ರಾಣೆಬೆನ್ನೂರು (ಹಾವೇರಿ): ‘ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ ಬರಲಿದೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
‘ಮೋದಿ ವೇಷಕ್ಕೆ ಕುರುಬರು ಯಾಮಾರಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಹೆಗಲ ಮೇಲೆ ಕಂಬಳಿ ಹಾಕಿಕೊಂಡ ಮೇಲೆ ಪ್ರಾಮಾಣಿಕರಾಗಿ ಇರಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಕುರಿಗಾರರ ಸಂಘಗಳ ಮೂಲಕ ಕುರಿ ಖರೀದಿಗೆ ₹8 ಲಕ್ಷ ಕೊಡುವ ₹260 ಕೋಟಿ ವೆಚ್ಚದ ಯೋಜನೆ ಜಾರಿಗೊಳಿಸಿದ್ದೆ. ಕಾಂಗ್ರೆಸ್ ಸರ್ಕಾರ ಬಂದು ಅದನ್ನು ನಿಲ್ಲಿಸಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ಟೀಕೆಗೆ ತಿರುಗೇಟು ನೀಡಿದರು.
ರದ್ದಾಗಿರುವ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ಜಾರಿ ಮಾಡಿ ಹಾಲುಮತ ಸಮುದಾಯಕ್ಕೆ ಅನುಕೂಲ ಮಾಡಿಕೊಡುತ್ತೇನೆ. ರಾಣೆಬೆನ್ನೂರಿನಲ್ಲಿ ಎರಡು ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ರಾಣೆಬೆನ್ನೂರಿಗೆ ಮೆಗಾ ಮಾರ್ಕೆಟ್ ಮಾಡಿದ್ದೇವೆ. ಅಮೃತ ಯೋಜನೆ ಅಡಿಯಲ್ಲಿ ದಿನದ ಇಪ್ಪತ್ತು ನಾಲ್ಕು ಗಂಟೆ ನೀರು ನೀಡುವ ಯೋಜನೆ ಮಾಡಿದ್ದೇವೆ ಎಂದರು.
ಮತಕ್ಕಾಗಿ ಕೆಲಸ ಮಾಡಿಲ್ಲ: ನಮ್ಮ ಕಾಲದಲ್ಲಿ ಕನಕದಾಸರ ಬಾಡ ಗ್ರಾಮದ ಅಭಿವೃದ್ಧಿ ಆಗಿದೆ. ಯಡಿಯೂರಪ್ಪ ಅವರ ಕಾಲದಲ್ಲಿ ಕಾಗಿನೆಲೆ ಅಭಿವೃದ್ಧಿ ಆಗಿದೆ. ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಮಾಡಿದ್ದೇವೆ. ನಾನು ವೋಟಿಗಾಗಿ ಕೆಲಸ ಮಾಡಿಲ್ಲ. ಈಗ ಆಯಾ ಸಮಾಜಗಳಿಗೆ ಮನವರಿಕೆ ಆಗಿದೆ ಯಾರು ನಮ್ಮವರು ಯಾರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ ಅಂತ ಮನವರಿಕೆ ಆಗಿದೆ ಎಂದರು.
‘ಕುರುಬ ಸಮುದಾಯದವರು ಬಸವರಾಜ ಬೊಮ್ಮಾಯಿಗೆ ಮತ ಹಾಕಬೇಡಿ’ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾವುದೇ ಸಮುದಾಯ ಒಂದು ಪಕ್ಷದ ಪರವಾಗಿ ಇರುವುದಿಲ್ಲ. ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಇದರ ಅರ್ಥ ಏನು? ಅವರ ಅಭ್ಯರ್ಥಿಗೆ ಅವರ ಸಮಾಜ ಮತ ಹಾಕುತ್ತಿಲ್ಲ ಅಂತ ಅರ್ಥ. ಅಂದರೆ ಈಗಾಗಲೇ ಅವರು ಬಿಜೆಪಿಗೆ ಮತ ಹಾಕುತ್ತಿದ್ದಾರೆ ಅಂತ ಅರ್ಥ ಅಲ್ಲವಾ? ಎಂದು ಉತ್ತರಿಸಿದರು.
ಗೋಗರೆದು ದುಡ್ಡು ತಂದಿಲ್ಲ: ‘ಮೋದಿ ತಾಳಕ್ಕೆ ಬೊಮ್ಮಾಯಿ ಡ್ಯಾನ್ಸ್’ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, ‘ನರೇಂದ್ರ ಮೋದಿಯವರ ಸರ್ಕಾರದಲ್ಲಿ ಒಂದು ವ್ಯವಸ್ಥೆ ಇದೆ. ತನ್ನಿಂದ ತಾನೇ ಯೋಜನೆಗಳು ಅನುಷ್ಠಾನ ಆಗುತ್ತವೆ. ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದಂತೆ ಸಲಾಮ್ ಹೊಡೆದು, ಗೋಗರೆದು ದುಡ್ಡು ತರುವ ಅಗತ್ಯವಿಲ್ಲ. ಸ್ಮಾರ್ಟ್ ಸಿಟಿಗೆ ಅನುದಾನ ಬಂದಿದೆ. ಯಾರಾದರೂ ಹೋಗಿ ಅರ್ಜಿ ಕೊಟ್ಟಿದ್ದರಾ? 3000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಾಗಿದೆ. ಕೇಂದ್ರದಲ್ಲಿ ಕೆಲಸ ಮಾಡುವ ಹೊಸ ಸಂಸ್ಕೃತಿ ಇದೆ. ವ್ಯಕ್ತಿಗತ ಅಭಿವೃದ್ಧಿಗಿಂತ ವ್ಯವಸ್ಥೆ ಮೇಲೆ ಅಭಿವೃದ್ಧಿ ನರೇಂದ್ರ ಮೋದಿ ತಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಹತ್ತು ವರ್ಷ ಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.