ADVERTISEMENT

Karnataka election 2023 | ಪ್ರಣಾಳಿಕೆ ಕಾನೂನು ವ್ಯಾಪ್ತಿಯಲ್ಲಿರಬೇಕು: ಓವೈಸಿ

ಚುನಾವಣೆ ಸಂದರ್ಭ ಪಕ್ಷಗಳ ಪ್ರಣಾಳಿಕೆಗಳು ಸಂಪೂರ್ಣ ಸುಳ್ಳಿನಿಂದ ಕೂಡಿರುತ್ತವೆ. ಅದು ಕಾನೂನು ವ್ಯಾಪ್ತಿಗೆ ಒಳಪಟ್ಟಾಗ ಮಾತ್ರ ಜನರಿಗೆ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸಬಹುದು

​ಪ್ರಜಾವಾಣಿ ವಾರ್ತೆ
Published 2 ಮೇ 2023, 15:14 IST
Last Updated 2 ಮೇ 2023, 15:14 IST
   

ಹುಬ್ಬಳ್ಳಿ: ‘ಪ್ರತಿಯೊಂದು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಕಾನೂನು ವ್ಯಾಪ್ತಿಗೆ ಒಳಪಟ್ಟಿರಬೇಕು. ಅದರಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಅಂತಹ ಪಕ್ಷಗಳ ಮುಖಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತಾಗಬೇಕು’ ಎಂದು ಅಖಿಲ ಭಾರತ ಮಜ್ಲೀಸ್-ಇ-ಇತ್ತೇಹಾದುಲ್ ಮುಸ್ಲಿಮಿನ್(ಎಐಎಂಐಎಂ)ದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಗ್ರಹಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಸಂದರ್ಭ ಹೊರಡಿಸುವ ಪಕ್ಷಗಳ ಪ್ರಣಾಳಿಕೆಗಳು ಸಂಪೂರ್ಣ ಸುಳ್ಳಿನಿಂದ ಕೂಡಿರುತ್ತವೆ. ಅದು ಕಾನೂನು ವ್ಯಾಪ್ತಿಗೆ ಒಳಪಟ್ಟಾಗ ಮಾತ್ರ ಜನರಿಗೆ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಆಡಳಿತವಿದ್ದಾಗಲೇ ಬಾಬರಿ ಮಸೀದಿ ಧ್ವಂಸವಾಗಿತ್ತು. ಅದನ್ನು ಪುನಃ ನಿರ್ಮಿಸುವುದಾಗಿ ಭರವಸೆ ನೀಡಿತ್ತು. ನಂತರ ಆಗಿದ್ದೇನು? ಕಾಂಗ್ರೆಸ್‌ ಹಿಂದಿನಿಂದಲೂ ಭರವಸೆ ನೀಡುತ್ತಲೇ ಬಂದಿದೆ. ಯಾವುದನ್ನೂ ಈಡೇರಿಸುವುದಿಲ್ಲ. ಇದೀಗ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಉಲ್ಲೇಖಿಸಿದೆ. ಅದು ಸಹ ಹಾಗೆಯೇ ಆಗುತ್ತದೆ. ಬೋಗಸ್‌ ಪ್ರಣಾಳಿಕೆ ಅದಾಗಿದೆ.
- ಅಸಾದುದ್ದೀನ್ ಓವೈಸಿ, ರಾಷ್ಟ್ರೀಯ ಅಧ್ಯಕ್ಷ ಅಖಿಲ ಭಾರತ ಮಜ್ಲೀಸ್-ಇ-ಇತ್ತೇಹಾದುಲ್ ಮುಸ್ಲಿಮಿನ್

‘ಜಗದೀಶ ಶೆಟ್ಟರ್‌ ಆರ್‌ಎಸ್‌ಎಸ್‌ ತತ್ವ ಸಿದ್ಧಾಂತದಲ್ಲಿ ಬೆಳೆದು, ಬಿಜೆಪಿ ಪ್ರಗತಿಗೆ ಕಾರಣರಾದವರು. ಏಕಾಏಕಿ ಅವರನ್ನು ಕಾಂಗ್ರೆಸ್‌ ಮುಖಂಡರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಜಾತ್ಯತೀತ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಜಾತ್ಯತೀತ ಪ್ರಮಾಣ ಪತ್ರ ನೀಡಲು ಅವರೇನು ನೋಟರಿ ಅಂಗಡಿ ಇಟ್ಟಿದ್ದಾರೆಯೇ? ಇಂತವರಿಂದ ರಾಜ್ಯದ ಜನತೆ ಏನುನ್ನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ADVERTISEMENT

‘ಯಾವ ಪಕ್ಷವೂ ಸೋಲಲೆಂದು ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ನಾವು ಕೆಲವು ಯೋಜನೆ, ತಂತ್ರಗಳನ್ನು ರೂಪಿಸಿ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಸೋಲಿನ ಭಯವಿದ್ದವರು ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಆರೋಪಿಸುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ’ ಎಂದರು.

ಮುಸ್ಲಿಮ್‌ ಮೀಸಲಾತಿ ರದ್ದುಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಓವೈಸಿ, ‘ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಮುಸ್ಲಿಮ್‌ ಮೀಸಲಾತಿ ರದ್ದುಪಡಿಸಿದ್ದು ಕಾನೂನು ಬಾಹಿರ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ನೀಡುವಂಥ ಮೀಸಲಾತಿ ಅದಾಗಿದೆ’ ಎಂದು ಹೇಳಿದರು.

‘ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಶೇ 90ರಷ್ಟು ಮಂದಿ ಅಮಾಯಕರು. ಅವರನ್ನು ಕಾಂಗ್ರೆಸ್‌ ಸಮಾಜ ಘಾತುಕರು ಎಂದು ಟೀಕಿಸುವ ಮೂಲಕ ನಿಜ ಬಣ್ಣ ಬಯಲು ಮಾಡಿಕೊಂಡಿದೆ. ಇಂತಹ ಹೇಳಿಕೆ ನೀಡಿರುವ ಕಾಂಗ್ರೆಸ್‌, ಹು–ಧಾ ಪೂರ್ವ ಕ್ಷೇತ್ರದಲ್ಲಿಯೇ ಕಾಲಿಡಬಾರದು. ಅಲ್ಲಿರುವ ಮುಸ್ಲಿಮ್‌ ಸಮುದಾಯದವರಿಂದ ಮತ ಕೇಳುವ ನೈತಿಕತೆಯೂ ಅದಕ್ಕಿಲ್ಲ’ ಎಂದರು.

‘ಏಕರೂಪ ನಾಗರಿಕ ಸಂಹಿತೆ ಕುರಿತು‌ ಪ್ರತಿಕ್ರಿಯಿಸಿದ ಓವೈಸಿ, ‘ಸರ್ಕಾರ ಮೊದಲು ಸಂವಿಧಾನ ನೀಡಿದ ಹಕ್ಕುಗಳನ್ನು ಅನುಭವಿಸಲು ಜನರಿಗೆ ಬಿಡಲಿ. ನಮ್ಮ ಪರಂಪರೆ ಮುಂದುವರಿಸಿಕೊಂಡು ಹೋಗುವ ಹಕ್ಕು ನಮಗಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

ಓವೈಸಿ ಮೋದಿಗೆ ಸವಾಲು
‘ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಮೂಲ ಪ್ರತಿಯಲ್ಲಿಯೇ ಟಿಪ್ಪು ಸುಲ್ತಾನ್‌ ಅವರ ಭಾವಚಿತ್ರವಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ತೆಗೆಯಲು ಸಾಧ್ಯವೆ?’ ಎಂದು ಅಸಾದುದ್ದೀನ್‌ ಓವೈಸಿ ಸವಾಲಿನ ಪ್ರಶ್ನೆ ಹಾಕಿದರು.

ಟಿಪ್ಪು ಭಾವಚಿತ್ರ ತೆರವು ಮಾಡುವುದಾಗಿ ಹೇಳಿಕೆ ನೀಡಿದ ಶಾಸಕ ಬಸನಗೌಡಪಾಟೀಲ ಯತ್ನಾಳ ಅವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ‘ಸಂವಿಧಾನದ ಮೂಲ ಪ್ರತಿಯಲ್ಲಿಯೇ ರಾಮ–ಸೀತೆ, ಗುರುನಾನಕ, ಅಕ್ಬರ್, ಟಿಪ್ಪು ಸುಲ್ತಾನ್‌ ಫೋಟೊಗಳಿವೆ. ಹೇಗೆ ಬೇಕೋ ಹಾಗೆ ಹೇಳಿಕೆ ನೀಡುವುದು ಸರಿಯಲ್ಲ. ರೈತರಿಗೆ ಗೊಬ್ಬರದ ಕೊರತೆ, ವಿದ್ಯಾವಂತರಿಗೆ ನಿರುದ್ಯೋಗದ ಸಮಸ್ಯೆ ಹಾಗೂ ಜನರು ಬೆಲೆ ಏರಿಕೆಯಿಂದ ತೊಂದತೆ ಅನುಭವಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ನೀಡಲಾಗದೆ, ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತ ಕಾಲ ಕಳೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.