ಕೊಪ್ಪಳ: ನಾನು ರಾಜ್ಯ ರಾಜಕಾರಣಕ್ಕೆ ಬರಬೇಕು, ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಎರಡ್ಮೂರು ತಿಂಗಳಿನಿಂದ ಕ್ಷೇತ್ರದ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಅಪೇಕ್ಷೆ ಪಡುತ್ತಿದ್ದಾರೆ. ಹೀಗಾಗಿ ಬಿಜೆಪಿಯಿಂದ ಟಿಕೆಟ್ ಕೇಳಿದ್ದೇನೆ. ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ ’ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಜಿಲ್ಲೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿದಂತೆ ಆಗುತ್ತದೆ. ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲೆಯ ಪಕ್ಷದ ನಾಯಕರಾದ ನಾಗಪ್ಪ ಸಾಲೋಣಿ, ಹಾಲಪ್ಪ ಆಚಾರ್, ಶರಣಪ್ಪ ವಕೀಲರು, ದೊಡ್ಡನಗೌಡ ಪಾಟೀಲ ವರಿಷ್ಠರ ಮುಂದೆ ಹೇಳಿದ್ದಾರೆ’ ಎಂದರು.
‘ಸಂಸದರಿಗೆ ಟಿಕೆಟ್ ಕೊಡಬೇಕಾ, ಬೇಡವಾ ಎನ್ನುವ ವಿಚಾರವನ್ನು ಕೇಂದ್ರ ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ. ಸಂಸದರ ವಿಷಯದಲ್ಲಿ ಎಲ್ಲರಿಗೂ ಒಂದೇ ತೀರ್ಮಾನ ಕೈಗೊಳ್ಳುವುದು ಸರಿಯೆನಿಸುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ತೀರ್ಮಾನ ಗೌರವಿಸುತ್ತೇನೆ. ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಗಟ್ಟಿನೆಲೆ ಹೊಂದಿದ್ದು ಅದನ್ನು ಮುಂದುವರಿಸಿಕೊಂಡು ಹೋಗಲು ನನಗೆ ಟಿಕೆಟ್ ಕೊಡಿ ಎಂದಿದ್ದೇನೆ’ ಎಂದು ಹೇಳಿದರು.
‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ವಿಷಯದಲ್ಲಿ ಸಕಾರಾತ್ಮಕವಾಗಿದ್ದಾರೆ. ಬಿ.ಎಲ್. ಸಂತೋಷ್ ಇತ್ತೀಚೆಗೆ ಗಂಗಾವತಿಗೆ ಭೇಟಿ ನೀಡಿದ್ದಾಗಲೂ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ರಚನೆಯಾದ ಬಳಿಕ ಇಲ್ಲಿ ದೊಡ್ಡಮಟ್ಟದ ಯೋಜನೆಗಳು ಕಾರ್ಯಗತಗೊಂಡಿಲ್ಲ. ಅವುಗಳನ್ನು ಈಡೇರಿಸಲು ನಾನು ಶಾಸಕನಾಗಬೇಕು. ಜಿಲ್ಲಾ ಕೇಂದ್ರದಲ್ಲಿ ಆಗಬೇಕಾದ ಕೆಲಸಗಳ ಸಲುವಾಗಿ ಸ್ಪರ್ಧೆಗೆ ಮುಂದಾಗಿದ್ದೇನೆ’ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡರು.
ಪಕ್ಷ ನಿಮಗೆ ಟಿಕೆಟ್ ಕೊಡದಿದ್ದರೆ ಮುಂದಿನ ನಡೆಯೇನು ಎನ್ನುವ ಪ್ರಶ್ನೆಗೆ ’ಪಕ್ಷದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಟಿಕೆಟ್ ನನಗೇ ಕೊಡುತ್ತಾರೆ. ಕೊಡದಿದ್ದರೆ ಮುಂದೆ ಏನು ಎನ್ನುವುದನ್ನು ಈಗಲೇ ಹೇಳುವುದು ಹೇಗೆ ?’ ಎಂದರು.
‘ಕ್ಷೇತ್ರದ ಬೆಂಬಲಿಗರ ಆಕಾಂಕ್ಷೆಯಂತೆ ಟಿಕೆಟ್ ಕೇಳಿದ್ದು, ಇದಕ್ಕೆ ಯಾರ ಅಪಸ್ವರವೂ ಇಲ್ಲ. ಟಿಕೆಟ್ ಬೇರೆಯವರಿಗೆ ಘೋಷಣೆಯಾದ ಬಳಿಕ ಕಾರ್ಯಕರ್ತರು ನೀವು ಚುನಾವಣೆಯಲ್ಲಿ ನಿಲ್ಲುವುದು ಬೇಡ ಎಂದು ಹೇಳಿದರೆ ನಿಲ್ಲುವುದಿಲ್ಲ’ ಎಂದರು.
ಪಕ್ಷದ ಇನ್ನೊಬ್ಬ ಮುಖಂಡ ಸಿ.ವಿ. ಚಂದ್ರಶೇಖರ್ ಟಿಕೆಟ್ ಆಕಾಂಕ್ಷಿಯಾಗಿದ್ದು ’ಟಿಕೆಟ್ ನನಗೇ ಅಂತಿಮವಾಗಲಿದೆ. ಮೊದಲ ಪಟ್ಟಿಯಲ್ಲಿಯೇ ನನ್ನ ಹೆಸರು ಇರಲಿದೆ’ ಎಂದು ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.