ADVERTISEMENT

ಕುಟುಂಬದವರಿಗೆ ಬಿಜೆಪಿ ಟಿಕೆಟ್: ಹಲಾಲುಟೋಪಿ ರಾಜಕಾರಣ ಎಂದ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 8:19 IST
Last Updated 18 ಏಪ್ರಿಲ್ 2023, 8:19 IST
   

ಬೆಂಗಳೂರು: ‘ಕುಟುಂಬ ರಾಜಕಾರಣದ ವಿಚಾರದಲ್ಲಿ ಬಿಜೆಪಿಯದ್ದು ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ’ ಎಂದು ಜೆಡಿಎಸ್‌ ಕಟು ಶಬ್ಧಗಳಿಂದ ಟೀಕಿಸಿದೆ.

ಬಿಜೆಪಿಯ ಮೂರನೇ ಪಟ್ಟಿಯು ಸೋಮವಾರ ಪ್ರಕಟವಾಗಿದ್ದು ಅದರಲ್ಲಿ ಕೊಪ್ಪಳ ಸಂಸದ ಸಂಗಣ ಕರಡಿ ಸೊಸೆ ಮಂಜುಳಾ ಅಮರೇಶ್‌, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್‌ಗೆ ಟಿಕೆಟ್‌ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಇಂದು ಸರಣಿ ಟ್ವೀಟ್‌ ಮಾಡಿದೆ. ‘ಗೋಸುಂಬೆ ರಾಜಕಾರಣದ ಶಿಖರಕ್ಕೇರಿ, ಜನತೆಗೆ ಮಂಕುಬೂದಿ ಎರಚುವ ಬಿಜೆಪಿ ಪಕ್ಷವು ಬರೀ ಅಪಪ್ರಚಾರ ಮಾಡುವುದರಲ್ಲಿ ಸೈ ಎನಿಸಿಕೊಳ್ಳುತ್ತದೆ. ಕುಟುಂಬ ರಾಜಕಾರಣ ಅಂತೆಲ್ಲ ಕತೆ ಹೇಳುತ್ತಾ, ತಾನು ಮಾತ್ರ ಕುಟುಂಬ ಸದಸ್ಯರಿಗೆ ಟಿಕೆಟ್ ಘೋಷಣೆ ಮಾಡಿ ಠೇಂಕರಿಸುತ್ತದೆ. ಇಂತಹ ನಾಚಿಕೆಗೆಟ್ಟ ರಾಜಕಾರಣ ಹೇಸಿಗೆ ತರಿಸುವಂತದ್ದು’ ಎಂದು ಆರೋಪಿಸಿದೆ.

ADVERTISEMENT

‘ಜೆಡಿಎಸ್ ಪಕ್ಷವು ಮಾತು ಕೊಟ್ಟಂತೆ ಹಾಸನದ ಟಿಕೆಟ್ ಅನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸ್ವರೂಪ್ ಅವರಿಗೆ ನೀಡಿದೆ. ಮಾತು ತಪ್ಪದೇ ಬದ್ಧತೆ ತೋರುವುದು ನಮ್ಮಿಂದ ಮಾತ್ರ ಸಾಧ್ಯ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್‌ಗೆ ಟಿಕೆಟ್ ಘೋಷಿಸಿರುವ ಬಿಜೆಪಿಗೆ ಕುಟುಂಬ ರಾಜಕಾರಣ ಎಂದು ಮಾತನಾಡಲು ಯಾವ ನೈತಿಕತೆ ಇದೆ?’ ಎಂದು ಪ್ರಶ್ನೆ ಮಾಡಿದೆ.

‘ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಸಂಸದ ಕರಡಿ ಸಂಗಣ್ಣನವರ ಹಿರಿ ಸೊಸೆ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಪತ್ನಿಗೂ ಟಿಕೆಟ್ ನೀಡಲಾಗಿದೆ. ಇವರೆಲ್ಲರ ನಡುವೆ ಮೋಸಗೊಂಡವರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರು,‌ ಪಾಪ! ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ ಬಿಜೆಪಿಯದ್ದು’ ಎಂದು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.