ADVERTISEMENT

ಬಡವರ ‘ಗ್ಯಾರಂಟಿ‘ ಪ್ರಶ್ನಿಸುವವರು ಶ್ರೀಮಂತರ ಸಾಲಮನ್ನಾ ಬಗ್ಗೆ ಮೌನ: ಎಚ್‌. ಕೆ. ಪಾಟೀಲ

ಪಿಟಿಐ
Published 2 ಮೇ 2023, 13:05 IST
Last Updated 2 ಮೇ 2023, 13:05 IST
ಎಚ್‌. ಕೆ. ಪಾಟೀಲ
ಎಚ್‌. ಕೆ. ಪಾಟೀಲ   

ಗದಗ : ಬಡವರಿಗೆ ನೀಡುವ ‘ಗ್ಯಾರಂಟಿ‘ ಬಗ್ಗೆ ಪ್ರಶ್ನೆ ಮಾಡುವವರು ಶ್ರೀಮಂತರ 'ಸಾಲಮನ್ನಾ‘ದ ಬಗ್ಗೆ ಮೌನ ವಹಿಸಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್‌ ಹಿರಿಯ ನಾಯಕ ಎಚ್‌. ಕೆ. ಪಾಟೀಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಎಚ್‌. ಕೆ. ಪಾಟೀಲ್‌ ಚುನಾವಣಾ ಸಿದ್ದತೆ ಮತ್ತು ಬದ್ಧತೆ ಬಗ್ಗೆ ಮಾತನಾಡಿದ್ದಾರೆ. ‘ಇವತ್ತಿನ ಚುನಾವಣಾ ಪ್ರಚಾರವು ಎಷ್ಟು ಕೆಳಮಟ್ಟಿಗೆ ಇಳಿದಿದೆ ಎಂದರೆ ಇದು ಒಂದು ಪ್ರಜಾಪ್ರಭುತ್ವ ದೇಶಕ್ಕೆ ಒಳ್ಳೆಯದಲ್ಲ‘ ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ನೀಡಿದ್ದು, ಇದರ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್‌. ಕೆ. ಪಾಟೀಲ್‌, ‘ಚುನಾವಣೆ ಪ್ರಣಾಳಿಕೆಗಳು ಬಡವರ ಪರವಾಗಿ ಇದ್ದರೆ ಸಾಕು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಕೇಂದ್ರ ಸರ್ಕಾರವು 523 ಕೈಗಾರಿಕಾ ಸಂಸ್ಥೆಗಳ 10 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವುದನ್ನು ಯಾರಾದರೂ ಪ್ರಶ್ನಿಸಿರುವುದು ನೋಡಿದ್ದೀರಾ? ಶ್ರೀಮಂತರ ಸಾಲಮನ್ನಾ ಮಾಡಿದಾಕ್ಷಣ ಮೌನವಾಗುವ ಜನರು ಬಡವರಿಗೆ ನೀಡುವ ಸವಲತ್ತುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇದು ನಿಜಕ್ಕೂ ದುರದೃಷ್ಟಕರ‘ ಎಂದು ಹೇಳಿದರು.

ADVERTISEMENT

ಈ ರೀತಿಯ ಭರವಸೆಗಳು ಬಡವರನ್ನು ಸಶಕ್ತರಾಗಿ ಮಾಡುವುದಕ್ಕಿಂತ ಬಡವರಾಗಿಯೇ ಉಳಿಯುವಂತೆ ಮಾಡುತ್ತದೆಯಲ್ಲವಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಡವರನ್ನು ಸಶಕ್ತರಾಗಿ ಮಾಡುವುದರ ಬಗ್ಗೆ ನಾವು ಪ್ರಯತ್ನಿಸುತ್ತೇವೆ. ಆದರೆ ಮೊದಲು ಅವರಿಗೆ ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ದೊರೆಯಲಿ. ಅದಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ. ಬೆಲೆ ಏರಿಕೆ, ಹಣದುಬ್ಬರದಂತಹ ಸಮಸ್ಯೆಗಳಿಂದ ಬಡವರು ಕುಗ್ಗಿ ಹೋಗಿದ್ದಾರೆ‘ ಎಂದರು.

ನೀವು ಸಿಎಂ ರೇಸ್‌ನಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ. ಆ ಬಗ್ಗೆ ಯೋಚಿಸುವ ಅಗತ್ಯವಿಲ್ಲ‘ ಎಂದು ಹೇಳಿದರು.

‘ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಬಲ ತುಂಬಿದ್ದಾರೆ. ಲಿಂಗಾಯತ ಪ್ರಾಬಲ್ಯವಿರುವ ಬಾಂಬೆ-ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 56 ಸ್ಥಾನಗಳಲ್ಲಿ 36 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಗದಗ ಜಿಲ್ಲೆಯ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್‌ ಪಾಲಾಗಲಿದೆ. ಕಾಂಗ್ರೆಸ್‌ ಈ ಬಾರಿ ಮ್ಯಾಜಿಕ್ ನಂಬರ್‌ ದಾಟುವುದು ಖಚಿತ. ಕಾಂಗ್ರೆಸ್‌ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.