ಬೆಂಗಳೂರು: ನಂದಿನಿ ಕರ್ನಾಟಕದ ಹೆಮ್ಮೆ, ನಮಗೆ ಅಮೂಲ್ ಬೇಡ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ನಂದಿನಿ –ಅಮೂಲ್ ವಹಿವಾಟು ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಅವರು, ‘ನಂದಿನಿ ಕರ್ನಾಟಕದ ಹೆಮ್ಮೆ. ನಮಗೆ ಅಮುಲ್ ಬೇಡ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ. ಈ ಹಿಂದೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಂಡ್ಯದಿಂದ ಚುನಾವಣಾ ಪ್ರಚಾರ ನಡೆಸಿದ್ದರು. ನಾನು ಕೂಡ ಮಂಡ್ಯದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಬಿಜೆಪಿಗೆ ಭವಿಷ್ಯವಿಲ್ಲ. ಕಾಂಗ್ರೆಸ್ ಪಕ್ಷ ಉತ್ತಮ ಆಡಳಿತ ನೀಡಲಿದೆ’ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ‘ನಾನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಪಟ್ಟಿಯನ್ನು 5 ಸಾವಿರ ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ಬಿಜೆಪಿ ಮುಖಂಡರ ಕುತಂತ್ರ ರಾಜಕಾರಣವಿದೆ. ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಡಿ.ಕೆ.ಸುರೇಶ್ ಅವರೂ ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸುರೇಶ್ ನಾಮಪತ್ರ ಸಲ್ಲಿಕೆ ಆತುರದ ನಿರ್ಧಾರವಲ್ಲ, ನಮ್ಮ ತಂತ್ರವೂ ಇದೆ. ಅದನ್ನು ಈಗಲೇ ಬಿಟ್ಟುಕೊಡುವುದಿಲ್ಲ, ನಾಳಿದ್ದು ಎಲ್ಲರಿಗೂ ತಿಳಿಯುತ್ತದೆ. ನಮಗೂ ರಾಜಕಾರಣ ಬರುತ್ತದೆಂದು ತಿಳಿಸುವುದು ನಮ್ಮ ಉದ್ದೇಶ’ ಎಂದರು.
‘ದ್ವೇಷದ ರಾಜಕಾರಣದಿಂದ ಬಿಜೆಪಿ ಮುಖಂಡರು ನನ್ನನ್ನು ಜೈಲಿಗೆ ಹಾಕಿಸಿ ತೊಂದರೆ ಕೊಟ್ಟರು. ರಾಹುಲ್ ಗಾಂಧಿಯವರನ್ನೇ ಬಿಡಲಿಲ್ಲ, ಇನ್ನು ನನ್ನನ್ನು ಬಿಟ್ಟಾರೆಯೇ? ಒಂದಂತೂ ಸತ್ಯ, ನೀವು ಏನೇ ಮಾಡಿದರೂ ನಾನು ನಿಮಗೆ ಶರಣಾಗುವುದಿಲ್ಲ. ನಾನು ಜೈಲಿನಲ್ಲಿದ್ದಾಗ ನನ್ನ ಬಿಡುಗಡೆಗೆ ಒತ್ತಾಯಿಸಿ ನೂರಾರು ಜನ ಹೋರಾಟ ಮಾಡಿ ಕೇಸು ಹಾಕಿಸಿಕೊಂಡಿದ್ದಾರೆ, ಆ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.
‘ಬಿಜೆಪಿ ಸರ್ಕಾರ ರಾಜ್ಯಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ನಂದಿನಿ ನಮ್ಮವಳು, ಕೇಂದ್ರ ಸಚಿವ ಅಮಿತ್ ಶಾ ಅವಳನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.