ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದ ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಹಗರಣ, ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು.
ಪ್ರಿಯಾಂಕ್ ಅವರ ನಿರಂತರ ಮಾತಿನ ದಾಳಿಯಿಂದ ಇರುಸುಮುರುಸುಗೊಂಡಿರುವ ಬಿಜೆಪಿ ಪಾಳೆಯ ಅವರನ್ನು ಸೋಲಿಸಲು ಚಿತ್ತಾಪುರ ಕ್ಷೇತ್ರದಲ್ಲಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಪಕ್ಷ ಒಂದಷ್ಟು ಮಾಹಿತಿ ಹೊರಹಾಕಿದೆ. ಆದರೆ, ಚಿತ್ತಾಪುರ ಕ್ಷೇತ್ರದ ಬಗ್ಗೆ ಇನ್ನೂವರೆಗೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಹೀಗಾಗಿ, ಕ್ಷೇತ್ರದ ಜನತೆ ಪ್ರಿಯಾಂಕ್ ಖರ್ಗೆಯ ಅಶ್ವಮೇಧವನ್ನು ಕಟ್ಟಿಹಾಕಲು ಯಾರು ಬರಬಹುದು ಎನ್ನುವ ಬಗೆಗೆ ಗಾಳಿಮಾತು ಜೋರಾಗಿದೆ.
ಚುನಾವಣೆ ಘೋಷಣೆಗೂ ಕೆಲ ತಿಂಗಳು ಮುನ್ನ ಕುಡಚಿ ಶಾಸಕ ಪಿ. ರಾಜೀವ್ ಅವರನ್ನು ಪ್ರಿಯಾಂಕ್ ಎದುರು ನಿಲ್ಲಿಸಲು ಪಕ್ಷ ಚಿಂತನೆ ನಡೆಸಿತ್ತು. ಚಿತ್ತಾಪುರ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಕ್ಷೇತ್ರ ಬದಲಿಸುವಂತೆಯೂ ರಾಜೀವ್‌ಗೆ ಸೂಚನೆ ನೀಡಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ರಾಜೀವ್ ಆಪ್ತರು ಜಿಲ್ಲೆಯ ಪಕ್ಷದ ನಾಯಕರಿಗೆ ಕರೆ ಮಾಡಿ ಕ್ಷೇತ್ರದ ಬಗ್ಗೆ ಮಾಹಿತಿಯನ್ನೂ ಕಲೆ ಹಾಕಿದ್ದರು ಎನ್ನಲಾಗುತ್ತಿದೆ.
ಮತ್ತೊಂದು ಸುದ್ದಿಯ ಪ್ರಕಾರ, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ಉಮೇದುವಾರಿಕೆಯ ಬಗ್ಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಮೂಲತಃ ಚಿತ್ತಾಪುರ ತಾಲ್ಲೂಕಿನವರೇ ಆದ ಮತ್ತಿಮಡು ಅವರನ್ನು ಪ್ರಿಯಾಂಕ್ ಖರ್ಗೆ ಎದುರು ನಿಲ್ಲಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆಯಂತೆ.
ಇತ್ತೀಚೆಗೆ ಸುದ್ದಿಗಾರರಿಗೆ ಮಾತಿಗೆ ಸಿಕ್ಕಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸಹ ಸ್ಥಳೀಯರೇ ಇಲ್ಲಿ ಅಭ್ಯರ್ಥಿಯಾಗುತ್ತಾರೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರೂ ಚಿತ್ತಾಪುರ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇರಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಚುನಾವಣೆ ಘೋಷಣೆಯಾದರೂ ಪ್ರಿಯಾಂಕ್ ಖರ್ಗೆ ಕ್ಷೇತ್ರದತ್ತ ಮುಖ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.