ADVERTISEMENT

ವಿಧಾನಸಭೆ ಚುನಾವಣೆ ಫಲಿತಾಂಶ: ಶ್ರೀರಾಮುಲು ಕನಸು ಛಿದ್ರ ಮಾಡಿದ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 13 ಮೇ 2023, 19:31 IST
Last Updated 13 ಮೇ 2023, 19:31 IST
ಸಚಿವ ಬಿ. ಶ್ರೀರಾಮುಲು
ಸಚಿವ ಬಿ. ಶ್ರೀರಾಮುಲು   

ಬಳ್ಳಾರಿ: ಅತ್ಯಂತ ಕುತೂಹಲ ಕೆರಳಿಸಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ. ನಾಗೇಂದ್ರ ಪುನರಾಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿಜೆಪಿಯ ಬಿ. ಶ್ರೀರಾಮುಲು ಹೀನಾಯ ಸೋಲು ಅನುಭವಿಸಿದ್ದಾರೆ. 

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಭಾಗವಾದ ಜೋಳದರಾಶಿ ಶ್ರೀರಾಮುಲು ಅವರ ಸ್ವಂತ ಊರು. ಜಿಲ್ಲೆಯ ಪ್ರಬಲ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ. 2004ರಲ್ಲಿ ಮೊದಲ ಸಲ ಬಳ್ಳಾರಿ ನಗರದಿಂದ ವಿಧಾನಸಭೆ ಸದಸ್ಯರಾಗಿದ್ದ ಶ್ರೀರಾಮುಲು, 2008ರ ಕ್ಷೇತ್ರಗಳ ಪುನರ್‌ವಿಂಗಡಣೆಯ ಬಳಿಕ ಗ್ರಾಮೀಣದತ್ತ ಹೊರಳಿದರು.

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಚಿವರ ಆಪ್ತ, ಮಾಜಿ ಸಚಿವ ಜನಾರ್ದನ ರೆಡ್ಡಿ 2011ರಲ್ಲಿ ಜೈಲು ಸೇರಿದಾಗ ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೇ ಕ್ಷೇತ್ರದಲ್ಲಿ ಪಕ್ಷೇತರವಾಗಿ ಗೆದ್ದಿದ್ದರು. 2013ರಲ್ಲಿ ಬಿಎಸ್‌ಆರ್‌ ಪಕ್ಷದಿಂದ ಇಲ್ಲಿಂದಲೇ ಪುನರಾಯ್ಕೆಯಾಗಿದ್ದರು. 2014ರಲ್ಲಿ ಬಿಎಸ್‌ಆರ್‌ ಪಕ್ಷ ಬಿಜೆಪಿಯಲ್ಲಿ ವಿಲೀನವಾದ ಬಳಿಕ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ ವಲಸೆ ಹೋದರು. ಬಳಿಕ ಗ್ರಾಮೀಣ ಕ್ಷೇತ್ರಕ್ಕೆ ಬಂದರು.

ADVERTISEMENT

ನಾಗೇಂದ್ರ ಬಳ್ಳಾರಿಯವರೇ ಆದರೂ 2008ರಲ್ಲಿ ಮೊದಲ ಸಲ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಮತ್ತು 2013ರಲ್ಲಿ ಪಕ್ಷೇತರರಾಗಿ ಗೆದ್ದಿದ್ದರು. 2018ರಲ್ಲಿ ಬಳ್ಳಾರಿ ಗ್ರಾಮೀಣಕ್ಕೆ ಬಂದು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಬಳ್ಳಾರಿ ಗ್ರಾಮೀಣ ಜನ ಶ್ರೀರಾಮುಲು ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ನಾಗೇಂದ್ರ ಅವರ ಕೈ ಹಿಡಿದರು.

ಚುನಾವಣೆ ಪ್ರಚಾರ ನಾಗೇಂದ್ರ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು. ಅವರು ಹೋದ ಕಡೆಗಳಲ್ಲಿ ಜನ ಮುಗಿ ಬೀಳುತ್ತಿದ್ದರು. ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು ಕಟ್ಟಿದ್ದ ಕೋಟೆಯನ್ನು ನಾಗೇಂದ್ರ ಕೆಡವಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.