ADVERTISEMENT

ಸುರಪುರ: ಅಭ್ಯರ್ಥಿಗಳ ಗೆಲುವಿಗೆ ಹರಕೆ ಹೊತ್ತ ಅಭಿಮಾನಿಗಳು

ಅಶೋಕ ಸಾಲವಾಡಗಿ
Published 1 ಮೇ 2024, 4:52 IST
Last Updated 1 ಮೇ 2024, 4:52 IST
ಸುರಪುರದ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜೂಗೌಡ ಗೆಲುವಿಗೆ ಬೆಂಬಲಿಗರು ಮೈಲಾಪುರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು
ಸುರಪುರದ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜೂಗೌಡ ಗೆಲುವಿಗೆ ಬೆಂಬಲಿಗರು ಮೈಲಾಪುರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು   

ಸುರಪುರ: ವಿಧಾನಸಭೆ ಉಪ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕೈಗೊಳ್ಳುತ್ತಿರುವ ಹರಕೆಗಳು ಜೋರು ಪಡೆದುಕೊಂಡಿವೆ.

ದೀಡ್ ನಮಸ್ಕಾರ ಹಾಕುವುದು, ಗೆದ್ದು ಬಂದರೆ ತಮ್ಮ ಇಷ್ಟದ ದೇವರಿಗೆ ದೇಣಿಗೆ ನೀಡುವುದು, ತಮಗೆ ಜನಿಸುವ ಮಗುವಿಗೆ ತಮ್ಮ ನಾಯಕನ ಹೆಸರು ಇಡುವುದು, ಪಾದಯಾತ್ರೆ ಮಾಡುವುದು ಇತರ ವೈವಿಧ್ಯಮಯ ಹರಕೆ ಹೊರುವುದು ಮತ್ತು ತೀರಿಸುವುದು ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಲವಾರು ಕಾರ್ಯಕರ್ತರು ತಮ್ಮ ಕೈಗಳ ಮೇಲೆ, ಎದೆಯ ಮೇಲೆ ತಮ್ಮ ನಾಯಕರ ಹಚ್ಚೆ ಹಾಕಿಸಿಕೊಂಡು ಅದನ್ನು ಪ್ರದರ್ಶಿಸುತ್ತಾ ಮತಯಾಚನೆ ಮಾಡುವ ಅಭಿಮಾನದ ಪರಾಕಾಷ್ಠೆ ಎಲ್ಲೆಡೆ ಕಂಡು ಬರುತ್ತಿದೆ.

ADVERTISEMENT

ನಗರದ ಉದ್ದಾರ ಓಣಿಯ ಬಿಜೆಪಿ ಮುಖಂಡರಾದ ರಮೇಶಗೌಡ, ಗಣೇಶ ಜಿ.ಕೆ., ಮಂಜುನಾಥ ಚಿನ್ನಗುಡಿ ಇತರರು ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ತಮ್ಮ ಅಭ್ಯರ್ಥಿ ರಾಜೂಗೌಡ ಗೆಲುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ದೇವಿಕೇರಾ ಗ್ರಾಮದ ಯಲ್ಲಪ್ಪ ಕೊಡವೆಬೋವಿ ಎಂಬ ರಾಜೂಗೌಡ ಅಭಿಮಾನಿ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಕೆರೆ ಯಲ್ಲಮ್ಮ ದೇವಸ್ಥಾನದ ವರೆಗೆ ದೀಡ್ ನಮಸ್ಕಾರ ಹಾಕಿದ್ದಾರೆ.
ದೇವರಗೋನಾಲ ಗ್ರಾಮದ ಪರಶುರಾಮ ತೋಟಪ್ಪನವರು, ಹಣಮಂತ್ರಾಯ ಶೆಟ್ಟಿಕೇರಾ ಎಂಬ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಗೆಲುವಿಗೆ ಅಂಜನಾದ್ರಿ ಬೆಟ್ಟದವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭಿಮಾನಿ ಮಹಾದೇವಪ್ಪ ಚನ್ನೂರ ಎಂಬಾತ ಕರಡಕಲ್ ಗ್ರಾಮದಿಂದ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ತಮ್ಮ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ವಿಜಯಿಶಾಲಿಯಾಗಲೆಂದು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ. ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ಅಭಿಮಾನಿಯೊಬ್ಬ ರಾಜಾ ವೇಣುಗೋಪಾಲ ನಾಯಕ ಆರಿಸಿ ಬಂದರೆ ತನಗೆ ಜನಿಸುವ ಮಗುವಿಗೆ ಅವರ ಹೆಸರು ಇಡುವುದಾಗಿ ಹರಕೆ ಹೊತ್ತಿದ್ದು ಕ್ಷೇತ್ರದ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್ ಅಭಿಮಾನಿಯೊಬ್ಬ ರಾಜನಕೋಳೂರು ಗ್ರಾಮದಿಂದ ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ 50 ಕಿ.ಮೀ. ದೀಡ್ ನಮಸ್ಕಾರದ ಹರಕೆ ತೀರಿಸಿದ್ದಾನೆ. ಕೊಡೇಕಲ್‍ದ ಕಾರ್ಯಕರ್ತನೊಬ್ಬ ತಮ್ಮ ನಾಯಕ ರಾಜಾ ವೇಣುಗೋಪಾಲ ನಾಯಕ ಅವರ ಗೆಲುವಿಗೆ ನಾರಾಯಣಪುರದ ಗಡೇ ದುರ್ಗಮ್ಮ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿದ್ದಾನೆ.

ಇನ್ನು ಕೆಲವರು ತಮ್ಮ ಅಭ್ಯರ್ಥಿ ಗೆಲ್ಲಬೇಕೆಂದು ವಿವಿಧ ದೇವಾಲಯಗಳಲ್ಲಿ 101 ಮತ್ತು ಅದಕ್ಕಿಂತ ಹೆಚ್ಚು ತೆಂಗಿನಕಾಯಿಗಳನ್ನು ಒಡೆದಿದ್ದಾರೆ. ಈಚೆಗೆ ತಾಲ್ಲೂಕಿನ ವಿವಿಧೆಡೆ ನಡೆದ ಜಾತ್ರೆಯ ರಥೋತ್ಸವಗಳಲ್ಲಿ ಹಣ್ಣುಗಳ ಮೇಲೆ ತಮ್ಮ ಅಭ್ಯರ್ಥಿಗಳ ಹೆಸರು ಬರೆದು ರಥದ ಮೇಲೆ ಎಸೆದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಾರ್ಯಕರ್ತರು ತಾವು ಹರಕೆ ತೀರಸುವಾಗ ತಮ್ಮ ನಾಯಕರು ಜೊತೆಗಿರಬೇಕೆಂದು ಬಯಸುತ್ತಿದ್ದಾರೆ. ಸಾಧ್ಯವಾದೆಡೆಯಲ್ಲೆಲ್ಲ ರಾಜೂಗೌಡ ಮತ್ತು ವೇಣುಗೋಪಾಲ ನಾಯಕ ಅವರು ತಮ್ಮ ತಮ್ಮ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಇಂತಹ ವಿಡಿಯೋಗಳಿಗೆ ಸಿನಿಮಾದ ಜನಪ್ರಿಯ ಹಾಡುಗಳನ್ನು ಜೋಡಿಸಿ ಹರಿಬಿಡಲಾಗುತ್ತಿದೆ. ಈ ವಿಡಿಯೋಗಳೂ ಸಕತ್ ಜನಪ್ರಿಯತೆ ಪಡೆದುಕೊಂಡಿವೆ.

ಕಾರ್ಯಕರ್ತರ ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ಅವರು ಹರಕೆ ತೀರಿಸುವ ಸಮಯದಲ್ಲಿ ಸಾಧ್ಯವಾದರೆ ಅಭ್ಯರ್ಥಿ ಜೊತೆಗೆ ಇರುತ್ತೇವೆ. ಇಂತಹ ಹರಕೆಗಳು ನಮ್ಮಲ್ಲಿ ಉತ್ಸಾಹ ಮೂಡಿಸುತ್ತವೆ.
ರಾಜಾ ಹನುಮಪ್ಪನಾಯಕ ತಾತಾ, ಬಿಜೆಪಿ ಮುಖಂಡ
ನಮ್ಮ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರ ಗೆಲುವಿಗೆ ಹರಕೆ ಹೊತ್ತುಕೊಂಡ ಅಭಿಮಾನಿಗಳಿಗೆ ಚಿರಋಣಿಯಾಗಿದ್ದೇವೆ. ನಮ್ಮ ಅಭ್ಯರ್ಥಿ ಗೆಲುವಿನ ನಂತರ ಅಂತವರೆಲ್ಲರನ್ನೂ ಗೌರವಿಸುವ ಉದ್ದೇಶ ಇದೆ.
ಎಸ್. ನಿಂಗರಾಜ ಬಾಚಿಮಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ
ಸುರಪುರದ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವಿಗೆ ಅಭಿಮಾನಿ ಮಹಾದೇವಪ್ಪ ಚನ್ನೂರ ದೀಡ್ ನಮಸ್ಕಾರ ಹಾಕುತ್ತ ಹೊರಟ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.