ಬೆಂಗಳೂರು: ‘ನಮ್ಮಲ್ಲಿ ಒಮ್ಮತ ಮೂಡದ ಕಾರಣ ಅನಿವಾರ್ಯವಾಗಿ ಬೇರೆಯವರಿಗೆ (ಕೆ.ವಿ.ಗೌತಮ್) ಟಿಕೆಟ್ ಕೊಟ್ಟಿದ್ದಾರೆ. ನಮಗೆ ಟಿಕೆಟ್ ತಪ್ಪಿಸಿದವರ ಬಗ್ಗೆ ಮಾತನಾಡುವುದು ಬೇಡ’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಅಳಿಯನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಯಾವುದೇ ರೀತಿಯ ಬೇಸರವಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನೆಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ’ ಎಂದರು.
‘ನಾವೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು. ಆದ್ದರಿಂದ, ಅವರೂ (ರಮೇಶ್ ಕುಮಾರ್ ಬಣ) ಕೆಲಸ ಮಾಡಲಿ, ನಾನು ಕೆಲಸ ಮಾಡುತ್ತೇನೆ. ಅಂತಿಮವಾಗಿ ಕಾಂಗ್ರೆಸ್ ಗೆಲ್ಲಬೇಕಲ್ಲವೇ? ಪ್ರಾಮಾಣಿಕ ಕೆಲಸ ಮಾಡುತ್ತೇನೆ’ ಎಂದರು.
‘ವರಿಷ್ಠರು ನನ್ನನ್ನು ಕರೆದು ಮಾತನಾಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸಂತೋಷದಿಂದ ಕೆಲಸ ಮಾಡುತ್ತೇನೆ. ನಾನೂ ಕೇಂದ್ರದಲ್ಲಿ ಕೆಲಸ ಮಾಡಿದ್ದೇನೆ. ಸ್ವಪ್ರತಿಷ್ಠೆಗಳು ಏನೂ ಇಲ್ಲ. ಈ ರೀತಿಯ ಘಟನೆಗಳು ನನಗೆ 2–3 ಬಾರಿ ಆಗಿದೆ. ನಾನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲವೆಂದು ಮೊದಲೇ ಹೇಳಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.