ಗದಗ: ಜಿಲ್ಲೆಯ ಮೂರು ಕ್ಷೇತ್ರಗಳ ಟಿಕೆಟ್ ಅನ್ನು ಬಿಜೆಪಿ ಘೋಷಣೆ ಮಾಡಿದ್ದು, ಶಿರಹಟ್ಟಿ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ.
ನಿರೀಕ್ಷೆಯಂತೆ ಗದಗ ವಿಧಾನಸಭಾ ಕ್ಷೇತ್ರದಿಂದ ಅನಿಲ್ ಮೆಣಸಿನಕಾಯಿಗೆ ಟಿಕೆಟ್ ಘೋಷಣೆಯಾಗಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಾಜು ಕುರಡಗಿ, ವಿಜಯ್‌ಕುಮಾರ್ ಗಡ್ಡಿ, ಶರಣು ಪಾಟೀಲ, ನಾಗೇಶ್ ಹುಬ್ಬಳ್ಳಿ ಅವರಿಗೆ ಹಿನ್ನಡೆಯಾಗಿದೆ.
ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ‘ಹುಲಕೋಟಿ ಹುಲಿ’ ಎಚ್.ಕೆ.ಪಾಟೀಲರು ಕಣದಲ್ಲಿದ್ದು, ಇವರಿಬ್ಬರ ನಡುವಿನ ರೋಚಕ ಹಣಾಹಣಿಗೆ ಕ್ಷೇತ್ರ ಸಜ್ಜುಗೊಂಡಿದೆ. 2018ರ ಚುನಾವಣೆಯಂತೆ ಈ ಬಾರಿ ಕೂಡ ಉಸಿರು ಬಿಗಿಹಿಡಿಯುವಂತಹ ಜಿದ್ದಾಜಿದ್ದಿ ಹೋರಾಟ ನಿಶ್ಚಿತ ಎನ್ನಲಾಗಿದೆ.
ನರಗುಂದ ವಿಧಾನಸಭಾ ಕ್ಷೇತ್ರದಿಂದ ಸಚಿವ ಸಿ.ಸಿ.ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಒಬ್ಬರೇ ಇದ್ದುದರಿಂದ ಸಿ.ಸಿ.ಪಾಟೀಲಗೆ ಟಿಕೆಟ್ ಫೈನಲ್ ಆಗಿದೆ. ಇವರಿಗೆ ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಆರ್.ಯಾವಗಲ್ ಎದುರಾಳಿಯಾಗಿದ್ದು, ಇಲ್ಲೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.
ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ. ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡುವ ಮೂಲಕ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಕೈಬಿಟ್ಟಿದೆ. ಸಾಮಾನ್ಯ ಕಾರ್ಯಕರ್ತರ ಅಸಮಾಧಾನಕ್ಕೆ ತುತ್ತಾಗಿದ್ದೇ ಹಾಲಿ ಶಾಸಕರು ಟಿಕೆಟ್ ಕಳೆದುಕೊಳ್ಳಲು ಕಾರಣ ಎನ್ನಲಾಗಿದೆ.
ಕೋವಿಡ್–19 ಸಂದರ್ಭದಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸುವ ಮೂಲ ಜನಸಂಪರ್ಕ ಸಾಧಿಸಿದ್ದ ಡಾ. ಚಂದ್ರು ಲಮಾಣಿ, ಅದನ್ನೇ ಚಿಮ್ಮುಹಲಗೆಯಾಗಿಸಿಕೊಳ್ಳುವ ಮೂಲಕ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಒಂದೂವರೆ ವರ್ಷಗಳಿಂದ ಸಾಮಾಜಿಕ ಸೇವೆಯ ಮೂಲಕವೇ ರಾಜಕೀಯ ಬುನಾದಿ ಗಟ್ಟಿಗೊಳಿಸಿಕೊಳ್ಳುತ್ತ ಬಂದಿದ್ದ ಡಾ. ಚಂದ್ರು ಅವರಿಗೆ ಬಿಜೆಪಿ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲೂ ಕೂಡ ಅತಿ ಹೆಚ್ಚಿನ ಮತಗಳು ಬಿದ್ದಿವೆ ಎನ್ನಲಾಗಿದೆ. ಟಿಕೆಟ್‌ಗಾಗಿ ಪಕ್ಷದ ಪ್ರಭಾವಿ ನಾಯಕರನ್ನು ಗೋಗರೆಯದೇ; ಸೇವೆಯ ಮೂಲಕವೇ ಜನಮೆಚ್ಚುಗೆ ಗಳಿಸಿದ್ದ ಡಾ. ಚಂದ್ರು ಲಮಾಣಿಗೆ ನಿರಾಯಾಸವಾಗಿ ಟಿಕೆಟ್ ಲಭಿಸಿದೆ. ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಟ್ಟಿರುವುದರಿಂದ ಸಾಮಾನ್ಯ ಕಾರ್ಯಕರ್ತರು ಕೂಡ ಖುಷಿಗೊಂಡಿದ್ದಾರೆ.
ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುಜಾತಾ ದೊಡ್ಡಮನಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೇ ರಾಮಕೃಷ್ಣ ದೊಡ್ಡಮನಿ ಅವರು ಬಂಡಾಯವೆದ್ದರೆ ಅದರ ಲಾಭ ಬಿಜೆಪಿ ಆಗಲಿದೆ. ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕೂಡ ಶಿರಹಟ್ಟಿ ಮೀಸಲು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ನಿರಾಸೆಯಾಗಿದೆ.
ಉಳಿದಂತೆ, ರೋಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ. ಇಲ್ಲಿ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಮುಖಂಡರಾದ ರವಿ ದಂಡಿನ, ಹೇಮಗಿರೀಶ ಹಾವಿನಾಳ, ಸಂಯುಕ್ತಾ ಬಂಡಿ, ಸಿದ್ದಪ್ಪ ಬಂಡಿ, ಅಂದಪ್ಪ ಸಂಕನೂರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಲ್ಲೂ ಕೂಡ ಶಾಸಕ ಕಳಕಪ್ಪ ಬಂಡಿ ಮೇಲೆ ಕಾರ್ಯಕರ್ತರ ಅಸಮಾಧಾನವಿದೆ. ಶಿರಹಟ್ಟಿಯಂತೆ ಇಲ್ಲೂ ಕೂಡ ಅಚ್ಚರಿಯ ಅಭ್ಯರ್ಥಿ ಘೋಷಣೆ ಆಗಬಹುದು ಎಂಬ ವಿಶ್ಲೇಷಣೆ ಕೂಡ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.