ಬೆಂಗಳೂರು: ಯಾವುದೇ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ, ರಾಜಧಾನಿಯ 28 ಕ್ಷೇತ್ರಗಳಲ್ಲಿ ಯಾರು ಎಷ್ಟು ಸಾಧನೆ ಮಾಡಿದ್ದಾರೆ ಎಂಬುದೇ ನಿರ್ಣಾಯಕ. ಧರ್ಮ, ಜಾತಿಯಂತಹ ಸಂಗತಿಗಳು ಇಲ್ಲಿನ ಮತದಾರರ ಮೇಲೆ ಪ್ರಭಾವ ಬೀರುವುದು ಕಡಿಮೆ. ಇಲ್ಲಿನ ಮತ ರಾಜಕಾರಣಕ್ಕೆ ಅಭಿವೃದ್ಧಿಯ ಮಂತ್ರವೇ ಮೂಲವಾಗಿದ್ದರೂ, ಪಕ್ಷ ಹಾಗೂ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸೇ ಗೆಲುವಿನ ದಡ ಮುಟ್ಟಿಸುತ್ತದೆ. ಹೀಗಾಗಿಯೇ ಕಳೆದ ಮೂರು ಚುನಾವಣೆಗಳಲ್ಲಿ ‘ಹ್ಯಾಟ್ರಿಕ್’ ಗೆಲುವು ಗಳಿಸಿರುವ ಶಾಸಕರೇ ಇಲ್ಲಿ ಹೆಚ್ಚಿದ್ದಾರೆ.
ಕಳೆದ ಮೂರು ಚುನಾವಣೆಗಳಿಂದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಜಿದ್ದಾಜಿದ್ದಿ ಹೋರಾಟ ನಡೆಸುತ್ತಿವೆ. 2008ರಲ್ಲಿ ಬಿಜೆಪಿ 17 ಸ್ಥಾನ ಗೆದ್ದಿತ್ತು. ನಂತರದ ಎರಡು ಚುನಾವಣೆಗಳಲ್ಲಿ ಎರಡು– ಮೂರು ಸ್ಥಾನಗಳ ಅಂತರದಲ್ಲಿಯೇ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಗೆಲುವಿನ ಸಂಖ್ಯೆಯನ್ನು ಕಾಯ್ದಿರಿಸಿಕೊಳ್ಳುತ್ತಿವೆ. ಜೆಡಿಎಸ್ ಒಂದು ಅಥವಾ ಎರಡು ಸ್ಥಾನದ ಆಚೆಗೆ ಸಾಧನೆಯನ್ನೇ ಮಾಡಿಲ್ಲ. ‘ಮಣ್ಣಿನ ಮಕ್ಕಳ ಪಕ್ಷ’ ನಗರವಾಸಿಗಳಿಗೆ ಯಾಕೋ ಹಿತಕರವಾಗಿಲ್ಲ.
2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ನೂರಾರು ಗ್ರಾಮಗಳು ನಗರ ವ್ಯಾಪ್ತಿಗೆ ಸೇರಿಕೊಂಡವು. ಮೂಲಸೌಕರ್ಯವನ್ನು ಮೂಲದಿಂದಲೇ ಆರಂಭಿಸಬೇಕಾದ ಅನಿವಾರ್ಯ ಇತ್ತು. ಅಂದಿನಿಂದಲೂ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳೇ ಚುನಾವಣಾ ರಾಜಕಾರಣವಾಗಿ ಆದ್ಯತೆ ಪಡೆದವು. ರಸ್ತೆ, ಚರಂಡಿ, ನೀರು, ಒಳಚರಂಡಿ, ಸುಗಮ ಸಂಚಾರ, ಸಾರ್ವಜನಿಕ ಸಾರಿಗೆ... ಇವು ನಗರದ ಪ್ರಮುಖ ಆದ್ಯತೆಗಳಾದವು. ದಶಕಗಳಿಂದ ಇಂದಿಗೂ ಇವೇ ಜನರನ್ನು ಕಾಡುವ ಸಮಸ್ಯೆಯಾಗಿ ಮುಂದುವರಿದಿವೆ. ಯೋಜನಾಬದ್ಧವಾಗಿ ನಗರ ಬೆಳೆಯದೇ ಹೋಗಿದ್ದರಿಂದ ಹಾಗೂ ಆಳುವ ಸರ್ಕಾರಗಳು ಜನರ ಬೇಡಿಕೆಗಳನ್ನು ಈಡೇರಿಸಲು ಕಾಲಮಿತಿಯಲ್ಲಿ ಯೋಜನೆ ರೂಪಿಸದೇ, ಅನುದಾನವನ್ನೂ ನೀಡದೇ ಇರುವುದರಿಂದ ತೊಂದರೆಗಳು ಬಗೆಹರಿಯಲೇ ಇಲ್ಲ. ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ಇವುಗಳೇ ಪ್ರಮುಖ ವಿಷಯಗಳಾಗುತ್ತಿವೆ. ಅವುಗಳನ್ನ ಮುಂದು ಮಾಡಿ, ಗೆದ್ದರೆ ಪರಿಹರಿಸುವ ಭರವಸೆ ನೀಡಿ ಗೆಲುವಿನ ದಡ ಹತ್ತುತ್ತಿದ್ದಾರೆ ರಾಜಕಾರಣಿಗಳು.
ಬೆಂಗಳೂರಿನ ಇಂದಿನ ಪ್ರತಿಷ್ಠಿತ ಜಯನಗರ, ಜೆ.ಪಿ. ನಗರ ಬಿಡಿಎ ಬಡಾವಣೆಗಳಲ್ಲಿ ಜನರು ನಿವೇಶನಗಳನ್ನು ಖರೀದಿಸದೇ ಖಾಲಿ ಉಳಿದಿದ್ದವು. 2000ನೇ ಇಸವಿಯ ಆಸುಪಾಸಿನಲ್ಲಿ ಅವುಗಳನ್ನು ಮಾರಾಟ ಮಾಡಲು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಲವು ಯೋಜನೆ ಮಾಡಿದ್ದರು. ನಂತರ ಬೆಳೆದ ರಿಯಲ್ ಎಸ್ಟೇಟ್ ಉದ್ಯಮ ಬೆಂಗಳೂರಿನಾದ್ಯಂತ ವ್ಯಾಪಿಸಿದೆ. ಆದರೆ, ಮೂಲಸೌಕರ್ಯಗಳು ಸಿಕ್ಕಿಲ್ಲ. ಇದಕ್ಕೆ ಕಾರಣ ಯೋಜನಾಬದ್ಧವಾಗಿ ಅನುಷ್ಠಾನವಾಗದ ಬಡಾವಣೆಗಳು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತೆ ಸರ್ಕಾರಿ ಇಲಾಖೆಗಳು ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲೇ ಇಂದು ಸಾಕಷ್ಟು ಸಮಸ್ಯೆಗಳು ತಲೆದೋರಿವೆ. ಕೆರೆ, ರಾಜಕಾಲುವೆ ಒತ್ತುವರಿಯಂತಹ ಸಮಸ್ಯೆಗಳೂ ಯಥೇಚ್ಛವಾಗಿವೆ. ಚುನಾವಣೆಯಲ್ಲಿ ಇವೆಲ್ಲವೂ ಇಂದಿಗೂ ಪ್ರಮುಖ ಭರವಸೆ, ಚರ್ಚಾ ವಿಷಯಯಾಗಿವೆ. ‘ಮಾಸ್ಟರ್ ಪ್ಲಾನ್’ ಚುನಾವಣೆ ಕಣದಲ್ಲಿ ರಂಗೇರುತ್ತದೆ.
ಮುಖ್ಯಮಂತ್ರಿಯೇ ಉಸ್ತುವಾರಿ: 1999ರಿಂದ ಒಂದು ಅವಧಿ ಬಿಟ್ಟರೆ ರಾಜಧಾನಿ ಬೆಂಗಳೂರನ್ನು ಮುಖ್ಯಮಂತ್ರಿಯಾದವರು ತಮ್ಮ ಉಸ್ತುವಾರಿಯಲ್ಲೇ ಇಟ್ಟುಕೊಂಡು ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ಒಳಿತನ್ನು ಮಾಡಿದ್ದರೂ, ತುರ್ತು ಜಾರಿ ಯೋಜನೆಗಳಲ್ಲಿ ಸಾಕಷ್ಟು ಹಿನ್ನಡೆಯೂ ಆಗಿದೆ. ಪ್ರತಿ ಜಿಲ್ಲೆಗೆ ಸಚಿವರನ್ನು ಉಸ್ತುವಾರಿ ಮಾಡಿದಾಗ ಅಲ್ಲಿ ಅವರದ್ದೇ ಪ್ರಮುಖ ಪಾತ್ರ. ಅಭಿವೃದ್ಧಿ ಯೋಜನೆಗಳಿಗೆ ನಿರ್ಧಾರವೂ ಅಲ್ಲೇ ಆಗುತ್ತದೆ. ಆದರೆ, ಬೆಂಗಳೂರಿನಲ್ಲಿ ಗೆದ್ದವರಲ್ಲಿ ನಾಲ್ಕಾರು ಮಂದಿ ಸಚಿವರಾಗುತ್ತಾರೆ. ಮುಖ್ಯಮಂತ್ರಿ ಸೇರಿದಂತೆ ಇವರೆಲ್ಲ ಅಭಿವೃದ್ಧಿಗೆ ಪಾಲುದಾರರು. ಹಲವು ‘ಶಕ್ತಿ ಪೀಠ’ಗಳ ರಚನೆಯಾಗುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಮೂಲಸೌಕರ್ಯಗಳು ವೇಗ ಪಡೆಯದಿರುವುದು ನಗರವನ್ನು ನೋಡಿದರೆ ಅರಿವಾಗುತ್ತದೆ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನಗರಾಭಿವೃದ್ಧಿ ಇಲಾಖೆಯಿಂದ ಬೆಂಗಳೂರು ನಗರವನ್ನು ಬೇರ್ಪಡಿಸಿ, ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಸಿಂಗಪುರ ಮಾಡುವ ಕನಸು ಕಂಡಿದ್ದ ಅವರು ನಗರಕ್ಕಾಗಿಯೇ ಕಾರ್ಯಪಡೆ ರಚಿಸಿದ್ದರು. ಇದಾದ ನಂತರದಲ್ಲೂ ಎಲ್ಲ ಮುಖ್ಯಮಂತ್ರಿಯವರು ನಗರವನ್ನು ತಮ್ಮ ತೆಕ್ಕೆಯಲ್ಲೇ ಉಳಿಸಿಕೊಂಡರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಬೆಂಗಳೂರು ಅಭಿವೃದ್ಧಿ ಸಚಿವ ಎಂಬ ಹೊಸ ಸ್ಥಾನ ಸೃಷ್ಟಿಸಿ, ಕೆ.ಜೆ. ಜಾರ್ಜ್ ಅವರಿಗೆ ಉಸ್ತುವಾರಿ ವಹಿಸಿದ್ದರು. ಇದೆಲ್ಲ ಏನೇ ಇದ್ದರೂ ಹಣಕಾಸು, ಆರ್ಥಿಕ ಇಲಾಖೆಯಿಂದಲೇ ಬರಬೇಕು.
2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿ ಬಿಟ್ಟರೆ, ಉಳಿದವರ ಕಾಲದಲ್ಲಿ ಮುಖ್ಯಮಂತ್ರಿ ಬಳಿಯೇ ಹಣಕಾಸು ಖಾತೆಯೂ ಇತ್ತು. ಹೀಗಾಗಿ, ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಯವರೇ ಅಸ್ತು ಎನ್ನಬೇಕು. 2018ರಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಯಾದವರ ಬಳಿಯೇ ಇದೆ. ರಾಜ್ಯದ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಯವರು ನಗರದಲ್ಲಿ ‘ಐಕಾನಿಕ್ ಡೆವೆಲಪ್‌ಮೆಂಟ್’ ಮಾಡಬೇಕಾದರೆ ಸಾಕಷ್ಟು ಸಮಯ ನೀಡಬೇಕು. ಬಿಬಿಎಂಪಿ, ಬಿಡಿಎ, ಜಲಮಂಡಳಿಗಳ ಪಾತ್ರವನ್ನು ಜವಾಬ್ದಾರಿಯುತಗೊಳಿಸಬೇಕು. ಇವೆಲ್ಲವೂ ಚುನಾವಣಾ ರಾಜಕಾರಣ ಮಾತು, ಭರವಸೆಗಳಾಗಿವೆ ಇಂದಿಗೂ ಇವೆ.
ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ನಗರದ ಪ್ರಥಮ ಮೇಲ್ಸೇತುವೆಯಿಂದ (ಸಿರ್ಸಿ ವೃತ್ತ) ಹಿಡಿದು, ಎಸ್.ಎಂ. ಕೃಷ್ಣ ಅವರ ಎಲೆಕ್ಟ್ರಾನಿಕ್ ಸಿಟಿ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರ ಕಾಲದ ‘ನಮ್ಮ ಮೆಟ್ರೊ’, ಬೃಹತ್ ಮೇಲ್ಸೇತುವೆಗಳು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೇ ಹೆಚ್ಚಿನ ಮಣೆ ಹಾಕಲಾಗುತ್ತಿದೆ. ಆದರೂ ನಗರಕ್ಕೆ ಇದೆಲ್ಲ ಸಾಲುತ್ತಿಲ್ಲ. ಅದಕ್ಕೇ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನೀಡುವ ಮಾತುಗಳು ವಿಧಾನಸಭೆ ಚುನಾವಣೆಗಳಲ್ಲಿ ಎಂದಿಗೂ ಕೇಳಿಬರುತ್ತಲೇ ಇವೆ.
ಅಭಿವೃದ್ಧಿ ಕಾಮಗಾರಿಗಳ ಮಂತ್ರ ಒಂದೆಡೆಯಾದರೆ, ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸು ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚಿದೆ. 2018ರಿಂದ ಸುಮಾರು 18 ಕ್ಷೇತ್ರಗಳಲ್ಲಿ ಮೂರು ಬಾರಿ ಒಂದೇ ಅಭ್ಯರ್ಥಿ ಗೆಲುವು ಸಾಧಿಸಿರುವುದು ವೈಯಕ್ತಿಕ ವರ್ಚಸ್ಸನ್ನು ಸಾಬೀತುಪಡಿಸುತ್ತದೆ. ಕೆಲವು ಬಾರಿ ಪಕ್ಷವನ್ನೂ ಮರೆತು ವ್ಯಕ್ತಿಗೆ ಮತದಾರ ಮಣೆ ಹಾಕಿದ್ದಾನೆ. ಬೆಂಗಳೂರು ಅಭಿವೃದ್ಧಿಗೆ ಇನ್ನೂ ಹಣ ಬೇಕೇ? ಕಾಮಗಾರಿಗಳು ಬೇಕೇ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ರಾಜ್ಯದ ಭಂಡಾರ ತುಂಬುವಲ್ಲಿ ಮುಕ್ಕಾಲು ಪಾಲು ಹೊಂದಿರುವ ಬೆಂಗಳೂರಿನಲ್ಲಿ, ಒಂದು ಬಾರಿ ಸಂಚರಿಸಿದರೆ, ಅತಿ ಮಳೆಯಲ್ಲಾಗುವ ಸಮಸ್ಯೆಗಳನ್ನು ಅನುಭವಿಸಿದರೆ ರಾಜಧಾನಿ ಇನ್ನೂ ಅಭಿವೃದ್ಧಿ ಆಗಬೇಕು ಎಂಬುದು ಮನದಟ್ಟಾಗುತ್ತದೆ. ಅದಕ್ಕೇ ಇಂದಿಗೂ ‘ಅಭಿವೃದ್ಧಿ ಕಾಮಗಾರಿಗಳ ಮಂತ್ರವೇ’ ಚುನಾವಣೆ ರಾಜಕಾರಣವಾಗಿ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.