ವಿಜಯಪುರ: ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂಬುದು ಮೊದಲೇ ಗೊತ್ತಿದ್ದೂ ಆತನಿಗೆ ಲೋಕಸಭೆ ಟಿಕೆಟ್ ಕೊಟ್ಟು, ಚುನಾವಣೆ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಗುಜರಾತ್ ಶಾಸಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆಯಿಂದ ಸಂಜೆ ವರೆಗೆ ಯಾರು ಭಾರತ ಮಾತಾಕೀ ಜೈ ಎನ್ನುತ್ತಿದ್ದಾರೋ ಅವರ ಬೆಂಬಲಿತರು ಮಾಡಿರುವ ಅಸಹ್ಯ ಕೃತ್ಯ ಇದಾಗಿದೆ. ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ ಇತಿಹಾಸದಲ್ಲೇ ಇದೊಂದು ಕಂಡು ಕೇಳರಿಯದ ಕಳಂಕಿತ ಅಧ್ಯಾಯವಾಗಿದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಮಾಡಿರುವ ಹೇಯ ಕೃತ್ಯ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ. ಇಂತಹ ಕಾಮುಕನಿಗೆ ಬಿಜೆಪಿ ಬೆಂಬಲ ನೀಡಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಯ ನಿಜವಾದ ಮುಖ ಇದಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಹಿಳೆಯರ ಬಗ್ಗೆ ಕನಿಷ್ಠ ಗೌರವ ಇಲ್ಲ ಎಂಬುದು ಮತ್ತೊಮ್ಮೆ ಈ ಘಟನೆಯಿಂದ ಸಾಬೀತಾಗಿದೆ. ಇದು ಭಾರತದ ಎಲ್ಲ ಮಹಿಳೆಯರ ಮೇಲೆ ನಡೆದ ಬಲತ್ಕಾರವಾಗಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಖಂಡಿಸಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮಾಡಿದರೂ ಪ್ರಧಾನಿ ಸ್ಪಂದಿಸಲಿಲ್ಲ.
ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದರೂ ಪ್ರಧಾನಿ ಸ್ಪಂದಿಸಲಿಲ್ಲ, ಗುಜರಾತ್‌ನಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಜೈಲಿನಿಂದ ಕರೆತರುವಾಗ ಸಂಭ್ರಮದಿಂದ ಸ್ವಾಗತಿಸಿದರೂ ಪ್ರಧಾನಿ ಕಣ್ತೆರೆಯಲಿಲ್ಲ. ಇದುವೇ ಪ್ರಧಾನಿ ಮೋದಿ ಹಾಗೂ ಬಿಜೆಪಿ, ಆರ್‌ಎಸ್‌ಎಸ್‌ನ ನಿಜವಾದ ಮುಖ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಈ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾಪಿಸಲು ಯಾವುದೇ ವಿಷಯ ಇಲ್ಲದ ಕಾರಣ ಮೀಸಲಾತಿ ವಿಷಯ ಇಟ್ಟುಕೊಂಡು ಮುಸ್ಲಿಂ, ದಲಿತ, ಹಿಂದುಳಿದ ಸಮುದಾಯಗಳ ನಡುವೆ ಒಡಕು ಉಂಟುಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಸಮುದಾಯಕ್ಕೆ ಅಂಬೇಡ್ಕರ್ ಬಗ್ಗೆ ಅಭಿಮಾನ ಇರುವಂತೆ, ಲಿಂಗಾಯತರಿಗೆ ಬಣವಣ್ಣನ ಬಗ್ಗೆ ಅಪಾರ ಗೌರವ ಇದೆ. ಇಬ್ಬರೂ ಅಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಆದ್ದರಿಂದ ಎರಡೂ ಸಮುದಾಯದ ಜನರು ಬಿಜೆಪಿ ಕುತಂತ್ರಕ್ಕೆ ಬಲಿಯಾಗದೇ ಸೌಹಾರ್ದ ಕಾಪಾಡಬೇಕು ಎಂದರು.
ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಯ ಧರ್ಮ, ಜಾತಿ ನೋಡದೇ ಕಾನೂನು ಕ್ರಮ ಕೈಗೊಂಡಿದೆ. ಜಾತಿ, ಧರ್ಮದ ಆಧಾರದ ಮೇಲೆ ರಕ್ಷಣೆ ನೀಡುವ ಪ್ರಶ್ನೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಆದರೆ, ಬಿಜೆಪಿ ಇದಕ್ಕೆ ಧಾರ್ಮಿಕ ಬಣ್ಣ ಲೇಪನ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಪ್ರಧಾನಿ, ಬಿಜೆಪಿಗೆ ಈ ಚುನಾವಣೆಯಲ್ಲಿ ಅಭಿವೃದ್ಧಿ ಪರ ಮಾತನಾಡಲು ಯಾವುದೇ ವಿಷಯ ಇಲ್ಲ, 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಕೊಟ್ಟಿದ್ದಾರೆಯೇ ಎಂಬುದಾಗಲಿ, ರೈತರ ಆದಾಯ ದ್ವಿಗುಣ ಮಾಡಿದ್ದೇವೆ ಎಂಬ ವಿಷಯವನ್ನಾಗಲಿ ಮುಂದಿಟ್ಟ ಮತ ಕೇಳಬೇಕಿತ್ತು. ಆದರೆ, ಹಿಂದು– ಮುಸ್ಲಿಂ, ಭಾರತ – ಪಾಕಿಸ್ತಾನ, ಮಂದಿರ– ಮಸೀದಿ ಈ ವಿಷಯ ಎತ್ತಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರಕ್ಕೆ ಕೈಹಾಕುತ್ತಾರೆ ಎಂದು ಮೋದಿ ಕೀಳುಮಟ್ಟದ ಮಾತುಗಳನ್ನಾಡುತ್ತಿದ್ದಾರೆ. ದೆಹಲಿಯಲ್ಲಿ ನಡೆದ ರೈತ ಚಳವಳಿಯಲ್ಲಿ 700 ರೈತರು ಅಸುನೀಗಿದರು. ಆ ರೈತರ ಪತ್ನಿಯರ ಮಂಗಳಸೂತ್ರದ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯ ಅವಾಂತರಗಳಿಂದ ದೇಶದ ಜನ ರೋಸಿ ಹೋಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಸರ್ಕಾರ ರಚನೆಯಾಗಲಿದೆ. ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಭರವಸೆ ಈಡೇರಿಸಿರುವಂತೆ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.