ಹಾವೇರಿ: ‘ನಿಮ್ಮ ಆಸ್ತಿ ಉಳಿಯಬೇಕೆಂದರೆ ಬಿಜೆಪಿಗೆ ಮತ ಹಾಕಿ, ಸರ್ಕಾರಕ್ಕೆ ಹೋಗಬೇಕೆಂದರೆ ಕಾಂಗ್ರೆಸ್‌ಗೆ ಮತ ಹಾಕಿ. ಈ ಕಾಂಗ್ರೆಸ್ ಸರ್ಕಾರ ರೈತರು, ಮಹಿಳೆಯರು, ದಲಿತರಿಗೆ ಚೆಂಬು ಕೊಟ್ಟಿದೆ. ಮೇ 7ರಂದು ಬಿಜೆಪಿಗೆ ಮತ ಹಾಕುವ ಮೂಲಕ ಮತದಾರರು ಕಾಂಗ್ರೆಸ್‌ಗೆ ಚೆಂಬು ಕೊಡಬೇಕು’ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಮಾರನಬೀಡ, ಕಂಚಿನೆಗಳೂರು, ಮಲಗುಂದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಪಿತ್ರಾರ್ಜಿತ ಆಸ್ತಿ ಮಕ್ಕಳಿಗೆ ಬರಬೇಕಾದರೆ ಶೇ 55ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು’ ಎನ್ನುತ್ತಾರೆ. ಮೊದಲು ತೆರಿಗೆ ಕಟ್ಟುವ ವ್ಯವಸ್ಥೆ ಇತ್ತು. ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ತಮ್ಮ ತಾಯಿಯ ಆಸ್ತಿ ಪಡೆಯಲು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಅನ್ನುವ ಕಾರಣಕ್ಕೆ ಆ ಕಾಯ್ದೆಯನ್ನು ರದ್ದು ಮಾಡಿದರು. ಈಗ ರಾಹುಲ್ ಗಾಂಧಿ ಅದನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಸಮೀಕ್ಷೆ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಅವರ ನಿಲುವು ಏನು ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನೆಹರು ಕುಟುಂಬದ ಆಸ್ತಿ ಮಾತ್ರ ಹೆಚ್ಚಳ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಸೇರಿದಂತೆ ಅನೇಕ ವೀರರು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ಸ್ವಾತಂತ್ರ್ಯದ ಲಾಭ ದೊರೆಯಲಿಲ್ಲ. ಕೇವಲ ನೆಹರೂ, ಗಾಂಧಿ ಕುಟುಂಬಕ್ಕೆ ಮಾತ್ರ ಲಾಭ ಸಿಕ್ಕಿದೆ. ಬಡತನ ನಿರ್ಮೂಲನೆ ಮಾಡುತ್ತೇವೆ ಅಂತ ಇಂದಿರಾ ಗಾಂಧಿ ಹೇಳಿದರು. ಆದರೆ, ಅವರ ಕುಟುಂಬದ ಆಸ್ತಿ ಮಾತ್ರ ಹೆಚ್ಚಳ ಮಾಡಿಕೊಂಡರು. ಅಂಬಾನಿ, ಅದಾನಿಯವರ ಆಸ್ತಿ ಹೆಚ್ಚಳವಾಗುವಂತೆ ಮಾಡಿದವರು ಕಾಂಗ್ರೆಸ್‌ನವರು ಎಂದು ವಾಗ್ದಾಳಿ ನಡೆಸಿದರು.
‘ವರದಿ’ ರಾಜಕಾರಣಕ್ಕೆ ಬಳಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿ ಇಟ್ಟುಕೊಂಡು ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ಇರುವ ವರದಿಯನ್ನೇ ಬಿಡುಗಡೆ ಮಾಡಿಸಲಾಗದ ರಾಹುಲ್ ಗಾಂಧಿ, ದೇಶದಾದ್ಯಂತ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡುವುದಾಗಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಬೊಮ್ಮಾಯಿ ಜರಿದರು.
ಸಿಎಂ ಹೇಳಿಕೆಗೆ ತಿರುಗೇಟು
‘ಪ್ರಲ್ಹಾದ ಜೋಶಿ ಮತ್ತು ಬಸವರಾಜ ಬೊಮ್ಮಾಯಿಗೆ ಮತ ಕೇಳುವ ನೈತಿಕತೆ ಇಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ, ‘ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಮೂರು ಪಟ್ಟು ಹೆಚ್ಚು ಬರ ಪರಿಹಾರ ನೀಡಿದೆ. ಆ ನೈತಿಕತೆ ಮೇಲೆ ಮತ ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಬರ ಪರಿಹಾರ ವರದಿ ಕಳಿಸಿಲ್ಲ. ಅವರಿಗೆ ನೈತಿಕತೆ ಇಲ್ಲ. ಉಗುರಿನಲ್ಲಿ ತೆಗೆಯುವುದಕ್ಕೆ, ಕೊಡಲಿ ತೆಗೆದುಕೊಂಡು ನಿಂತಿದ್ದಾರೆ. ನಮ್ಮ ಕಾಲದಲ್ಲಿ ಪ್ರವಾಹ ಬಂದಾಗ ನಾವು ಕೇಂದ್ರವನ್ನು ನೋಡದೇ ಪರಿಹಾರ ನೀಡಿದ್ದೇವೆ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.