ಬೆಂಗಳೂರು: ಮತ ಎಣಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲದಿಂದ ಜಯನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ಪ್ರಕಟವಾಗಿಲ್ಲ.
ಮರು ಎಣಿಕೆ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪಿಸಿದ್ದರು. ಎಲ್ಲ ಸುತ್ತುಗಳ ಮತ ಎಣಿಕೆ ಮುಗಿದ ಮೇಲೆ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ 294 ಮತಗಳ ಅಂತರದಿಂದ ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರಿಗಿಂತ ಮುಂದಿದ್ದರು. ಈ ಸಂದರ್ಭದಲ್ಲಿ ರಾಮಮೂರ್ತಿ ಮರು ಎಣಿಕೆಗೆ ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ಚುನಾವಣೆ ಅಧಿಕಾರಿ ಮರು ಎಣಿಕೆ ಮಾಡಿದರು. ಆಗ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ದೊರೆಯಿತು.
‘ಮರುಎಣಿಕೆಯಲ್ಲಿ ಅಕ್ರಮವಾಗಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಇದರ ವಿರುದ್ಧ ಬಿಜೆಪಿಯವರೂ ಘೋಷಣೆ ಕೂಗಿದರು. ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಸ್ಥಳದಲ್ಲಿ ಕುಳಿತು ಚುನಾವಣೆ ಅಧಿಕಾರಿ ವಿರುದ್ಧ ಆರೋಪಿಸಿದರು.
‘ಸಂಸದ ತೇಜಸ್ವಿ ಸೂರ್ಯ ಅವರನ್ನು ಏಕೆ ಒಳಗೆ ಬಿಟ್ಟಿರಿ’ ಎಂದು ಪ್ರಶ್ನಿಸಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.