ಮಂಡ್ಯ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಜೊತೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದಲೂ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಮಂಡ್ಯದ ಸ್ಥಳೀಯ ನಾಯಕರೇ ಸ್ಪರ್ಧೆ ಮಾಡುವಂತೆ ಅವರನ್ನು ಒತ್ತಾಯಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಬಗ್ಗೆ ತಿಂಗಳ ಹಿಂದೆಯೇ ಚರ್ಚೆ ಹುಟ್ಟಿಕೊಂಡಿತ್ತು, ಕುಮಾರಸ್ವಾಮಿ ಮಂಡ್ಯದಿಂದಲೂ ಸ್ಪರ್ಧಿಸುತ್ತಾರೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಸುಮಲತಾ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಗರಿಗೆದರಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಎಚ್‌ಡಿಕೆ ಚನ್ನಪಟ್ಟಣದಿಂದ ಮಾತ್ರ ಸ್ಪರ್ಧಿಸಲಾಗುವುದು ಎಂದಿದ್ದರು, ಅಲ್ಲಿಂದ ಚರ್ಚೆ ತಣ್ಣಗಾಗಿತ್ತು.
ಆದರೆ, ಕಳೆದೆರಡು ದಿನಗಳಿಂದ ಕುಮಾರಸ್ವಾಮಿ ಮಂಡ್ಯದಿಂದಲೂ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮತ್ತೆ ಹರಿದಾಡುತ್ತಿದೆ. ಅದಕ್ಕೆ ಕಾರಣ ಮಂಡ್ಯ ಕ್ಷೇತ್ರದಲ್ಲಿರುವ ಟಿಕೆಟ್ ಬದಲಾವಣೆಯ ಕಗ್ಗಂಟು. ಜೆಡಿಎಸ್ ಮೊದಲ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದಿಂದ ಶಾಸಕ ಎಂ.ಶ್ರೀನಿವಾಸ್ ಅವರ ಹೆಸರು ಘೋಷಣೆ ಮಾಡಿತ್ತು. ನಂತರ ಅವರ ಅನಾರೋಗ್ಯದ ಕಾರಣದಿಂದಾಗಿ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಅವರಿಗೆ ಕ್ಷೇತ್ರ ಬಿಟ್ಟಕೊಡುವಂತೆ ಕೋರಲಾಗಿತ್ತು.
ಇದಕ್ಕೊಪ್ಪದ ಶ್ರೀನಿವಾಸ್ ತಮ್ಮನ್ನೇ ಮುಂದುವರಿಸಬೇಕು, ಇಲ್ಲ ತಮ್ಮ ಅಳಿಯ, ಜಿ.ಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಅವರಿಗೆ ಟಿಕೆಟ್ ನೀಡಬೇಕು ಎಂದು ಈಗ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಗೊಂದಲ ನಿವಾರಣೆಗೆ ಸ್ಥಳೀಯ ಮುಖಂಡರು ಚನ್ನಪಟ್ಟಣದ ಜೊತೆಗೆ ಮಂಡ್ಯದಲ್ಲೂ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಮಂಡ್ಯದಿಂದಲೂ ಸ್ಪರ್ಧಿಸುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯ ಮಾಡಿರುವುದು ನಿಜ. ಸೋಮವಾರ ಬೆಳಿಗ್ಗೆ ಅಂತಿಮ ನಿರ್ಧಾರ ತಿಳಿಸುವುದಾಗಿ ಅವರು ಹೇಳಿದ್ದಾರೆ, ಅವರ ಉತ್ತರಕ್ಕೆ ಕಾಯುತ್ತಿದ್ದೇವೆ’ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಕಾದು ನೋಡುವ ತಂತ್ರ: ಜೆಡಿಎಸ್ ಟಿಕೆಟ್ ಬದಲಾವಣೆಯಾಗುವ ಸಾಧ್ಯತೆ ಬಗ್ಗೆ ಕಾಂಗ್ರೆಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಜೆಡಿಎಸ್ ಟಿಕೆಟ್ ಬದಲಾಗಿ ಎಚ್‌ಡಿಕೆ ಸ್ಪರ್ಧಿಸಿದರೆ ಕಾಂಗ್ರೆಸ್ ಟಿಕೆಟ್ ಕೂಡ ಬದಲಾಗಲಿದೆ. ಬಿಜೆಪಿಯಲ್ಲೂ ಇಂಥದ್ದೇ ಬೆಳವಣಿಗೆಗಳು ನಡೆಯುತ್ತಿವೆ. ಇದರಿಂದಾಗಿಯೇ ಈವರೆಗೆ ಯಾರೂ ನಾಮಪತ್ರ ಸಲ್ಲಿಸುವ ದಿನಾಂಕ ಪ್ರಕಟಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.