ಹುಬ್ಬಳ್ಳಿ: ಜಿಲ್ಲೆಯ ಕುಂದಗೋಳ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.
ತಾಲ್ಲೂಕಿನ ಅದರಗುಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು, ‘ಬೆಂಬಲಿಗರ ಆಶಯದಂತೆ ಪಕ್ಷೇತರವಾಗಿ ಸ್ಪರ್ಧೆ ಮಾಡುವೆ’ ಎಂದು ಘೋಷಿಸಿದರು. ಜಿಲ್ಲಾ ಘಟಕದ ಅಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರವನ್ನು ಬೆಂಬಲಿಗರಿಗೆ ಪ್ರದರ್ಶಿಸಿದರು.
‘ಕುಂದಗೋಳದಲ್ಲಿ ಪಕ್ಷ ಕಟ್ಟಿ ಬೆಳೆಸಿದ ನನಗೆ ಟಿಕೆಟ್ ನೀಡದ ಬಿಜೆಪಿಯಲ್ಲಿ ಇರಬೇಡಿ ಎಂದು ಬೆಂಬಲಿಗರು ಹೇಳಿದ್ದಾರೆ. ನನಗೆ ಪಕ್ಷಕ್ಕಿಂತೆ ಬೆಂಬಲಿಗರೇ ಮುಖ್ಯ. ಅವರೇ ಒತ್ತಾಸೆಯಂತೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ’ ಎಂದರು.
ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಸ್ಪರ್ಧೆ: ‘ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಂಚೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಪಕ್ಷಕ್ಕೆ ಬಂದರೆ, ಟಿಕೆಟ್ ಕೊಡುವುದಾಗಿ ಹೇಳಿದ್ದರು. ಪಟ್ಟಿ ಬಿಡುಗಡೆ ನಂತರ, ಯಾರೂ ಸಂಪರ್ಕಿಸಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಒಂದು ವೇಳೆ, ಅವರೇನಾದರೂ ಟಿಕೆಟ್ ಕೊಡುವುದಾರೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಎಂಬ ಸಲಹೆಯನ್ನು ಬೆಂಬಲಿಗರು ನೀಡಿದ್ದಾರೆ. ಸದ್ಯದಲ್ಲೇ ಆ ಕುರಿತು ತೀರ್ಮಾನ ಕೈಗೊಳ್ಳುವೆ’ ಎಂದು ತಿಳಿಸಿದರು.
ಟಿಕೆಟ್ ತಪ್ಪಿಸಿದ ಮಹಾನ್ ನಾಯಕ: ‘ಇದುವರೆಗೆ 7 ಸಲ ಚುನಾವಣೆಗಳನ್ನು ಎದುರಿಸಿದ್ದೇನೆ. ಮೂರು ಸಲ ಗೆದ್ದಿದ್ದೇನೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುಣಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ಕಪ್ಪುಚುಕ್ಕೆ ಬರದಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ಸಮೀಕ್ಷೆಯಲ್ಲಿ ಚಿಕ್ಕನಗೌಡರ ಅವರ ಪರ ಅಲೆ ಇದೆ ಎಂದು ಮುಖಂಡರು ಹೇಳುತ್ತಾ ಬಂದಿದ್ದರು. ಮತ್ತೆ ನಿಮಗೆ ಅವಕಾಶ ಸಿಗಲಿದೆ ಎಂದಿದ್ದರು. ಕಡೆ ಗಳಿಗೆಯಲ್ಲಿ ಮಹಾನ್ ನಾಯಕರು ಟಿಕೆಟ್ ತಪ್ಪಿಸಿದರು. ಅವರ‍್ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕನಗೌಡರ ಅವರಿಗೆ ಟಿಕೆಟ್ ಸಿಗದಿರುವುದನ್ನು ಖಂಡಿಸಿ, ಬೆಂಬಲಿಗರು ಅದರಗುಂಚಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.