ಹೊಸಪೇಟೆ (ವಿಜಯನಗರ): ಟಿಕೆಟ್ ಹಂಚಿಕೆಯಲ್ಲಿ ಅನ್ಯ ಪಕ್ಷದವರಿಗೆ ಮಣೆ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರನ್ನು ತಳ್ಳಾಡಿ ಅವರನ್ನು ಟಿಕೆಟ್ ವಂಚಿತ ಮುಖಂಡರ ಬೆಂಬಲಿಗರು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಟಿಕೆಟ್ ಹಂಚಿಕೆ ನಂತರ ಭುಗಿಲೆದ್ದಿರುವ ಅಸಮಾಧಾನ ಶಮನಕ್ಕೆ ನಗರದ ಹೋಟೆಲ್ ವೊಂದರಲ್ಲಿ ಸಂಜೆ ಸಚಿವ ಆನಂದ್ ಸಿಂಗ್ ಹಾಗೂ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಕೂಡ್ಲಿಗಿ, ಹೂವಿನಹಡಗಲಿಯಲ್ಲಿ ವಾರದ ಹಿಂದೆ ಪಕ್ಷ ಸೇರಿದವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ಶ್ರಮಿಸುತ್ತಿರುವವರಿಗೆ ಅನ್ಯಾಯವಾಗಿದೆ. ಮೂಲ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹಡಗಲಿ ಬಿಜೆಪಿ ಮುಖಂಡ ಓದೋ ಗಂಗಪ್ಪ ಬೆಂಬಲಿಗರು ಹೇಳಿದರು.
ಈಗ ಘೋಷಿಸಿರುವ ಅಭ್ಯರ್ಥಿಗಳ ಹೆಸರು ಹಿಂಪಡೆಯಬೇಕು. ಪಕ್ಷ ಕಟ್ಟಿ ಬೆಳೆಸಿದವರ ಪೈಕಿ ಸ್ಥಳೀಯ ಯಾರಿಗಾದರೂ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಬಿಜೆಪಿ ಹೇಗೆ ಗೆಲ್ಲುತ್ತದೆ ನೋಡಿಯೇ ಬಿಡುತ್ತೇವೆ ಎಂದು ಸವಾಲು ಹಾಕಿದರು ಎಂದು ಗೊತ್ತಾಗಿದೆ.
ಹಡಗಲಿ, ಕೂಡ್ಲಿಗಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿ ನಿಷ್ಠಾವಂತರಿಗೆ ಟಿಕೆಟ್ ಕೊಡಬೇಕು. ಹಗರಿಬೊಮ್ಮನಹಳ್ಳಿಯಲ್ಲಿ ಇದುವರೆಗೆ ಯಾರಿಗೂ ಟಿಕೆಟ್ ಘೋಷಿಸಿಲ್ಲ. ಆದರೆ, ಸ್ಥಳೀಯರಿಗೆ, ಪಕ್ಷ ನಿಷ್ಠರಿಗೆ ಟಿಕೆಟ್ ಕೊಡಬೇಕು. ಇಲ್ಲವಾದರೆ ನೋಡಿಕೊಳ್ಳುತ್ತೇವೆ ಎಂದು ಏರು ದನಿಯಲ್ಲಿ ಆಗ್ರಹಿಸಿದರು.
ಈ ವೇಳೆ ಗಂಗಪ್ಪ, ಮಾಜಿಶಾಸಕ ಚಂದ್ರ ನಾಯ್ಕ ಬೆಂಬಲಿಗರು ಹಾಗೂ ಜಿಲ್ಲಾಧ್ಯಕ್ಷರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಸಭೆ ಮೊಟಕುಗೊಳಿಸಲಾಯಿತು. ಈ ವೇಳೆ ಹೋಟೆಲ್ ಹೊರಗಡೆ ಸೇರಿದ್ದ ಕಾರ್ಯಕರ್ತರು ಚನ್ನಬಸವಗೌಡ ಪಾಟೀಲ ಅವರನ್ನು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ತಳ್ಳಾಡಿದರು. ಸ್ಥಳದಲ್ಲಿ ಗೊಂದಲ ಉಂಟಾಗಿತ್ತು. ಸಚಿವ ಆನಂದ್ ಸಿಂಗ್ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಹಡಗಲಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದರು.
ಈ ಸಂಬಂಧ ಚನ್ನಬಸವನಗೌಡ ಪಾಟೀಲ ಅವರನ್ನು ಪ್ರಜಾವಾಣಿ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.