ತುಮಕೂರು: ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬಿಜೆಪಿ ತೊರೆಯಲು ಮುಂದಾಗಿದ್ದು, ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೂರವಾಣಿಯಲ್ಲಿ ಸಂಪರ್ಕಿಸಿ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ. ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದಲ್ಲಿರುವ ಮಾಧುಸ್ವಾಮಿ ಮನೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಇತರ ನಾಯಕರು ಸೋಮವಾರ ರಾತ್ರಿ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ‘ಇಷ್ಟೆಲ್ಲ ಆದಮೇಲೆ ನಿಮ್ಮ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಇರುವುದಿಲ್ಲ’ ಎಂದು ನೇರವಾಗಿಯೇ ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಒಂದೆರಡು ದಿನ ಕಾದು ನೋಡಿ. ಎಲ್ಲವೂ ಒಳ್ಳೆಯದೇ ಆಗಲಿದೆ’ ಎಂದು ತಮ್ಮ ಬೆಂಬಲಿಗರು, ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ‘ಇನ್ನೂ ಅಂತಹ ಪ್ರಯತ್ನ ನಡೆದಿಲ್ಲ. ಮುಂದೆ ನೋಡೋಣ’ ಎಂದು ಮಾಧುಸ್ವಾಮಿ ಚುಟುಕಾಗಿ ಪ್ರತಿಕ್ರಿಯಿಸಿದರು.
ಲೋಕಸಭೆಗೆ ಟಿಕೆಟ್ ಕೊಡುವುದಾದರೆ ಕಾಂಗ್ರೆಸ್ ಸೇರುವುದಾಗಿ ಮಾಧುಸ್ವಾಮಿ ಷರತ್ತು ಹಾಕಿದ್ದಾರೆ ಎಂದು ಅವರ ಆಪ್ತವಲಯ ಖಚಿತಪಡಿಸಿದೆ. ಅವರು ಪಕ್ಷ ಸೇರಿದರೆ, ನಿಯೋಜಿತ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಬದಲು ಅವರನ್ನೇ ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.