ADVERTISEMENT

ಯಾರೋ ನೋಡಿದ ಹೆಣ್ಣನ್ನು ಮದುವೆಯಾಗಲ್ಲ: ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 0:08 IST
Last Updated 21 ಮಾರ್ಚ್ 2024, 0:08 IST
<div class="paragraphs"><p>ಜೆ.ಸಿ.ಮಾಧುಸ್ವಾಮಿ</p></div>

ಜೆ.ಸಿ.ಮಾಧುಸ್ವಾಮಿ

   

ತುಮಕೂರು: ‘ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ಪಕ್ಷದಿಂದ ಟಿಕೆಟ್ ಕೊಟ್ಟರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾರೋ ನೋಡಿದ ಹೆಣ್ಣನ್ನು ನಾನು ಮಾದುವೆಯಾಗುವುದಿಲ್ಲ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದು ನಿಜ. ಅವರಿಗೆ ಪಕ್ಷಕ್ಕೆ ಬರುತ್ತೇನೆ ಎಂದು ನಾನು ಹೇಳಿಲ್ಲ. ಬರುವುದಿಲ್ಲ ಎಂದೂ ಹೇಳಿಲ್ಲ’ ಎಂದರು.

ADVERTISEMENT

ಕಾಂಗ್ರೆಸ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ನಾಯಕರು ಸಂಪರ್ಕ ಮಾಡಿಲ್ಲ. ಕಾರ್ಯಕರ್ತರ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು.

‘ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೂ ಸ್ಪರ್ಧಿಸುವಂತೆ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು. ಬಿ ಫಾರಂ ತೆಗೆದುಕೊಂಡು ಬರುತ್ತೇನೆ, ನೀವು ದೆಹಲಿಗೆ ಬರುವುದು ಬೇಡ ಎಂದು ಹೇಳಿದ್ದರು. ಎರಡು,ಮೂರು ಸಲ ಕರೆದು ಅವಮಾನ ಮಾಡಿದರು. ನಂಬಿದ್ದಕ್ಕೆ ಮೋಸ ಮಾಡಿದ್ದಾರೆ. ಅವರು ಮತ್ತೆ ನನ್ನನ್ನು ಸಂಪರ್ಕಿಸುವುದಿಲ್ಲ. ಮೋಸ ಮಾಡಿದವರು ಎಂದಾದರೂ ಸಂಪರ್ಕ ಮಾಡುತ್ತಾರೆಯೇ’ ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

‘ಲಿಂಗಾಯತರಿಗೆ ಟಿಕೆಟ್ ಕೊಡುವಂತೆ ಕೇಳಿಲ್ಲ. ಈವರೆಗೆ ಕ್ಷೇತ್ರದಲ್ಲಿ ನೊಳಂಬ ಲಿಂಗಾಯತರಿಗೆ ಟಿಕೆಟ್ ಕೊಡುತ್ತಾ ಬಂದಿದ್ದು, ಈ ಸಮುದಾಯಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದೆ. ಐದಾರು ಜಿಲ್ಲೆಯಲ್ಲಿ ನೊಳಂಬ ಲಿಂಗಾಯತರ ಪ್ರಭಾವ ಇದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ನೊಳಂಬರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಈ ಸಮುದಾಯಕ್ಕೆ ಅವಕಾಶ ನೀಡದಿರುವುದು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲವೆ’ ಎಂದು ಪ್ರಶ್ನಿಸಿದರು.

‘ಎಸ್.ಪಿ.ಮುದ್ದಹನುಮೇಗೌಡ ಅವರನ್ನೇ ಪಕ್ಷದಲ್ಲಿ ಉಳಿಸಿಕೊಂಡು ಟಿಕೆಟ್ ಕೊಡಬಹುದಿತ್ತು. ಅವರೂ ಆತುರ ಮಾಡಿ ಪಕ್ಷ ಬಿಟ್ಟರು. ಈಗಲೂ ಹೊರಗಿನವರನ್ನು ಬೆಂಬಲಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಜಿಲ್ಲೆಯ ಸಮಸ್ಯೆ ಅವರಿಗೆ (ವಿ.ಸೋಮಣ್ಣ) ಏನು ಗೊತ್ತು? ಎತ್ತಿನಹೊಳೆ, ಹೇಮಾವತಿ, ಭದ್ರ ಮೇಲ್ದಂಡೆ ಯೋಜನೆ ಬಗ್ಗೆ ಗೊತ್ತಿದೆಯೆ? ನಮ್ಮ ಜಿಲ್ಲೆಯ ಕಷ್ಟ ನಮಗೆ ಮಾತ್ರ ಗೊತ್ತಿರುತ್ತದೆ. ಯಾರಿಗೋ ಟಿಕೆಟ್ ಕೊಟ್ಟರೆ ನಾನೇಕೆ ಬೆಂಬಲಿಬೇಕು’ ಎಂದರು.

‘ವಿಧಾನಸಭೆ ಚುನಾವಣೆಯಲ್ಲಿ ನಮ್ಮ ವಿರುದ್ಧ ಹಲವರು ಕೆಲಸ ಮಾಡಿದರು. ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಅವರಿಗೆ ಮತ ನೀಡುವಂತೆ ಸಂಸದ ಜಿ.ಎಸ್.ಬಸವರಾಜು ಏಕೆ ಹೇಳಿದರು. ಅವರಂತೆ ಕೀಳುಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ’ ಎಂದು ಹೇಳಿದರು.

ವಿಜಯೇಂದ್ರ ಕರೆ ಸ್ವೀಕರಿಸದ ಮಾಧುಸ್ವಾಮಿ
ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದೇ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಮೂಲಗಳು ಹೇಳಿವೆ. ದೆಹಲಿಯಿಂದ ಮರಳಿದ ವಿಜಯೇಂದ್ರ ಅವರು ಮಾಧುಸ್ವಾಮಿ ಜತೆ ಮಾತನಾಡಲು ದೂರವಾಣಿ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಬದಲಿಗೆ ಅವರ ಆಪ್ತ ಸಹಾಯಕ ಮಾತನಾಡಿ, ‘ಸಾಹೇಬರು ಮಾತನಾಡುವುದಿಲ್ಲವಂತೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ‘ಮಾತನಾಡೋದು ಏನಿದೆ’ ಎಂದು ಮಾಧುಸ್ವಾಮಿ ಸಿಟ್ಟಿನಿಂದ ಹೇಳಿದ್ದು ವಿಜಯೇಂದ್ರ ಅವರಿಗೆ ಕೇಳಿಸಿತು. ಮತ್ತೊಮ್ಮೆ ಕರೆ ಮಾಡಿದರು. ಆಗಲೂ ಮಾಧುಸ್ವಾಮಿ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.