ಬೆಂಗಳೂರು: ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ಬುಗಿಲೆದ್ದಿದೆ. ಈ ಬಗ್ಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯನ್ನು ಚುರುಕುಗೊಳಿಸಿದೆ.
ವಿಡಿಯೊದಲ್ಲಿ ಇದ್ದಾರೆ ಎನ್ನಲಾದ ಐವರು ಸಂತ್ರಸ್ತೆಯರನ್ನು ಕರೆಯಿಸಿಕೊಂಡಿದ್ದ ಎಸ್ಐಟಿ ತನಿಖಾ ತಂಡದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
‘ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಸಂಪೂರ್ಣ ತನಿಖೆಯನ್ನು ನಡೆಸಿ ಕ್ರಮಕೈಗೊಳ್ಳಲಿ. ಬಿಟ್ ಕಾಯಿನ್ ಹಾಗೂ ಪಿಎಸ್ಐ ಹಗರಣದ ತನಿಖೆಯಂತೆ ಗಾಳಿಯಲ್ಲಿ ಗುಂಡು ಹಾರಿಸದೆ, ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ ಜೆಡಿಎಸ್ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ.
ಆರೋಪಿ ವಿರುದ್ಧ ಕಾನೂನಿನ ಸಂಪೂರ್ಣ ಬಲ ಪ್ರಯೋಗಿಸಿ, ಕಠಿಣ ಕ್ರಮಕ್ಕೆ ಬಿಜೆಪಿ ಒತ್ತಾಯಿಸುತ್ತದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಬಿಜೆಪಿ ಶೂನ್ಯ ಸಹಿಷ್ಣುತೆ ಹೊಂದಿದೆ. ಇದೇ ವೇಳೆ, ಕಾಂಗ್ರೆಸ್ ದ್ವಂದ್ವ ನೀತಿ ಪ್ರದರ್ಶಿಸುತ್ತಿದ್ದು, ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದೆ ಎಂದು ದೂರಿದ್ದಾರೆ. ಕೆಲವು ತಿಂಗಳ ಹಿಂದೆಯೇ ಲೈಂಗಿಕ ಹಗರಣದ ಬಗ್ಗೆ ಕರ್ನಾಟಕಕ್ಕೆ ಸರ್ಕಾರಕ್ಕೆ ತಿಳಿದಿದ್ದರೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಿಲ್ಲವೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.