ADVERTISEMENT

‘ಇಂಡಿಯಾ’ ಮೈತ್ರಿಕೂಟ ಎಷ್ಟು ದಿನ ಇರುವುದೊ ಕಾದು ನೋಡೋಣ: ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 16:16 IST
Last Updated 9 ಜೂನ್ 2024, 16:16 IST
ಎಚ್‌.ಡಿ ದೇವೇಗೌಡ
ಎಚ್‌.ಡಿ ದೇವೇಗೌಡ    

ಬೆಂಗಳೂರು: ‘ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷದವರು ಕಾಂಗ್ರೆಸ್‌ ನಾಯಕರನ್ನು ಎಷ್ಟು ದಿನ ಸಹಿಸಿಕೊಳ್ಳುತ್ತಾರೊ ನೋಡೋಣ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿ ಪತ್ರ ಬರೆದಿರುವ ಅವರು, ಇಂಡಿಯಾ ಮೈತ್ರಿಕೂಟದಲ್ಲಿ ಶೀಘ್ರ ಬಿರುಕು ಕಾಣಿಸಿಕೊಳ್ಳಬಹುದು ಎಂದು ಉಲ್ಲೇಖಿಸಿದ್ದಾರೆ.

‘ಈ ಚುನಾವಣೆಯಲ್ಲಿ ದೊಡ್ಡ ಸಾಧನೆ ಮಾಡಿರುವುದಾಗಿ ಕಾಂಗ್ರೆಸ್‌ ಪಕ್ಷ ಭಾವಿಸಿದೆ. ಆದರೆ, ಆ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಕೆಲವು ರಾಜ್ಯಗಳಲ್ಲಿ ಮಿತ್ರಪಕ್ಷಗಳ ಕಾರಣದಿಂದ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿದೆ’ ಎಂದಿದ್ದಾರೆ.

ADVERTISEMENT

‘ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನಿಮಗೆ ಅಭಿನಂದನೆ. ಇದೊಂದು ಐತಿಹಾಸಿಕ ಕ್ಷಣ. ನಾನು ಕೂಡ ಸಮಾರಂಭದಲ್ಲಿ ಹಾಜರಿರಬೇಕಿತ್ತು. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷವು ಎನ್‌ಡಿಎ ಮೈತ್ರಿಕೂಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ‘ಎಲ್ಲರೊಂದಿಗೆ ಎಲ್ಲರ ವಿಕಾಸ’ ಎಂಬ ಘೋಷ ವಾಕ್ಯದಂತೆ ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ’ ಎಂದು ದೇವೇಗೌಡರು ಮೋದಿಯವರಿಗೆ ತಿಳಿಸಿದ್ದಾರೆ.

‘ಈ ಚುನಾವಣೆಯು ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. ಭಾರತದ ಪ್ರಜಾಪ್ರಭುತ್ವದ ಶಕ್ತಿ ಈ ಚುನಾವಣೆಯಲ್ಲಿ ಗೋಚರಿಸಿದೆ. ನೀವು ಒಬ್ಬ ನೈಜ ಪ್ರಜಾಪ್ರಭುತ್ವವಾದಿ ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ. ನಮ್ಮ ಸಂಸ್ಥೆಗಳು ಮತ್ತು ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್‌ ಪಕ್ಷವು ನಡೆಸಿದ ಅಪಪ್ರಚಾರಕ್ಕೆ ಚುನಾವಣಾ ಫಲಿತಾಂಶ ಉತ್ತರ ನೀಡಿದೆ. ಕಾಂಗ್ರೆಸ್‌ ಪಕ್ಷದವರ ದುರಹಂಕಾರ ಮತ್ತು ಋಣಾತ್ಮಕ ನಡೆಗೆ ದೇಶದ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.