ಬೆಂಗಳೂರು: ದಲಿತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ಗೆ ಅಪಾಯ ಕಾದಿದೆ ಎಂದು ಕೊರಟಗೆರೆ ಶಾಸಕ, ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು, ಕೇಂದ್ರದ ನಾಯಕತ್ವವನ್ನು ಎಚ್ಚರಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ ಪರಮೇಶ್ವರ್ ಕೆಲಸ ಮಾಡಿದ್ದರು. ಅತ್ಯಂತ ದೀರ್ಘಾವಧಿ(8 ವರ್ಷ) ಕೆಪಿಸಿಸಿ ಅಧ್ಯಕ್ಷರಾಗಿ ಸಹ ಕೆಲಸ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಘೋಷಿಸಿದ ಸ್ವಲ್ಪ ಸಮಯದ ಬಳಿಕ ಪರಮೇಶ್ವರ್ ಈ ಎಚ್ಚರಿಕೆ ನೀಡಿದ್ದಾರೆ.
ನಾನೊಬ್ಬನೇ ಡಿಸಿಎಂ ಆಗಿರಬೇಕೆಂದು ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಷರತ್ತು ಇಟ್ಟಿದ್ದಾರೆ ಎನ್ನಲಾಗಿದೆ ಎಂಬ ಮಾತಿಗೆ ಉತ್ತರಿಸಿದ ಅವರು, ಶಿವಕುಮಾರ್ ಅವರ ದೃಷ್ಟಿಯಿಂದ ಅದು ಸರಿ ಇರಬಹುದು. ಆದರೆ, ಹೈಕಮಾಂಡ್ ದೃಷ್ಟಿಕೋನ ಖಂಡಿತಾ ಬೇರೆ ಇರುತ್ತದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದೂ ಪರಮೇಶ್ವರ್ ಹೇಳಿದರು.
ದಲಿತ ಸಮುದಾಯ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ ಎಂದಿದ್ದಾರೆ.
‘ಈ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ನಮ್ಮ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅದು ಆಗದಿದ್ದರೆ ಸ್ವಾಭಾವಿಕವಾಗಿಯೇ ಅದಕ್ಕೆ ಪ್ರತಿಕ್ರಿಯೆ ಬರುತ್ತವೆ. ಅದನ್ನು ನಾನು ಹೇಳುವ ಅಗತ್ಯವಿಲ್ಲ. ಮುಂದೆ ಈ ಬಗ್ಗೆ ಮನವರಿಕೆ ಆಗುತ್ತದೆ. ಅದರ ಬದಲು ಈಗಲೇ ನಿರ್ಧಾರ ಕೈಗೊಂಡರೆ ಉತ್ತಮ. ಇಲ್ಲದಿದ್ದರೆ, ಇದರಿಂದ ಪಕ್ಷಕ್ಕೆ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ವರಿಷ್ಠರಿಗೆ ಹೇಳಲು ಬಯಸುತ್ತೇನೆ’ಎಂದು ಪರಮೇಶ್ವರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.