ಹಾಸನ: ‘ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೋಲಾರದಿಂದ ಮಲ್ಲೇಶ ಬಾಬು ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದರು.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಎಸ್‌ಸಿ, ಎಸ್‌ಟಿ ಘಟಕದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ನನ್ನ ಕೊನೆಗಾಲದಲ್ಲಿ ಬಂದು ಪ್ರಚಾರ ಮಾಡುತ್ತಿದ್ದೇನೆ. ಅಪಪ್ರಚಾರಕ್ಕೆ ಮಣಿಯದೇ ಪ್ರಜ್ವಲ್ ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ’ ಎಂದರು.
‘ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ, ತುಮಕೂರಿನಲ್ಲಿ ವಿ.ಸೋಮಣ್ಣ, ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ, ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಮಗ ಬಿ.ವೈ.ರಾಘವೇಂದ್ರ ಹೀಗೆ... ಎಲ್ಲೆಲ್ಲಿ ನಾನು ಹೋಗಬೇಕು ಎನ್ನುತ್ತಾರೋ ಅಲ್ಲಿಗೆ ಹೋಗುತ್ತೇನೆ. 28 ಕ್ಷೇತ್ರಗಳಲ್ಲೂ ಹೋರಾಟ ಮಾಡುತ್ತೇನೆ’ ಎಂದರು.
‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ಅವರು ಬಿಟ್ಟರೆ ಬೇರೆ ನಾಯಕರು ಯಾರಿದ್ದಾರೆ? ಭಾರತದ ಆರ್ಥಿಕ ಶಕ್ತಿ ಐದರಿಂದ ಮೂರನೇ ಸ್ಥಾನಕ್ಕೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳಿದರೆ, ಸಿದ್ದರಾಮಯ್ಯ ವಿರೋಧಿಸುತ್ತಾರೆ. ಮಮತಾ ಬ್ಯಾನರ್ಜಿಯವರನ್ನೂ ವಿರೋಧಿಸುತ್ತಾರೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಗಿ, ಬಿಜೆಪಿ–ಜೆಡಿಎಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರಾದರೂ ಆಗಲಿ, ಅದು ಆಮೇಲೆ. ಅವರಿಂದ ನಿಮ್ಮ ಕೆಲಸ ಮಾಡಿಸುತ್ತೇನೆ. ಅದು ನನ್ನ ಬದ್ಧತೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.