ADVERTISEMENT

ನಾನು ಟಿಕೆಟ್‌ ಆಕಾಂಕ್ಷಿ ಆಗಿರಲಿಲ್ಲ, ರಮೇಶ್‌ ಗೆಲುವಿಗೆ ಶ್ರಮ: ಎ.ಟಿ. ರಾಮಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 14:05 IST
Last Updated 12 ಏಪ್ರಿಲ್ 2023, 14:05 IST
ಎ.ಟಿ. ರಾಮಸ್ವಾಮಿ
ಎ.ಟಿ. ರಾಮಸ್ವಾಮಿ   

ಹಾಸನ: ‘ಯಾವುದೇ ಫಲಾಪೇಕ್ಷೆ ಇಲ್ಲದೆ ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಈ ಬಾರಿ ನಾನು ಟಿಕೆಟ್‌ ಆಕಾಂಕ್ಷಿ ಆಗಿರಲಿಲ್ಲ. ಆದರೆ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ನನಗೆ ಅನ್ಯಾಯವಾಗಿದೆ ಎಂಬ ಆಪಾದನೆ ಸತ್ಯಕ್ಕೆ ದೂರವಾಗಿದೆ’ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಕಲಗೂಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯೋಗಾ ರಮೇಶ ಅವರನ್ನು ಕೇಂದ್ರ ನಾಯಕರು ಆಯ್ಕೆ ಮಾಡಿದ್ದು, ಅವರ ಗೆಲುವಿಗೆ ಶ್ರಮಿಸುತ್ತೇನೆ. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ’ ಎಂದರು.

‘ಬಿಜೆಪಿ ಸೇರ್ಪಡೆ ನಂತರ ನವದೆಹಲಿ, ಬೆಂಗಳೂರು ಹಾಗೂ ಹಾಸನದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟ ನಿಲುವನ್ನು ಕ್ಷೇತ್ರದ ಮತದಾರರಿಗೆ ಹಾಗೂ ನನ್ನ ಕಾರ್ಯಕರ್ತರಿಗೆ ತಿಳಿಸಿದ್ದೇನೆ’ ಎಂದರು.

‘ಆದರೂ ಕೆಲ ಕಿಡಿಗೇಡಿಗಳು, ವಿಧಾನಸಭೆ ಚುನಾವಣೆ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ರಾಮಸ್ವಾಮಿಯವರಿಗೆ ಅನ್ಯಾಯವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

‘ಬಿಜೆಪಿ ಸೇರುವ ವೇಳೆ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ಆದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ನಾನು ಪಕ್ಷವನ್ನು ಸೇರಿದ್ದೇನೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ರಾಜಕೀಯದಿಂದ ತಟಸ್ಥವಾಗಬೇಕು ಎಂದೂ ನಿರ್ಧಾರ ಮಾಡಿದ್ದೆ. ಆದರೆ ಕ್ಷೇತ್ರದ ಜನರಿಗೆ ಹಾಗೂ ಕಾರ್ಯಕರ್ತರಿಗೆ ಧ್ವನಿಯಾಗಿರುವ ನಿಟ್ಟಿನಲ್ಲಿ ಬಿಜೆಪಿ ಪಕ್ಷವನ್ನು ವೇದಿಕೆಯಾಗಿ ಬಳಸಿಕೊಂಡಿದ್ದೇನೆ’ ಎಂದರು.

‘ರಾಜಕೀಯದ ವ್ಯಾಪಾರೀಕರಣ ಸಲ್ಲ’
‘ಇಂದಿನ ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಧಾರಿತ ವ್ಯಕ್ತಿಗಳಿಗೆ ಮನ್ನಣೆಯ ದೊರೆಯುತ್ತಿಲ್ಲ. ಸತ್ಯ, ನ್ಯಾಯ, ಧರ್ಮ ಬಹಳ ದೂರದ ಮಾತಾಗಿದ್ದು, ರಾಜಕೀಯ ವ್ಯಾಪಾರೀಕರಣ ಆಗುತ್ತಿರುವುದು ದುರದೃಷ್ಟಕರ’ ಎಂದು ಎ.ಟಿ. ರಾಮಸ್ವಾಮಿ ವಿಷಾದ ವ್ಯಕ್ತಪಡಿಸಿದರು.

‘ಚುನಾವಣೆ ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಯಬೇಕಾದರೆ ಚುನಾವಣೆ ಪದ್ಧತಿಯಲ್ಲಿ ಸುಧಾರಣೆ ಆಗಬೇಕಿದೆ ಎಂದು ಕೇಂದ್ರದ ಬಿಜೆಪಿ ನಾಯಕರಿಗೂ ತಿಳಿಸಿದ್ದೇನೆ. ರಾಜಕೀಯ ಇಂದು ವ್ಯಾಪಾರವಾಗಿದ್ದು, ಸ್ಪರ್ಧೆ ಮಾಡುವವರು ₹ 50 ರಿಂದ ₹ 60 ಕೋಟಿ ಬಂಡವಾಳ ಹೂಡುತ್ತಾರೆ. ಬಂಡವಾಳವನ್ನು ವಾಪಸ್‌ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ಯೋಗ್ಯರು ರಾಜಕೀಯ ಕ್ಷೇತ್ರಕ್ಕೆ ಬರುವುದು ಕಷ್ಟಕರವಾಗಿದೆ’ ಎಂದು ಹೇಳಿದರು.

‘ಚುನಾವಣೆಯ ಸಂದರ್ಭದಲ್ಲಿ ಹಣ ಮತ್ತು ಜಾತಿ ಹೆಚ್ಚು ಅವಶ್ಯಕತೆಯಾಗಿದ್ದು, ಇದನ್ನು ಹೊರತುಪಡಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕಂತೆ ಚುನಾವಣೆ ನಡೆಯಬೇಕು ಎಂಬುದು ನನ್ನ ಆಶಯ’ ಎಂದರು.

*
ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರು ಅಪೇಕ್ಷೆಪಟ್ಟರೆ, ಆಗ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು.
–ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ

ಇವನ್ನೂ ಓದಿ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.