ADVERTISEMENT

ಗುಳೆ ಹೋದವರ ಜಾಡಿನಲ್ಲಿ...:ವಲಸೆ ಕಾರ್ಮಿಕರನ್ನು ಕರೆ ತರಲು ಅಭ್ಯರ್ಥಿಗಳ ಕಸರತ್ತು

ಮಲ್ಲಿಕಾರ್ಜುನ ನಾಲವಾರ
Published 13 ಏಪ್ರಿಲ್ 2023, 23:45 IST
Last Updated 13 ಏಪ್ರಿಲ್ 2023, 23:45 IST
ಮುಂಬೈಯ ವಸೈ ಪ್ರದೇಶದಲ್ಲಿ ಕೂಲಿಕಾರ್ಮಿಕರನ್ನು ಉದ್ದೇಶಿಸಿ ಕಲಬುರಗಿಯ ಸಂಸದ ಡಾ.ಉಮೇಶ ಜಾಧವ ಮಾತನಾಡಿದರು
ಮುಂಬೈಯ ವಸೈ ಪ್ರದೇಶದಲ್ಲಿ ಕೂಲಿಕಾರ್ಮಿಕರನ್ನು ಉದ್ದೇಶಿಸಿ ಕಲಬುರಗಿಯ ಸಂಸದ ಡಾ.ಉಮೇಶ ಜಾಧವ ಮಾತನಾಡಿದರು   

ಕಲಬುರಗಿ: ದುಡಿಮೆಗಾಗಿ ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್‌ಗೆ ಗುಳೆ ಹೋಗಿರುವ ಕೂಲಿ ಕಾರ್ಮಿಕರ ಕುಟುಂಬಗಳ ಜಾಡು ಹಿಡಿದು ತೆರಳಿ, ಅವರನ್ನು ಮತದಾನಕ್ಕೆ ಕರೆತರಲು ಆಯಾ ಪಕ್ಷಗಳ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಕಸರತ್ತು ನಡೆಸಿದ್ದಾರೆ.

ಮಹಾನಗರಗಳಲ್ಲಿ ದುಡಿಯು ತ್ತಿರುವ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳದ ಜನರನ್ನು ಸಂಪರ್ಕಿಸಿ, ಮನವೊಲಿಸುವ ಮತ್ತು ಅವರ ವಾಸಸ್ಥಳದಲ್ಲೇ ಸಭೆಗಳನ್ನು ನಡೆಸುವ ಕಾರ್ಯದಲ್ಲೂ ನಿರತರಾಗಿದ್ದಾರೆ.

ಚಿಂಚೋಳಿ, ಚಿತ್ತಾಪುರ, ಕಮಲಾಪುರ, ಕಾಳಗಿ, ಆಳಂದ ತಾಲ್ಲೂಕುಗಳಿಂದ ತಲಾ 8 ರಿಂದ 10 ಸಾವಿರ ಕೂಲಿ ಕಾರ್ಮಿಕರು ಗುಳೆ ಹೋಗಿದ್ದಾರೆ. ಅವರಲ್ಲಿ ಲಂಬಾಣಿ, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿಯವರೇ ಹೆಚ್ಚು.

ADVERTISEMENT

ವಿವಿಧ ಪಕ್ಷಗಳ ಹೋಬಳಿ ಮಟ್ಟದ ನಾಯಕರು ಗ್ರಾಮಗಳಿಗೆ ತೆರಳಿ, ಅಲ್ಲಿನ ಸಂಬಂಧಿಕರ ಮೂಲಕ ವಲಸೆ ಹೋದವರ ಮೊಬೈಲ್‌ ಸಂಖ್ಯೆ ಸಮೇತ ಮಾಹಿತಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಇಟ್ಟಿಗೆ ಭಟ್ಟಿ, ಹಾಲೋ ಬ್ರಿಕ್ಸ್, ಜಲ್ಲಿಕಲ್ಲು ಕ್ರಷರ್‌, ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್‌ ಸೇರಿ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ.

‘ಮತ ಹಾಕಲು ಬಂದು ಹೋಗಲು ಕನಿಷ್ಠ ಮೂರು ದಿನ ಬೇಕು. ದಿನದ ಕೂಲಿ, ಉಪಹಾರ, ಊಟ ಮತ್ತು ವಾಹನದ ವ್ಯವಸ್ಥೆ ಖರ್ಚು ಭರಿಸಬೇಕು. ಇದೆಲ್ಲದರ ವ್ಯವಸ್ಥೆ ಮಾಡಿದರೆ ಮಾತ್ರ ನಾವು ಮತದಾನಕ್ಕೆಂದು ಊರಿಗೆ ಹೋಗಲು ಸಾಧ್ಯ. ಇವೆಲ್ಲದರ ವ್ಯವಸ್ಥೆ ಮಾಡುವುದಾಗಿ ಆಯಾ ಪಕ್ಷಗಳ ಉಸ್ತುವಾರಿಗಳು ವಾಗ್ದಾನ ಮಾಡಿದ್ದಾರೆ’ ಎಂದು ಪುಣೆಯ ವಲಸಿಗ ಕಾರ್ಮಿಕರೊಬ್ಬರು ತಿಳಿಸಿದರು.

‘ಆಳಂದದಿಂದ 7 ಸಾವಿರ ಕೂಲಿ ಕಾರ್ಮಿಕರು ಮುಂಬೈ, ಪುಣೆ, ಕೊಲ್ಹಾಪುರ, ಉಮರ್ಗಾಕ್ಕೆ ವಲಸೆ ಹೋಗಿದ್ದಾರೆ. ಮುಂಬೈಯ ಕುರುವನಾಕಾದಿಂದ ಕಾರ್ಮಿಕರನ್ನು ಕರೆ ತರಲು ಮೂರು ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಗ್ರಾಮಗಳಿಗೆ ಒಂದೊಂದು ಬಸ್ ವ್ಯವಸ್ಥೆ ಮಾಡಿದ್ದಾರೆ’ ಎಂದು ಕಟ್ಟಡ ಮತ್ತು ಕ್ವಾರಿ ಕಾರ್ಮಿಕರ ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಗಡ ರೈಲ್ವೆ ಟಿಕೆಟ್ ಬುಕ್ಕಿಂಗ್, ಟ್ರಾವೆಲ್ಸ್‌ ವಾಹನಗಳನ್ನು ಬಳಸಲು ಚರ್ಚೆ ನಡೆದಿದೆ. ಮತದಾನದ ದಿನಕ್ಕೆ ಸರಿಯಾಗಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಕಾರ್ಮಿಕರು ಬಂದು ಮತ ಹಾಕಿ ಹೋಗುವ ಯೋಜನೆಯೂ ರೂಪಿಸಲಾಗಿದೆ.

ಯಾದಗಿರಿ, ಗುರುಮಠಕಲ್‌, ಶಹಾಪುರ, ಸುರಪುರ ತಾಲ್ಲೂಕಿನ ಜನರು ಬೆಂಗಳೂರು, ಮಂಗಳೂರು, ಮುಂಬೈ ಸೇರಿದಂತೆ ವಿವಿಧ ಮಹಾನಗರ ಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕೂಲಿ ಕಾರ್ಮಿಕರ ನಾಯಕರನ್ನು ಮತ್ತು ಆಯಾ ಜಾತಿ, ಸಮುದಾಯದ ಮುಖಂಡರ ಮೂಲಕ ಸಂಪರ್ಕಿಸಿ, ಮತದಾನ ದಿನದಂದು ಕರೆ ತರಲು ಚರ್ಚೆ ನಡೆದಿದೆ’ ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಬೀದರ್ ಮತ್ತು ರಾಯಚೂರು ಜಿಲ್ಲೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿನ ರಾಜಕೀಯ ಪಕ್ಷದ ಮುಖಂಡರು ವಲಸೆ ಕೂಲಿ ಕಾರ್ಮಿಕರನ್ನು ಪತ್ತೆ ಮಾಡಿ, ಸಂಪರ್ಕಿಸಿ ಊರಿಗೆ ಕರೆ ತರಲು ಸಿದ್ಧತೆ ನಡೆಸಿದ್ದಾರೆ.

ಇದೆಲ್ಲದರ ಮಧ್ಯೆ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂಬ ಆಶಯ ಹೊತ್ತು ಕೊಪ್ಪಳ ಜಿಲ್ಲಾ ಸ್ವೀಪ್‌ ಸಮಿತಿಯ ಅಧ್ಯಕ್ಷರಾಗಿರುವ ರಾಹುಲ್ ರತ್ನಂ ಪಾಂಡೆ ಅವರೂ ಸಹ ವಲಸೆ ಹೋದ ಕಾರ್ಮಿಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ.

‘ಬೆಂಗಳೂರು, ಮಂಗಳೂರು, ಕೇರಳ, ಆಂಧ್ರ, ಗೋವಾಕ್ಕೆ ತೆರಳಿರುವ ವಲಸೆ ಕಾರ್ಮಿಕರನ್ನು ಸಂಪರ್ಕಿಸಿ, ಊರಿಗೆ ಬಂದು ಮತ ಚಲಾಯಿಸುವಂತೆ ಅವರ ಸಂಬಂಧಿಕರ ಮೂಲಕ ಕೋರಲಾಗುತ್ತಿದೆ’ ಎಂದಿದ್ದಾರೆ.

‘ಮುಂಬೈನಲ್ಲಿ ಕಲಬುರಗಿ, ಬೀದರ್ ನಾಯಕರ ಪ್ರಚಾರ’

‘ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳ ಮುಖಂಡರು ಮುಂಬೈಗೆ ಬಂದು, ವಲಸಿಗರನ್ನು ಭೇಟಿಯಾಗಿ ತಮ್ಮ ಪಕ್ಷದ ಸಾಧನೆ, ಸಿದ್ಧಾಂತ ಮತ್ತು ನಾಯಕರ ಬಗ್ಗೆ ಪ್ರಚಾರ ಮಾಡುತ್ತಾರೆ’ ಎಂದು ಮುಂಬೈನಲ್ಲಿರುವ ಸಾಮಾಜಿಕ ಕಾರ್ಯಕರ್ತ ರಾಮು ರಾಠೋಡ ತಿಳಿಸಿದರು.

‘ಮುಂಬೈಯ ಸಾಂತಾಕ್ರೂಜ್, ಬಾಂದ್ರಾ, ಅಂಧೇರಿ, ಮಲಾಡ್, ಬೊರಿವಲಿ, ಕೊಲಾಬಾ, ಅಂಬೇಡ್ಕರ್ ನಗರ ಸೇರಿ ಹಲವೆಡೆ ಕನ್ನಡಿಗರು ನೆಲೆಸಿದ್ದಾರೆ. ಯಾವುದೇ ರಾಜ್ಯದ ಚುನಾವಣೆ ನಡೆದರೂ ಆಯಾ ರಾಜ್ಯಗಳ ರಾಜಕಾರಣಿಗಳು ಬಂದು ಗುಳೆ ಮತದಾರರನ್ನು ಕರೆದೊಯ್ಯುತ್ತಾರೆ’ ಎಂದು ಹೇಳಿದರು.

ಚಿಂಚೋಳಿ ಕ್ಷೇತ್ರದ ಬಹುತೇಕ ಲಂಬಾಣಿ ಸಮುದಾಯವರು ಮುಂಬೈನಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಮತ್ತು ಸಂಸದ ಡಾ.ಉಮೇಶ ಜಾಧವ ಅವರು ಅಲ್ಲಿಗೇ ಹೋಗಿ ಪ್ರಚಾರ ನಡೆಸಿದ್ದಾರೆ.

ಸ್ವಂತ ಹಣದಲ್ಲಿ ಬಂದು ಮತದಾನ!

ಮತದಾನಕ್ಕೆ ಬರುವ ವಲಸಿಗರು ಕೂಲಿ ಮತ್ತು ಸಾರಿಗೆಯ ಹಣದ ಬೇಡಿಕೆ ಇರಿಸುವುದು ಸಾಮಾನ್ಯ. ಆದರೆ, ಕೋವಿಡ್‌ ದಿನಗಳಲ್ಲಿ ತವರು ಸೇರಲು ಮುಖಂಡರು ನೆರವಾದ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ವಂತ ಹಣದಲ್ಲಿ ಊರಿಗೆ ಬಂದು ಮತದಾನ ಮಾಡುವುದಾಗಿ ತಿಳಿಸಿದ್ದಾರೆ. ‘ಲಾಕ್‌ಡೌನ್ ಅವಧಿಯಲ್ಲಿ ನಗರಗಳಲ್ಲಿ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ಆಳಂದದಿಂದ ದಿನಸಿ ಕಿಟ್ ಕಳುಹಿಸಿದ್ದೆವು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಸಂಸದರ ಹಾಗೂ ಜಿಲ್ಲಾಧಿಕಾರಿ ನೆರವಿನಿಂದ ಮನೆಗೆ ಕರೆತರಲಾಯಿತು. ಇದನ್ನು ನೆನಪಿನಲ್ಲಿ ಇಟ್ಟುಕೊಂಡಿರುವ ಕೆಲ ಕೂಲಿ ಕಾರ್ಮಿಕರು ತಮ್ಮ ಖರ್ಚಿನಲ್ಲಿ ಮತದಾನಕ್ಕೆ ಬರುವುದಾಗಿ ಹೇಳಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೆಮ್ಮೆಯಿಂದಲೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.