ADVERTISEMENT

ಪ್ರಜಾ ಮತ: ನಾರಿ ಸೂತ್ರ, ಪ್ರಚಾರಕ್ಕೆ ಮಾತ್ರ

ನೀಳಾ ಎಂ.ಎಚ್
Published 6 ಏಪ್ರಿಲ್ 2023, 20:17 IST
Last Updated 6 ಏಪ್ರಿಲ್ 2023, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ವನಿತಾ ಸಂಗಾತಿ’ ಯೋಜನೆಯಡಿ ಗಾರ್ಮೆಂಟ್ಸ್‌ ಉದ್ಯೋಗಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ 2021ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸುತ್ತದೆ. ಈ ಯಶಸ್ವಿ ಯೋಜನೆಯನ್ನು 30 ಲಕ್ಷ ಕಾರ್ಮಿಕರಿಗೆ ವಿಸ್ತರಿಸುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಅದೇ ಸರ್ಕಾರ ಪ್ರತಿಪಾದಿಸುತ್ತದೆ. ಅರೆ... ಹೌದೇ... ಲಕ್ಷಾಂತರ ಮಂದಿಗೆ ಉಚಿತ ಬಸ್‌ಪಾಸ್‌ ನೀಡುವುದೆಂದರೆ ಸಾಮಾನ್ಯವೇ? ಇದು ಖರೆಯೇ ಆಗಿದ್ದರೆ ಒಮ್ಮೆ ನೋಡಿಯೇಬಿಡೋಣ, ಮೊದಲು ಘೋಷಿಸಿದವರಲ್ಲಿ ಅದೆಷ್ಟು ಮಂದಿ ಫಲಾನುಭವಿಗಳಾಗಿರಬಹುದು ಎಂದುಕೊಂಡು ಘೋಷಣೆಯ ಬೆನ್ನುಹತ್ತಿದರೆ, ಯೋಜನೆಯ ಅಸಲಿಯತ್ತು ಬಯಲಾಗುತ್ತದೆ!

ಉದ್ಯೋಗದಾತರು ಶೇ 60, ಸಾರಿಗೆ ಸಂಸ್ಥೆ ಹಾಗೂ ಉದ್ಯೋಗಿಗಳು ತಲಾ ಶೇ 10, ಕಾರ್ಮಿಕ ಕಲ್ಯಾಣ ಮಂಡಳಿ ಶೇ 20ರಷ್ಟು ಆರ್ಥಿಕ ಹೊರೆ ಹೊತ್ತರಷ್ಟೇ ಈ ಯೋಜನೆ ಜಾರಿಗೆ ಬರಲು ಸಾಧ್ಯ. ತೀವ್ರ ಒತ್ತಡ ಹೇರಿ ಮಾಲೀಕರನ್ನು ಒಲಿಸಿಕೊಂಡ ಸುಮಾರು 900 ಮಂದಿ ಮಾತ್ರ ಈಗ ಈ ಸೌಲಭ್ಯದ ಫಲಾನುಭವಿಗಳು. ಹಾಗಿದ್ದರೆ ಉಳಿದವರಿಗೆ ಈ ಭಾಗ್ಯ ಕರುಣಿಸಲು ಸರ್ಕಾರ ಏನು ಮಾಡುತ್ತದೆ? ನಿಜವೆಂದರೆ, ಏನೂ ಮಾಡುವುದಿಲ್ಲ, ಮಗುಮ್ಮಾಗಿ ಇದ್ದುಬಿಡುತ್ತದೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು, ಬಹುತೇಕ ಮಹಿಳೆಯರನ್ನೇ ಒಳಗೊಂಡ ಗಾರ್ಮೆಂಟ್ಸ್‌ ಉದ್ಯೋಗಿಗಳ ವೇತನವನ್ನು ₹ 18 ಸಾವಿರಕ್ಕೆ ಏರಿಸುವುದಾಗಿ ಭಾಷಣ ಮಾಡಿಯೇ ಮಾಡಿದರು. ಪ್ರಚಾರ ವಾಹನಕ್ಕೆ ಕಟ್ಟಿದ ಮೈಕ್‌ನಲ್ಲಿ ಹಾಡಿನ ರೂಪದಲ್ಲಿಯೂ ಈ ಭರವಸೆ ಮೊಳಗಿಯೇ ಮೊಳಗಿತು. ಅದರಂತೆ ಅವರದೇ ಪಕ್ಷವೀಗ ಮತ್ತೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳೇ ಸಂದಿವೆ. ಆದರೂ ವೇತನ ಮಾತ್ರ ಹಿಂದಿದ್ದ ₹ 11 ಸಾವಿರ ದಾಟಿಯೇ ಇಲ್ಲ!

ADVERTISEMENT

ಮಹಿಳೆಯರನ್ನು ಆಮಿಷದ ಗಾಳಕ್ಕೆ ಸಿಲುಕಿಸುವ ಕಲೆಯಲ್ಲಿ ರಾಜಕಾರಣಿಗಳು ಸಿದ್ಧಹಸ್ತರು. ಅವರಿಗಾಗಿ ಚುನಾವಣಾ ಪ್ರಣಾಳಿಕೆ ಯಲ್ಲಿ ಒಮ್ಮೆ ಹೀಗೆ ಭರಪೂರ ಭರವಸೆ ಹರಿಸಿ ಕೈತೊಳೆದುಕೊಂಡರೆ ಮುಗಿಯಿತು. ಆಮೇಲಿನದು ಏನಾದರೇನು? ಕೇಳುವವರಾರು?

ಮಹಿಳೆಯರು ಮೊದಲಿಗಿಂತ ಈಗ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುತ್ತಾರಷ್ಟೆ. ಆದರೆ ಆನಂತರ ಏನಾಗುತ್ತದೆ, ನಮ್ಮ ಜನಪ್ರತಿನಿಧಿ ಗಳಿಂದ ನಮಗಾಗಿ ನಾವು ಏನೆಲ್ಲ ಕೇಳಬಹುದು ಎಂಬುದರ ಅರಿವಾದರೂ ಹೆಚ್ಚಿನವರಿಗೆ ಇದೆಯೇ? ರಾಜಕಾರಣವೆಂಬ ‘ಮಾರುಕಟ್ಟೆ’ಯಲ್ಲಿ ಈಗ ಕಚ್ಚಾ ವಸ್ತುಗಳು, ಗ್ರಾಹಕರು, ಉತ್ಪಾದಕರು ಎಲ್ಲವೂ ಆಗಿರುವ ಮಹಿಳೆಯರಿಗೆ, ಚುನಾವಣೆ ಬಂತೆಂದರೆ ಎಲ್ಲಿಲ್ಲದ ಬೇಡಿಕೆ. ಅವರಿಗಾಗಿ ಪುಂಖಾನುಪುಂಖ ಯೋಜನೆಗಳ ಘೋಷಣೆ. ಕಾರ್ಯರೂಪಕ್ಕೆ ಇಳಿಸುವ ಸಂದರ್ಭ ಬಂದಾಗ ಮಾತ್ರ ಎಲ್ಲ ಪಕ್ಷಗಳ ಬಣ್ಣವೂ ಬಟಾಬಯಲು.

ಹಿಂದಿನ ವರ್ಷವಷ್ಟೇ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ 40ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಲು ಮುಂದಾದ ಕಾಂಗ್ರೆಸ್‌ ಪಕ್ಷದ ನಿರ್ಧಾರ, ಪ್ರಬುದ್ಧ ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಇದು, ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಪಕ್ಷ ಗಂಭೀರವಾಗಿರುವುದನ್ನು ಸೂಚಿಸುವಂತಿದೆ ಎಂದೇ ಹೇಳಲಾಗಿತ್ತು. ಈವರೆಗೂ ಮತಬ್ಯಾಂಕ್‌ ರೂಪದಲ್ಲಷ್ಟೇ ಮಹಿಳೆಯರನ್ನು ಕಾಣುತ್ತಾ ಬಂದಿರುವ ರಾಜಕಾರಣದಲ್ಲಿ ಬದಲಾವಣೆ ತರುವ ದಿಸೆಯಲ್ಲಿ ಇದೊಂದು ಅನಿವಾರ್ಯವಾಗಿದ್ದ ಕ್ರಮ, ಮಹಿಳಾಶಕ್ತಿಯು ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವುದು ಪ್ರಜಾತಂತ್ರದ ಚೆಲುವನ್ನು ಹೆಚ್ಚಿಸುವ ಪ್ರಯತ್ನ ಎಂದೆಲ್ಲಾ ಈ ನಡೆ ಬಿಂಬಿತವಾಗಿತ್ತು. ಸಹಜವಾಗಿಯೇ ಕರ್ನಾಟಕಕ್ಕೂ ಇದೇ ನೀತಿ ಅನ್ವಯವಾಗಬಹುದೆಂಬ ನಿರೀಕ್ಷೆಯೂ ಇತ್ತು. ಆದರೆ ಈಗ ಬಿಡುಗಡೆಯಾಗಿರುವ ರಾಜ್ಯದ 124 ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಆರು ಮಂದಿಯಷ್ಟೇ ಮಹಿಳೆಯರಿದ್ದರೆ, 42 ಅಭ್ಯರ್ಥಿಗಳಿರುವ ಎರಡನೇ ಪಟ್ಟಿಯಲ್ಲಂತೂ ಒಬ್ಬ ಮಹಿಳೆಗೂ ಸ್ಥಾನವಿಲ್ಲ! ಮಹಿಳೆಯರಿಗಾಗಿ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡುವ ಭರವಸೆಗಳಾದರೂ ಎಂಥವು? ಗೃಹಲಕ್ಷ್ಮಿ, ಗೃಹಶಕ್ತಿಯಂತಹ ಹೆಸರುಗಳಲ್ಲಿ ಕುಟುಂಬದ ಮುಖ್ಯಸ್ಥೆಗೆ ಮನೆಯ ವೆಚ್ಚ ನಿರ್ವಹಣೆಗಾಗಿ ಸಹಾಯಧನ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಉಚಿತ ಸ್ಮಾರ್ಟ್‌ಫೋನ್‌ ವಿತರಣೆ... ಒಟ್ಟಾರೆ, ಮತಬುಟ್ಟಿಗೆ ಸುಲಭವಾಗಿ ಕೈಹಾಕಬಹುದಾದ ವರ್ಗಗಳ ಮನತಣಿಸುವ ಗಿಲೀಟು ಯೋಜನೆಗಳೇ. ಇಂತಹ ವರ್ಗಗಳನ್ನು ಭಾವನಾತ್ಮಕವಾಗಿ ಮಣಿಸಿ ಒಮ್ಮೆ ಮತದ ಇಡುಗಂಟು ಪಡೆದರಾಯಿತು. ಮಹಿಳೆಯರ ಸುರಕ್ಷೆ, ಅತ್ಯಾಚಾರ, ವರದಕ್ಷಿಣೆ ಪಿಡುಗು, ಆಸ್ತಿ ಮೇಲಿನ ಹಕ್ಕುಸ್ವಾಮ್ಯ, ಹೆಣ್ಣುಭ್ರೂಣ ಹತ್ಯೆ, ವೇತನ– ಬಡ್ತಿಯಲ್ಲಿ ತಾರತಮ್ಯ ನಿವಾರಣೆ, ಹೆಚ್ಚುತ್ತಿರುವ ಲಿಂಗಾನುಪಾತದಂತಹ ವಿಷಯಗಳೆಲ್ಲಾ ಯಾರಿಗೆ ಬೇಕಾಗಿವೆ?

‘ಗಾಡ್‌ಫಾದರ್‌’ಗಳ ನೆರವು, ಕೌಟುಂಬಿಕ ಹಿನ್ನೆಲೆಯಿಂದಷ್ಟೇ ರಾಜಕೀಯ ಪ್ರವೇಶಿಸಲು ಸಾಧ್ಯವಾಗುತ್ತಿರುವ ಬೆರಳೆಣಿಕೆಯ ಮಹಿಳಾ ರಾಜಕಾರಣಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ‘ಆರತಿಗೊಬ್ಬಳು ಮಗಳು...’ ಎಂಬ ಓಬಿರಾಯನ ಕಾಲದ ನುಡಿಗಟ್ಟಿನಂತೆ, ಸಚಿವ ಸಂಪುಟವನ್ನು ಅಂದಗಾಣಿಸಲು ಹೆಚ್ಚೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿಯಂತಹ ಖಾತೆಗಳಲ್ಲಿ ಆಕೆಯನ್ನು ತಂದು ಕೂರಿಸಿದರಾಯಿತು. ಉಳಿದ ಆಯಕಟ್ಟಿನ ಖಾತೆಗಳ ಉಸಾಬರಿಗೆ ಆಕೆ ಬರದಿದ್ದರಾಯಿತು.

ಹೊತ್ತು ಮುಳುಗುತ್ತಿದ್ದಂತೆ, ಮನೆಯಲ್ಲಿ ಬಿಟ್ಟು ಬಂದ ತಮ್ಮ ಹೆಣ್ಣುಮಕ್ಕಳ ಬಗ್ಗೆ ತಮಗೂ ಚಿಂತೆ ಎಂದು ಸದನದಲ್ಲಿ ಅಲವತ್ತುಕೊಳ್ಳುವ ಮಹಿಳಾ ಜನಪ್ರತಿನಿಧಿಗಳು, ಅತ್ಯಾಚಾರ ಸಂತ್ರಸ್ತ ಹೆಣ್ಣುಮಕ್ಕಳ ವಿಚಾರದಲ್ಲಿ ಪುರುಷ ಜನಪ್ರತಿನಿಧಿಗಳ ಅಸೂಕ್ಷ್ಮವಾದ ಹೇಳಿಕೆಗಳಿಗೆ ಚಕಾರ ಎತ್ತುವುದಿಲ್ಲ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷಿದ್ಧದ ಬಗ್ಗೆ ಕ್ರಾಂತಿಕಾರಿಯಾಗಿ ಮಾತನಾಡಿದ್ದ ಮಹಿಳಾ ರಾಜಕಾರಣಿಯೊಬ್ಬರ ಸಂದರ್ಶನಕ್ಕೆ ತೆರಳಿದ್ದಾಗ, ಮುಟ್ಟಾದ ‘ಅಪವಿತ್ರ’ ಹೆಣ್ಣುಮಕ್ಕಳ ವಿಚಾರದಲ್ಲಿ ತಮ್ಮ ಅಮ್ಮ, ಅಜ್ಜಿಯಂದಿರು ಅನುಸರಿಸುವ ಕಟ್ಟುಕಟ್ಟಳೆಗಳನ್ನು ಆಕೆ ಅತೀವ ಹೆಮ್ಮೆಯಿಂದ ವರ್ಣಿಸಿದ್ದರು!

ಹೆಣ್ಣುಮಕ್ಕಳ ಇಂತಹ ದೌರ್ಬಲ್ಯಗಳ ಅರಿವಿರುವುದರಿಂದಲೇ ಬೊಟ್ಟಿಡದ ಮಹಿಳೆಯನ್ನು ಪ್ರಶ್ನಿಸುವ, ಸವಲತ್ತು ಕೇಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸುವ, ಅವಾಚ್ಯವಾಗಿ ನಿಂದಿಸುವ ಧಾರ್ಷ್ಟ್ಯವನ್ನು ತೋರಲು ನಮ್ಮ ಜನಪ್ರತಿನಿಧಿಗಳಿಗೆ ಸಾಧ್ಯವಾಗಿರುವುದು. ಮತ್ತೆ ಮತ್ತೆ ಅವೇ ಜಾಳುಜಾಳು ಯೋಜನೆಗಳನ್ನು ಮುಂದಿಡುತ್ತಾ ಮಹಿಳೆಯರ ಮತಬುಟ್ಟಿಯನ್ನು ಅವರು ಕಸಿದುಕೊಳ್ಳುತ್ತಿರುವುದು.

ಮಹಿಳೆಯನ್ನು ಮೂಲದಲ್ಲೇ ಸಬಲೀಕರಿ ಸುವ, ಕೌಟುಂಬಿಕ ಚೌಕಟ್ಟಿನಲ್ಲಿ ನಡೆಯುವ ದೌರ್ಜನ್ಯ, ಅಸಮಾನತೆಯನ್ನು ನಿವಾರಿಸುವ, ಆಕೆಯನ್ನು ಪರಿಭಾವಿಸುತ್ತಿರುವ ದೃಷ್ಟಿಕೋನವನ್ನೇ ಸಂಪೂರ್ಣ ಬದಲಿಸದ ವಿನಾ ಸಮಾನತೆ ಅಸಾಧ್ಯವೆಂಬ ಅರಿವನ್ನು ಸಮಾಜಕ್ಕೆ ಮನಗಾಣಿಸಬೇಕಾದ ಜರೂರಿದೆ. ಇಂತಹ ವಿಶಾಲ ಚಿಂತನೆ, ದೂರಗಾಮಿ ಪರಿಣಾಮಗಳನ್ನು ಒಳಗೊಂಡ ಒಂದಾದರೂ ಯೋಜನೆ, ದೇಶದಲ್ಲಿ ಚುನಾವಣಾ ಪರ್ವ ಆರಂಭವಾದಂದಿನಿಂದ ಇಂದಿನವರೆಗೆ ಯಾವ ಪಕ್ಷದ್ದಾದರೂ ಕಾರ್ಯನೀತಿ ಆಗಿರುವ ನಿದರ್ಶನ ಇದೆಯೇ? ಅದಾಗದ ವಿನಾ, ಆ ದಿಸೆಯಲ್ಲಿ ಮಹಿಳೆಯರು ಸಂಪೂರ್ಣ ಎಚ್ಚರಗೊಳ್ಳದ ವಿನಾ ಹುಚ್ಚು ಕುದುರೆಗಳಂತಾಗಿರುವ ಪುರುಷ ರಾಜಕಾರಣಿಗಳಿಗೆ ಲಗಾಮು ಹಾಕುವುದು ಅಸಾಧ್ಯವೇ ಹೌದು.

ಜಾರಿಗಲ್ಲ, ಚಿಂತನೆಗಷ್ಟೇ ಬೆಳ್ಳಿಹಬ್ಬ!

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು, ಪ್ರಧಾನಿಯಾಗಿದ್ದ ಎಚ್‌.ಡಿ.ದೇವೇಗೌಡರು 1996ರ ಸೆಪ್ಟೆಂಬರ್‌ನಲ್ಲಿ ಸದನದಲ್ಲಿ ಮಂಡಿಸಿ ಈಗ 26 ವರ್ಷಗಳೇ ಗತಿಸಿವೆ. ಕಾಂಗ್ರೆಸ್‌ ಬೆಂಬಲಿತ ಸಂಯುಕ್ತ ರಂಗ ಸರ್ಕಾರ ಅಂದು ಇಟ್ಟಿದ್ದ ಆ ಕ್ರಾಂತಿಕಾರಕ ಹೆಜ್ಜೆ, ಒಳಮೀಸಲಾತಿ ಬೇಡಿಕೆಯೇ ನೆವವಾಗಿ ಈವರೆಗೆ ಒಂದಿಂಚೂ ಕದಲದೆ ನಿಂತಲ್ಲೇ ನಿಂತಿದೆ.

ಈ ಮೀಸಲಾತಿಯ ಪರವಾಗಿ ಪಕ್ಷಾತೀತ, ಜಾತ್ಯತೀತ, ವರ್ಗಾತೀತವಾದ ದನಿಯೊಂದು ಗಟ್ಟಿಗೊಳ್ಳದಿದ್ದರೆ, ಮಹಿಳಾ ಮೀಸಲಾತಿ ಚಿಂತನೆ ರೂಪುಗೊಂಡ ದಿನಾಚರಣೆಗಷ್ಟೇ ನಾವು ಸಂಭ್ರಮಿಸಬೇಕಾಗುತ್ತದೆ ವಿನಾ ಅದು ಕಾರ್ಯರೂಪಕ್ಕೆ ಬಂದ ಸುದಿನಕ್ಕಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.