ಚಾಮರಾಜನಗರ: ‘ಮೇ 10ರಂದು ನಡೆಯಲಿರುವ ಮತದಾನದಲ್ಲಿ ಎಲ್ಲರೂ ಹಕ್ಕು ಚಲಾಯಿಸಬೇಕು. ಹಣ, ವಸ್ತುಗಳ ಆಮಿಷಗಳಿಗೆ ಒಳಗಾಗದೆ, ಮತವನ್ನು ಹಣಕ್ಕೆ ಮಾರಿಕೊಳ್ಳದೆ ಪ್ರಾಮಾಣಿಕವಾಗಿ ಉತ್ತಮ ವ್ಯಕ್ತಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡುತ್ತೇನೆ’
–ಇಂತೀ ನಿಮ್ಮ ಮಗಳು...
ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆ, ತಾಯಿ, ಅಣ್ಣ, ಕುಟುಂಬದವರಿಗೆ ಬರೆದ ಪತ್ರವಿದು.
ಈ ವಿದ್ಯಾರ್ಥಿನಿ ಮಾತ್ರವಲ್ಲ; ಜಿಲ್ಲೆಯಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರು, ನೆಂಟರಿಷ್ಟರಿಗೆ ಹೀಗೆ ಪತ್ರಗಳನ್ನು ಬರೆಯುತ್ತಿದ್ದಾರೆ.
ಪ್ರಜಾತಂತ್ರದ ಹಬ್ಬದಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ಮಾಡುತ್ತಿರುವ ವಿನೂತನ ಪ್ರಯತ್ನ ಇದು.
ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಈ ಅಭಿಯಾನ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರ ಆಮಿಷ
ಗಳಿಗೆ ಬಲಿಯಾಗದಂತೆ, ಮತವನ್ನು ಮಾರಿಕೊಳ್ಳದಂತೆಯೂ ಮಕ್ಕಳು ಕೇಳಿಕೊಳ್ಳುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಮಕ್ಕಳು ಪರೀಕ್ಷೆ ಬರೆಯುತ್ತಿರುವುದರಿಂದ, ಸದ್ಯ 8, 9ನೇ ತರಗತಿಗಳ ವಿದ್ಯಾರ್ಥಿಗಳನ್ನು ಮಾತ್ರವೇ ಜಾಗೃತಿಗೆ ಬಳಸಿಕೊಳ್ಳಲಾಗುತ್ತಿದೆ.
ಪರಿಕಲ್ಪನೆಯ ಉದ್ದೇಶವೇನು?
‘ತಂತ್ರಜ್ಞಾನದ ಈ ಕಾಲದಲ್ಲಿ ಸಂವಹನಕ್ಕೆ ಎಲ್ಲರೂ ಮೊಬೈಲ್ ಫೋನ್ ಅನ್ನೇ ಅವಲಂಬಿಸಿದ್ದಾರೆ. ಅಂಚೆ ಪತ್ರದ ಮೂಲಕ ಸಂವಹನ ಮರೆತೇ ಹೋಗಿದೆ. ಈಗಿನ ಮಕ್ಕಳಿಗೆ ಪತ್ರ, ಅಂಚೆಕಾರ್ಡ್ ಮೂಲಕ ಸಂವಹನ ನಡೆಸುವುದನ್ನು ತಿಳಿಸುವುದು, ಅಂಚೆಯಂತಹ ವಿಶೇಷ ವೇದಿಕೆಯನ್ನು ಬಳಸಿಕೊಂಡು ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಈ ಪ್ರಯತ್ನದ ಉದ್ದೇಶ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಪೂವಿತಾ ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.