ADVERTISEMENT

Interview | ಸೊರಬದಲ್ಲಿ ಮೋದಿ ಮ್ಯಾಜಿಕ್ ನಡೆಯದು: ಮಧು ಬಂಗಾರಪ್ಪ

ಮಲೆನಾಡಿನ ಜನಾಕ್ರೋಶವೇ ಈ ಬಾರಿಯ ಚುನಾವಣೆ ದಿಕ್ಸೂಚಿ: ಮಧು ಬಂಗಾರಪ್ಪ

ವೆಂಕಟೇಶ ಜಿ.ಎಚ್.
Published 26 ಏಪ್ರಿಲ್ 2023, 5:36 IST
Last Updated 26 ಏಪ್ರಿಲ್ 2023, 5:36 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   ಪ್ರಜಾವಾಣಿ ಚಿತ್ರ
ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ, ವಿಧಾನಸಭೆ ಚುನಾವಣೆ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಹಲವು ಮಹತ್ತರ ಜವಾಬ್ದಾರಿಗಳನ್ನು ಹೊತ್ತಿರುವ ಮಧು ಬಂಗಾರಪ್ಪ ಈ ಬಾರಿ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಚುನಾವಣೆಯ ಅಖಾಡದಲ್ಲಿ ಸತತ ಐದನೇ ಬಾರಿಗೆ ಸಹೋದರ ಕುಮಾರ್ ಬಂಗಾರಪ್ಪ ಅವರೊಂದಿಗೆ ಪೈಪೋಟಿಗೆ ಇಳಿದಿದ್ದಾರೆ. ಅಮ್ಮನ (ಶಕುಂತಲಾ ಬಂಗಾರಪ್ಪ) ಸ್ಮರಣೆ ಕಾರ್ಯಕ್ರಮದ ಸಿದ್ಧತೆ ಒಂದೆಡೆ, ಪಕ್ಷ ಸೇರ್ಪಡೆಗೆ ಬರುವವರ ಗೌಜು ಇನ್ನೊಂದೆಡೆ. ಹೀಗೆ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಸೊರಬ ತಾಲ್ಲೂಕಿನ ಕುಬಟೂರಿನ ತಮ್ಮ ‘ಬಂಗಾರ ನಿವಾಸ‘ದಲ್ಲಿ ಮಧು ಬಂಗಾರಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

ಕಳೆದ ಬಾರಿ ಸೋತಿದ್ದೀರಿ, ಈ ಬಾರಿ ಸಿದ್ಧತೆ ಹೇಗಿದೆ?

ಸೊರಬದ ಜನರು ಕಳೆದ ಬಾರಿ ನನ್ನ ವಿರುದ್ಧ ಮತ ಹಾಕಿರಲಿಲ್ಲ. ಬದಲಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿಗೆ ಮತ ಹಾಕಿದ್ದರು. ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ಕರೆದೊಯ್ಯುವ ಸಂಕಲ್ಪದಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವೆ. ಜನರು ವಿಶ್ವಾಸವಿಟ್ಟು ಬರುತ್ತಿದ್ದಾರೆ. ಕ್ಷೇತ್ರದ ಹಿರಿ–ಕಿರಿಯರನ್ನು ಒಟ್ಟಿಗೆ ಕರೆದೊಯ್ಯುತ್ತಿರುವೆ. ಕುಬಟೂರಿನಲ್ಲೇ ಚಿಕ್ಕ ವಾರ್‌ ರೂಂ ಮಾಡಿರುವೆ. ಮನೆ ಮನೆ ಸಂಪರ್ಕಿಸುತ್ತಿರುವೆ. ಪತ್ನಿ, ಮಗ, ಅಕ್ಕ–ತಂಗಿಯರು ಸಾಥ್ ನೀಡಿದ್ದಾರೆ.

ಈ ಬಾರಿ ಬಿಜೆಪಿಗೆ ಕರ್ನಾಟಕದಲ್ಲಿ ಪ್ರಚಾರದ ಮಟ್ಟಿಗೆ ಪ್ರಧಾನಿ ನರೇಂದ್ರ ಮೊದಿಯೇ ಮುಂಚೂಣಿ ದಂಡನಾಯಕ. ‘ಮೋದಿ ಮ್ಯಾಜಿಕ್‘ ಹೇಗೆ ಎದುರಿಸುವಿರಿ?

ADVERTISEMENT

ಬಡವರ ಮನೆಯಲ್ಲಿ ನರೇಂದ್ರ ಮೋದಿ ಈಗ ಏನು ವಿಶ್ವಾಸ ಉಳಿಸಿಕೊಂಡಿದ್ದಾರೆ? ಅಡುಗೆ ಅನಿಲ ಸಿಲಿಂಡರ್‌, ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆಯ ಜೊತೆಗೆ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರು ಬದುಕುವುದೇ ದುರ್ಲಭವಾಗಿದೆ. ಬಿಜೆಪಿಯವರು ಇಲ್ಲಿಯವರೆಗೆ ಮೋದಿ ಹೆಸರಲ್ಲಿ ವೋಟ್‌ ಕೇಳಿದ್ದಾರೆ. ಇನ್ನು ಕೇಳಲು ಆಗದು. ಸೊರಬದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲಿ ಎಲ್ಲಿಯೂ ಮೋದಿ ಮ್ಯಾಜಿಕ್ ನಡೆಯದು.ಮೋದಿಯ ಅಬ್ಬರ ತಡೆಗೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಸಾಕು. ಜನರು ಉಸಿರಾಡಲು, ಉಸಿರು ಮುಂದುವರಿಸಲು ಹಸಿವು ನೀಗಿಸಬೇಕು. ಬಡವರ ಮನೆ ಸದಾ ಬೆಳಗಬೇಕು. ಅದಕ್ಕೆ ಉಚಿತ ಅಕ್ಕಿ ಹಾಗೂ ವಿದ್ಯುತ್‌ನ ಗ್ಯಾರಂಟಿ ನೀಡಿದ್ದೇವೆ.

ಸೊರಬದ ಚುನಾವಣೆ ಮಟ್ಟಿಗೆ ಈಗಲೂ ಎಸ್‌. ಬಂಗಾರಪ್ಪ ಅವರ ಹೆಸರು ಪ್ರಸ್ತುತವೇ?

ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಿರುವುದು ಸೂರು, ಅನ್ನ. ಇದು ಕಾಂಗ್ರೆಸ್‌ ಪಕ್ಷದ ಆಶಯ. ಅದಕ್ಕೆ ಪೂರಕವಾಗಿ 30 ವರ್ಷಗಳ ಹಿಂದೆಯೇ ಬಂಗಾರಪ್ಪ ಆಶ್ರಯ, ಅಕ್ಷಯ ಯೋಜನೆಗಳನ್ನು ಪರಿಚಯಿಸಿದ್ದರು. ಅವರ ನೈಜ ಹಿಂದುತ್ವ ದೃಷ್ಟಿಕೋನದ ಫಲವಾಗಿ ಆರಾಧನಾ ಯೋಜನೆ ಒಡಮೂಡಿತ್ತು. ಅದು ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು, ಬೌದ್ಧರು ಎಲ್ಲರನ್ನೂ ಬೆಸೆದಿತ್ತು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕದ ಮೂಲಕ ಲಕ್ಷಾಂತರ ಬಡವರ ಮನೆಗಳ ದೀಪ ಬೆಳಗಿದ್ದರು. ಹೀಗಾಗಿ ಸೊರಬ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಸಾಹೇಬರ (ಬಂಗಾರಪ್ಪ) ಹೆಸರು ಈಗಲೂ ಪ್ರಸ್ತುತ.

ಯಾವ ವಿಚಾರಗಳನ್ನು ಪ್ರಮುಖವಾಗಿ ಜನರ ಮುಂದಿಟ್ಟು ಮತ ಕೇಳುತ್ತಿದ್ದೀರಿ?

ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರ ಹಿತ, ಅಡಿಕೆಗೆ ಎಲೆಚುಕ್ಕಿ ರೋಗ ಬಾಧೆ ಸೇರಿದಂತೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಪಕ್ಷದ ಮುಖಂಡ ರಮೇಶ್‌ ಹೆಗಡೆ ನೇತೃತ್ವದ ತಂಡ ಅಧ್ಯಯನ ವರದಿ ಸಲ್ಲಿಸಿದೆ. ಅದನ್ನೆಲ್ಲ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. ಶಿವಮೊಗ್ಗದಲ್ಲಿ ಮಲೆನಾಡಿನ ಜನಾಕ್ರೋಶ ಸಮಾವೇಶ ನಡೆಸಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಕರೆತಂದು ಸಮಸ್ಯೆ ಪರಿಹಾರದ ವಾಗ್ದಾನ ನೀಡಿದ್ದೇವೆ. ಶೇ 40ರಷ್ಟು ಕಮಿಷನ್ ಪರಿಣಾಮ ಬಿಜೆಪಿ ಹುಟ್ಟುಹಾಕಿರುವ ಹೊಸ ಬ್ರ್ಯಾಂಡ್‌ನ ಕಳಪೆ ಕಾಮಗಾರಿ, ಅದಕ್ಕೆ ಪೂರಕವಾದ ಹಪ್ಪಳದಂತಹ ಟಾರ್‌ ರಸ್ತೆಗಳ ಬಗ್ಗೆಯೂ ಜನರ ಗಮನ ಸೆಳೆಯುವೆ. ಮಹಿಳಾ ಸಬಲೀಕರಣ, ಯುವಜನರಿಗೆ ಉದ್ಯೋಗಾವಕಾಶಗಳ ವಿಚಾರದಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳ ಬಗ್ಗೆಯೂ ಜನರಿಗೆ ಹೇಳುವೆ.

ಬಂಗಾರಪ್ಪ ಅವರ ಸಮಾಧಿ ಸ್ಥಳದ ಅಭಿವೃದ್ಧಿ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಇದೆಯಲ್ಲ?

ಸರ್ಕಾರದಿಂದ ಹಣ ತಂದು ಕಟ್ಟುವುದಾಗಿದ್ದರೆ ಯಾವತ್ತೋ ಕೆಲಸ ಮುಗಿಯುತ್ತಿತ್ತು. ಅದು ಬರೀ ಸಮಾಧಿ ರೀತಿ ಇರಬಾರದು. ಅಲ್ಲಿ ಅವರ ಚಿಂತನೆಗಳು ಜೀವಂತವಾಗಿರಬೇಕು. ಹೀಗಾಗಿ ಅವರ ಮಗನಾಗಿ ಕೊಟ್ಯಂತರ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ‘ಬಂಗಾರ ಧಾಮ’ದ ಹೆಸರಲ್ಲಿ ಸಮಾಧಿ ಕಟ್ಟಿಸುತ್ತಿದ್ದೇನೆ. ಹಿಂದಿನ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ₹ 2 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದರೂ ಅದನ್ನು ನಿರಾಕರಿಸಿರುವೆ. ನಾನು ಸತ್ತ ಮೇಲೂ ಸಮಾಧಿ ಸ್ಥಳದ ನಿರ್ವಹಣೆಗೆ ಅನುಕೂಲವಾಗಲಿ ಎಂದು ಸುತ್ತಲೂ ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುತ್ತಿದ್ದೇನೆ. ಹೀಗಾಗಿ ತಡವಾಗಿದೆ. ಶೀಘ್ರ ಪೂರ್ಣಗೊಳ್ಳಲಿದೆ.

ಬಿಜೆಪಿಯ ‘ಹಿಂದುತ್ವ‘ ರಾಜಕೀಯ ಹೇಗೆ ಎದುರಿಸುವಿರಿ?

ಸೊರಬದಲ್ಲಿ ‘ಹಿಂದುತ್ವ’ದ ರಾಜಕೀಯ ಇಲ್ಲ. ಎಲ್ಲ ಜಾತಿ ವರ್ಗದವರು ನಮ್ಮನ್ನು ಪ್ರೀತಿ ಮಾಡುತ್ತಾರೆ. 80ರ ದಶಕದಲ್ಲಿ ಕೋಮುಗಲಭೆಗೆ ಸಿಲುಕಿ ತೊಂದರೆಗೀಡಾಗಿದ್ದ ಮುಸ್ಲಿಮರಿಗೆ ಕಾನಕೇರಿ, ಅಂಡಿಗೆಯಲ್ಲಿ ನಮ್ಮ ತಂದೆ (ಎಸ್‌. ಬಂಗಾರಪ್ಪ) ಆಶ್ರಯ ಕೊಟ್ಟಿದ್ದರು. ಹಿಂದುತ್ವ ವಿಚಾರ ಈಗ ದೇಶದಲ್ಲಿ ತುತ್ತತುದಿ ತಲುಪಿ ಕೆಳಗೆ ಇಳಿಯುತ್ತಿದೆ. ನಾವು ದ್ವೇಷ ಮಾಡುವುದಿಲ್ಲ. ಜಾತಿ–ಧರ್ಮಕ್ಕಿಂತ ಮಾನವೀಯತೆಯೇ ದೊಡ್ಡದು ಎಂಬ ಭಾವನೆ ಜನರಲ್ಲಿ ಈಗ ಮೊಳೆತಿದೆ. ಹೀಗಾಗಿ ಬಿಜೆಪಿಯವರು ಪಾಕಿಸ್ತಾನದ ಬಗ್ಗೆ ಮಾತಾಡಿದರೆ ಯಾರೂ ನಂಬುತ್ತಿಲ್ಲ. ಶ್ರೀರಾಮನ ಗುಡಿ ಕಟ್ಟಿ ಆಯ್ತು. ಪರೇಶ್ ಮೇಸ್ತಾ ವಿಚಾರದಲ್ಲಿ ವಾಸ್ತವ ಗೊತ್ತಾಗಿದೆ. ಅವರ (ಬಿಜೆಪಿ) ಬತ್ತಳಿಕೆ ಪೂರ್ಣ ಖಾಲಿ ಆಗಿದೆ.

ಅಪ್ಪನಿಂದಲೇ ರಾಜಕೀಯ ದೀಕ್ಷೆ
ಎಸ್.ಬಂಗಾರಪ್ಪ ಅವರಿಂದ ರಾಜಕೀಯ ದೀಕ್ಷೆ ಪಡೆದ ಪುತ್ರ ಮಧು ಬಂಗಾರಪ್ಪ 2004ರಲ್ಲಿ ಮೊದಲ ಬಾರಿಗೆ ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2008ರಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯಡಿ ಸ್ಪರ್ಧಿಸಿದ್ದ ಅವರು, 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಜಯ ಗಳಿಸಿದ್ದರು. 2018ರ ಚುನಾವಣೆಯಲ್ಲಿ ಮರು ಸ್ಪರ್ಧೆಗಿಳಿದು ತೆನೆಹೊತ್ತ ಮಹಿಳೆಯ ಚಿಹ್ನೆಯಡಿಯೇ ಸ್ಪರ್ಧಿಸಿ ಸೋತಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನ ಕೈ ಹಿಡಿದು ಕಣಕ್ಕಿಳಿದಿದ್ದಾರೆ. ಕೆಲ ದಿನಗಳ ಹಿಂದೆ, ಮುಳುಗಡೆ ಸಂತ್ರಸ್ತರ ಪರ ಆಯನೂರಿನಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಹಾಗೂ ಶಿವಮೊಗ್ಗದಲ್ಲಿ ಮಲೆನಾಡಿನ ಜನಾಕ್ರೋಶ ಸಮಾವೇಶ ಕೈಗೊಂಡು ರಾಜ್ಯದ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.