ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್ ಅವರಿಗೆ ವಿಜಯನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಿಸಿದ್ದಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ, ಪ್ರಮುಖ ಟಿಕೆಟ್ ಆಕಾಂಕ್ಷಿ ರಾಣಿ ಸಂಯುಕ್ತಾ ಅವರು ಪಕ್ಷದ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಬುಧವಾರ ತಮ್ಮ ನೂರಾರು ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದ ಪಕ್ಷದ ನಿರ್ಧಾರ ಸರಿಯಲ್ಲ. ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಈ ವಿಷಯವಾಗಿಯೇ ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದೆವು. ಆದರೆ, ಈಗ ನಮ್ಮ ಪಕ್ಷ ಅದೇ ದಾರಿಯಲ್ಲಿ ಹೋಗುತ್ತಿರುವುದು ಎಷ್ಟರಮಟ್ಟಿಗೆ ಸರಿ. ಕೆಲವೆಡೆ ಆರೋಗ್ಯದ ಕಾರಣಕ್ಕಾಗಿ ಕುಟುಂಬದೊಳಗೆ ಒಂದಿಬ್ಬರಿಗೆ ಟಿಕೆಟ್ ನೀಡಲಾಗಿದೆ. ಆದರೆ, ನನಗೆ ಗೊತ್ತಿರುವಂತೆ ಆನಂದ್ ಸಿಂಗ್ ಆರೋಗ್ಯವಾಗಿಯೇ ಇದ್ದಾರೆ. ಹೀಗಿರುವಾಗ ಅವರ ಮಗನಿಗೆ ಟಿಕೆಟ್ ಕೊಟ್ಟಿರುವುದು ಬೇಸರ ತರಿಸಿದೆ. ಮನಸ್ಸಿಗೆ ತೀವ್ರ ನೋವಾಗಿದೆ, ಅಸಮಾಧಾನವಾಗಿದೆ ಎಂದು ತಿಳಿಸಿದರು.
ಸಿದ್ದಾರ್ಥ ಸಿಂಗ್ ನಾಲ್ಕೈದು ತಿಂಗಳ ಹಿಂದೆ ಹೊರಗೆ ಬಂದಿದ್ದಾರೆ. ಪಕ್ಷದ ಕೆಲಸ ಮಾಡಿಲ್ಲ. ಸಚಿವರ ಮಗನೆಂಬುದಕ್ಕೆ ಟಿಕೆಟ್ ಕೊಟ್ಟಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ಪಕ್ಷ ಏನು ಸಂದೇಶ ಕೊಟ್ಟಿದೆ. ಕಾರ್ಯಕರ್ತರನ್ನು ಬೆಳೆಸುವುದು ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ. ಸಾಮಾನ್ಯ ಕಾರ್ಯಕರ್ತನ ಬಗ್ಗೆ ಕಾಳಜಿಯಿದ್ದರೆ ನನಗೂ ಟಿಕೆಟ್ ಬೇಡ, ಆನಂದ್ ಸಿಂಗ್ ಅವರಿಗೂ ನೀಡಬಾರದು. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಬೆಳೆಸಬೇಕಿತ್ತು ಎಂದು ಹೇಳಿದರು.
ಜಿಲ್ಲಾಮಟ್ಟದಿಂದ ಕಳುಹಿಸಿದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿದ್ದಾರ್ಥ ಸಿಂಗ್ ಹೆಸರೇ ಇರಲಿಲ್ಲ. ಕೊನೆಯಲ್ಲಿ ಅವರ ಹೆಸರು ಹೇಗೆ ಸೇರಿತು ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಬೆಂಬಲಿಗರು, ಕ್ಷೇತ್ರದಾದ್ಯಂತ ಸಂಚರಿಸಿದ ನಂತರ ಎರಡು ದಿನಗಳಲ್ಲಿ ನನ್ನ ಮುಂದಿನ ತೀರ್ಮಾನ ಪ್ರಕಟಿಸುವೆ. ನಾನು 30 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯಳಾಗಿದ್ದೇನೆ. ಅನೇಕ ಹಿರಿಯರಿಗೂ ಪಕ್ಷ ಟಿಕೆಟ್ ಕೊಟ್ಟಿಲ್ಲ. ಪಕ್ಷದಲ್ಲಿ ಶಿಸ್ತು ಉಳಿದಿಲ್ಲ. ಬಿಜೆಪಿಗೆ ಕರ್ನಾಟಕದ ಜನರೇ ಉತ್ತರ ಕೊಡುತ್ತಾರೆ. ಎಂದು ತಿಳಿಸಿದರು.
ಕೂಡ್ಲಿಗಿಯಲ್ಲಿ, ಹಡಗಲಿಯಲ್ಲಿ ಅಸಮಾಧಾನ: ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಕೃಷ್ಣ ನಾಯ್ಕ ಹಾಗೂ ಲೋಕೇಶ್ ವಿ. ನಾಯಕ ಅವರಿಗೆ ಕ್ರಮವಾಗಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಕೂಡ್ಲಿಗಿಯಲ್ಲಿ ಬಿಜೆಪಿ ಟಿಕೆಟ್ ಘೋಷಿಸಿರುವುದಕ್ಕೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಡಗಲಿಯ ಹಲವು ಮುಖಂಡರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಮುಖಂಡ ಓದೋ ಗಂಗಪ್ಪ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಕೂಡ್ಲಗಿಯಲ್ಲೂ ಟಿಕೆಟ್ ಆಕಾಂಕ್ಷಿಗಳು ಸಭೆ ಸೇರಿ ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.