ADVERTISEMENT

ನೇಹಾ ಕೊಲೆ ಪ್ರಕರಣ ಸಿಬಿಐಗೆ ಸಿಕ್ಕರೆ ಅಪರಾಧಿಯನ್ನು ಉಲ್ಟಾ ನೇತುಹಾಕುತ್ತೇವೆ: ಶಾ

​ಪ್ರಜಾವಾಣಿ ವಾರ್ತೆ
Published 3 ಮೇ 2024, 12:39 IST
Last Updated 3 ಮೇ 2024, 12:39 IST
<div class="paragraphs"><p>ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರತ್ತ ಕೈಬೀಸಿದರು. ರಮೇಶ ಕತ್ತಿ, ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ ಇತರರು ಜತೆಯಾದರು</p></div>

ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರತ್ತ ಕೈಬೀಸಿದರು. ರಮೇಶ ಕತ್ತಿ, ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ ಇತರರು ಜತೆಯಾದರು

   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ‘ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಒತ್ತಡ ಹೇರಲಾಗಿತ್ತು ಎಂದು ಅವರ ಪಾಲಕರು ಖುದ್ದಾಗಿ ನನಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಸರಿಯಾಗಿ ತನಿಖೆ ಮಾಡಬೇಕು. ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದರು.

ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಇದು ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಎಂದು ಕಾಂಗ್ರೆಸ್‌ ಸರ್ಕಾರ ಮುಚ್ಚಿ ಹಾಕುವ ಯತ್ನದಲ್ಲಿದೆ. ಪ್ರಕರಣ ಸಿಬಿಐಗೆ ಸಿಕ್ಕರೆ ಅಪರಾಧಿಯನ್ನು ಉಲ್ಟಾ ನೇತುಹಾಕುತ್ತೇವೆ’ ಎಂದರು.

ADVERTISEMENT

‘ಚಿಕ್ಕೋಡಿ ಅಭ್ಯರ್ಥಿ ಅಣ್ಣಾಸಾಹೇಬ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಆದರೆ, ಎದುರಾಳಿ ಅಭ್ಯರ್ಥಿಯ ಕುಟುಂಬ ಅಕ್ರಮ ಚಟುವಟಿಕೆ ನಡೆಸುತ್ತಿದೆ. ಗುಡ್ಡ ಒಡೆದು ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. ಕಳ್ಳಬಟ್ಟಿ ಅಡ್ಡೆಗಳನ್ನು ‍ಪೋಷಿಸಿದ್ದಾರೆ. ಸಾವಿರಾರು ಎಕರೆ ಭೂಮಿ ಕಬಳಿಸಿದ್ದಾರೆ. ಹಫ್ತಾ ವಸೂಲಿ ಮಾಡುವ ಏಜೆಂಟರನ್ನೂ ಸಾಕಿದ್ದಾರೆ’ ಎಂದು ಅಮಿತ್‌ ಶಾ ಆರೋಪ ಮಾಡಿದರು.

‘ಛತ್ರಪತಿ ಶಿವಾಜಿ, ಸಂಭಾಜಿ ಅವರನ್ನು ನಿಂದಿಸಿದವರು, ಹಿಂದೂ ಧರ್ಮ– ಸಂಸ್ಕೃತಿಯನ್ನು ಅವಹೇಳನ ಮಾಡಿದವರನ್ನು ಸೋಲಿಸಿ’ ಎಂದೂ ಹೇಳಿದರು.

ಪೊಲೀಸರನ್ನು ಗದರಿಸಿದ ಶಾ: ವೇದಿಕೆ ಎಡಭಾಗದಲ್ಲಿದ್ದ ಪೊಲೀಸರು ಜನರನ್ನು ಅತ್ತಿಂದಿತ್ತ ಓಡಾಡಿಸುತ್ತಿದ್ದರು. ಇದನ್ನು ಕಂಡು ಅಮಿತ್‌ ಶಾ ಗರಂ ಆದರು.

‘ಪೊಲೀಸರೇ, ನಿಮಗೇನು ಸಮಸ್ಯೆ. ಕಾರ್ಯಕ್ರಮ ಸರಿಯಾಗಿಯೇ ನಡೆಯುತ್ತಿದೆ. ವಿನಾಕಾರಣ ಏಕೆ ಅಡ್ಡಿ ಮಾಡುತ್ತಿದ್ದೀರಿ. ಜನರನ್ನು ಹಾಗೇ ಇರಲು ಬಿಡಿ’ ಎಂದರು.

ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಗೈರು ಎದ್ದು ಕಾಣುತ್ತಿತ್ತು. ವಿಧಾನ ಪರಿಷತ್‌ ಮಾಜಿ ಸದಸ್ಯ, ಕುರುಬ ಸಮಾಜದ ನಾಯಕ ವಿವೇಕರಾವ್ ಪಾಟೀಲ ಅವರನ್ನು ಅಮಿತ್ ಶಾ ಬಿಜೆಪಿಗೆ ಬರಮಾಡಿಕೊಂಡರು.

ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣ ಕೇಳಲು ಅಪಾರ ಸಂಖ್ಯೆಯ ಜನ ಸೇರಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.