ಗಂಗಾವತಿ (ಕೊಪ್ಪಳ ಜಿಲ್ಲೆ): ‘ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೆಂದರೇ ಇಕ್ಬಾಲ್ ಅನ್ಸಾರಿ. ಇಲ್ಲಿ ಯಾವ ಶ್ರೀನಾಥ್ ಹಾಗೂ ಮಲ್ಲಿಕಾರ್ಜುನ ನಾಗಪ್ಪ ಇಲ್ಲ. ಇವರೆಲ್ಲ ಡೀಲ್ ಮಾಸ್ಟರ್‌ಗಳು ಇದ್ದ ಹಾಗೆ. ಯಾರ ಹಣ ಕೊಡುತ್ತಾರೊ ಅವರ ಹಿಂದೆ ಓಡಿ ಹೋಗುತ್ತಾರೆ’ ಎಂದು ಈ ಸಲದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.
‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಮುಳುವಾಯಿತೇ ಗೊಂದಲ, ಆಂತರಿಕ ತಿಕ್ಕಾಟ?’ ವರದಿಗೆ ಪ್ರತಿಕ್ರಿಯೆ ನೀಡಿದ ಅನ್ಸಾರಿ ಅವರು ‘ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಎಚ್.ಆರ್ ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿಯನ್ನು ಬೆಂಬಲಿಸಿ, ಮಾತೃ ಪಕ್ಷಕ್ಕೆ ಮತ್ತು ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಬೇಕಿರಲಿಲ್ಲ. ಆದರೆ, ಪಕ್ಷದಿಂದ ಸಿಗುವ ಅಧಿಕಾರ ಮತ್ತು ಲಾಭ ಮಾತ್ರ ಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಟಿಕೆಟ್ ಘೋಷಣೆಯಾಗುವ ಮೊದಲು ಮತ್ತು ನಂತರ ಎಲ್ಲರೊಂದಿಗೂ ಪಕ್ಷ ಸಂಘಟನೆ ಕುರಿತು ಮಾತನಾಡಿದೆ. ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿಗೆ ಭೇಟಿ ಮಾಡಲು ಮನೆಗೆ ಬರುವುದಾಗಿ ತಿಳಿಸಿದರೆ, ನಾವೆಲ್ಲ ಚರ್ಚೆಸಿದ್ದು, ಕಾಂಗ್ರೆಸ್ ಬೆಂಬಲಿಸುತ್ತೇವೆ ಎಂದರು. ಬಳಿಕ ಶ್ರೀನಾಥ್ ಆದೇಶದಂತೆ ಜನಾರ್ದನ ರೆಡ್ಡಿಗೆ ಮತಗಳನ್ನು ಹಾಕಿಸಿದ್ದಾರೆ’ ಎಂದು ಆರೋಪಿಸಿದರು.
‘ಅನ್ಸಾರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲುತ್ತದೆ ಎಂದು ಶ್ರೀನಾಥ್ ನೀಡಿದ ಹೇಳಿಕೆ ಸರಿಯಲ್ಲ. ನನ್ನ ಸೋಲು ಗೆಲುವಿನ ಹಣೆಬರಹ ಬರೆಯಲು ಅವರೇನು ಬ್ರಹ್ಮನಾ? ಚುನಾವಣೆ ಸಮಯದಲ್ಲೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಆದರೆ, ಮತದಾನ ಶಾಂತಿಯುತವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಸುಮ್ಮನಿದ್ದೆ. ಎಚ್.ಜಿ ರಾಮುಲು, ನಾಗಪ್ಪ, ಶ್ರೀನಾಥ, ಕರಿಯಣ್ಣ ಸಂಗಟಿ ಇವರೆಲ್ಲ ನಾಟಕ ಕಂಪನಿಗಳು ಇದ್ದಂತೆ’ ಎಂದು ಹರಿಹಾಯ್ದರು.
'ಇವರೆಲ್ಲ ಹೆಸರಿಗೆ ಮಾತ್ರ ಕಾಂಗ್ರೆಸ್ ಎಂದು ಹೇಳಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಅವರ ಬಾಲ ಹಿಡಿದು ಹೋಗುತ್ತಾರೆ. ಇವರಿಗೆ ಪಕ್ಷ ನಿಷ್ಠೆ, ಪ್ರಾಮಾಣಿಕತೆ ಏನೂ ಇಲ್ಲ. ತಮ್ಮ ಬೆಂಬಲಿಗನನ್ನು ಕೆಆರ್‌ಪಿಪಿ ಪಕ್ಷಕ್ಕೆ ಕಳುಹಿಸಿ ಕಾಂಗ್ರೆಸ್ ಗೆಲುವಿಗೆ ಕೆಲಸ ಮಾಡಿದ್ದೇವೆ ಎಂದು ನಾಟಕವಾಡುತ್ತಾರೆ’ ಎಂದು ಶ್ರೀನಾಥ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಈಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಪತ್ರಿಕಾಗೋಷ್ಠಿ ಮೂಲಕ ಶ್ರೀನಾಥ್, ನಾಗಪ್ಪ ಅವರಿಗೆ ಕೇಳಿರುವ ಪ್ರಶ್ನೆಗಳು ಅಕ್ಷರಶಃ ಸತ್ಯ. ಅದಕ್ಕೆ ಅವರು ಉತ್ತರ ಕೊಡಬೇಕು. ಇದೆಲ್ಲವನ್ನು ಬಿಟ್ಟು ಶ್ರೀನಾಥ್ ತಮ್ಮ ಬೆಂಬಲಿಗರ ಮೂಲಕ ’ಅನ್ಸಾರಿ ನಮ್ಮ ನಾಯಕರಿಗೆ ಆಹ್ವಾನ ನೀಡಿಲ್ಲ. ಅದಕ್ಕೆ ಕೆಆರ್‌ಪಿಪಿ ಬೆಂಬಲಿಸಿದ್ದೇವೆ ಎಂಬ ಹೇಳಿಕೆ ಕೊಡಿಸುತ್ತಾರಲ್ಲ. ಆ ಬೆಂಬಲಿಗರು ಪ್ರಾಮಾಣಿಕವಾಗಿಯೂ ಕಾಂಗ್ರೆಸ್‌ನವರೇ’ ಎಂದು ಪ್ರಶ್ನಿಸಿದರು.
‘ಹಣ ಹಂಚಿ ಗೆದ್ದ ರೆಡ್ಡಿ‘
ಜನಾರ್ದನ ರೆಡ್ಡಿ ಜನರ ಪ್ರೀತಿ, ಆರ್ಶಿವಾದದಿಂದ ಗೆದ್ದಿಲ್ಲ. ಬದಲಾಗಿ ಪ್ರತಿ ಮತಕ್ಕೆ ₹1 ಸಾವಿರ, ₹2 ಸಾವಿರ, ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳಿಗೆ ₹5-6ಲಕ್ಷ ನೀಡಿ ಮತ ಪಡೆದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ’ ಎಂದು ಅನ್ಸಾರಿ ಆರೋಪಿಸಿದ್ದಾರೆ.
ನಾನು ಜನರಿಗೆ ನಯಾಪೈಸೆ ಹಂಚಿಲ್ಲ. ಆದರೂ 57,914 ಮತಗಳು ನನಗೆ ಬಂದಿವೆ. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ ಗೆದ್ದಾಗ, ನಾನು 59,644 ಮತಗಳು ಪಡೆದಿದ್ದೆ, ಈ ಬಾರಿ 1200 ಮತಗಳು ಮಾತ್ರ ಕಡಿಮೆ ಆಗಿವೆ ಅಷ್ಟೆ. ನಮ್ಮ ಮತಗಳು ಎಲ್ಲಿಯೂ ಹೋಗಿಲ್ಲ. ಬಿಜೆಪಿ 40 ಸಾವಿರ ಮತಗಳು ರೆಡ್ಡಿಗೆ ಹೋಗಿವೆ’ ಎಂದು ಹೇಳಿದ್ದರು.
'ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಅಲ್ಪಾವಧಿಯಲ್ಲಿಯೇ ಟಿಕೆಟ್ ಕೊಡುವಂತೆ ಶ್ರೀನಾಥ್ ಬೇಡಿಕೆಯಿಟ್ಟರೆ ಯಾರು ತಾನೆ ಕೊಡುತ್ತಾರೆ? 2012ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿದ್ದರು. ಮುಂದೆ ಎಷ್ಟೇ ಬಾರಿ ಸ್ಪರ್ಧಿಸಿದರೂ ಶ್ರೀನಾಥ್ ಠೇವಣೆ ಕಳೆದುಕೊಳ್ಳುವುದು ನಿಶ್ಚಿತ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.