜಿ ಶಾಸಕ ಪ್ರೀತಂಗೌಡ ಪ್ರಮುಖರು. ಪ್ರೀತಂಗೌಡ ಅವರಿಗೆ ಚಾಮರಾಜನಗರ ಕ್ಷೇತ್ರದ ಉಸ್ತುವಾರಿಯನ್ನೂ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಚಿಕ್ಕಮಗಳೂರು ಕ್ಷೇತ್ರದ ಉಸ್ತುವಾರಿಯನ್ನೂ ನೀಡಲಾಗಿದೆ. ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರನ್ನು ‘ಸ್ಟಾರ್‌ ಪ್ರಚಾರಕ’ರನ್ನಾಗಿ ಮಾಡಿರುವುದರಿಂದ ಬೆಂಗಳೂರು ಗ್ರಾಮಾಂತರಕ್ಕೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ನೇಮಿಸಲಾಗಿದೆ. 

ಅಮಿತ್‌ ಶಾ ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಬಂಡಾಯದ ವಿಷಯವನ್ನೇ ಮುಂದಿಟ್ಟಿಕೊಂಡು ಪ್ರಮುಖ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಅವರ ಬಳಿ ಪ್ರತಿಯೊಂದು ಲೋಕಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ ಇತ್ತು. ‘ರಾಜ್ಯದ ಉದ್ದಗಲಕ್ಕೂ ಬಂಡಾಯ, ಭಿನ್ನಮತ ತಾರಕಕ್ಕೆ ಏರಿದ್ದರೂ ಸುಮ್ಮನೇ ಏಕೆ ಇದ್ದೀರಿ? ಒಂದು ವೇಳೆ ಕಡಿಮೆ ಸ್ಥಾನಗಳು ಬಂದರೆ ಸುಮ್ಮನಿರುವುದಿಲ್ಲ. ತಕ್ಷಣವೇ ಬಂಡಾಯವನ್ನು ತಣ್ಣಗಾಗಿಸಬೇಕು. 25 ಸ್ಥಾನಗಳನ್ನು ಗೆಲ್ಲಲೇಬೇಕು. ಏನು ಮಾಡುತ್ತಿರೋ ಗೊತ್ತಿಲ್ಲ ಎಂದು ಅಮಿತ್‌ ಶಾ ಅವರು ಕಡ್ಡಿ ಮುರಿದಂತೆ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

‘ಯಾವ ಕ್ಷೇತ್ರದಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, ಯಾರು ಮಾಡುತ್ತಿಲ್ಲ, ಯಾರು ಪಕ್ಷದ ವಿರುದ್ಧ ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಇವೆ. ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷದ ಯಾವುದೇ ಹುದ್ದೆಗಳು ಅಲಂಕಾರದ ಹುದ್ದೆಗಳಲ್ಲ. ಮೈ ಬಗ್ಗಿಸಿ ಕೆಲಸ ಮಾಡಬೇಕು. ರಾಜ್ಯದ ಜನತೆ ನಮ್ಮ ಪರ ಇದ್ದಾರೆ. ಅದರ ಲಾಭ ಪಡೆಯುವುದನ್ನು ಬಿಟ್ಟು ಮೈಮರೆತರೆ ಸಹಿಸಲು ಸಾಧ್ಯವಿಲ್ಲ. ಕ್ಷಮಿಸುವುದೂ ಇಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ಏನೆಲ್ಲ ಆಗಿದೆ ಎಂಬುದು ಗೊತ್ತಿದೆ. ಮತ್ತೆ ಅದು ಪುನರಾವರ್ತನೆ ಆಗಬಾರದೆಂದು ಎಚ್ಚರಿಕೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಈ ಎಚ್ಚರಿಕೆಯ ಮಾತುಗಳ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರವಾಲ್ ಅವರು ಸಮಸ್ಯೆಗಳು ಇರುವ ಕ್ಷೇತ್ರಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಪ್ರಭಾವೀ ನಾಯಕರನ್ನೂ ಬಳಸಿಕೊಳ್ಳಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಒಂದು ಚಿಕ್ಕ ಗುಂಪು ಎದುರಾಳಿ ಡಿ.ಕೆ ಸಹೋದರರ ಪ್ರಭಾವಕ್ಕೆ ಒಳಗಾಗಿದ್ದಾರೆ. ಮಂಜುನಾಥ್‌ ಪರ ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿಯೂ ಅಮಿತ್‌ ಶಾ ಅವರನ್ನು ತಲುಪಿದೆ. ತುಂಬಾ ಕಠಿಣವಾಗಿರುವ ಶಿವಮೊಗ್ಗ ಕ್ಷೇತದಲ್ಲೂ ಕೆ.ಎಸ್‌.ಈಶ್ವರಪ್ಪ ಅವರನ್ನು ಸಮಾಧಾನಪಡಿಸುವ ಕೆಲಸಕ್ಕೆ ವಿಜಯೇಂದ್ರ ಕೈಹಾಕಿದ್ದಾರೆ. ಈಶ್ವರಪ್ಪ ಅವರ ಆಕ್ರೋಶಕ್ಕೆ ಸಮಾಧಾನವೇ ಉತ್ತರ ಎಂಬ ರೀತಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಆರ್‌ಎಸ್‌ಎಸ್‌ ಪ್ರಮುಖರೂ ಅವರನ್ನು ಸಮಾಧಾನಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.