ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ‘ಸರ್ವಜ್ಞನ ನಾಡು’ ಹಿರೇಕೆರೂರು ಕ್ಷೇತ್ರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯು.ಬಿ.ಬಣಕಾರ ಅವರು ಅಂತಿಮ ಸುತ್ತಿನಲ್ಲಿ (17ನೇ ಸುತ್ತು) 84,518 ಮತಗಳನ್ನು ಪಡೆದು, 15,074 ಮತಗಳ ಭಾರಿ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರು ಅಂತಿಮ ಸುತ್ತಿನಲ್ಲಿ 69,507 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.
2019ರ ಉಪಚುನಾವಣೆಯಲ್ಲಿ ‘ಜೋಡೆತ್ತು’ಗಳಂತೆ ಕ್ಷೇತ್ರದಾದ್ಯಂತ ಅಡ್ಡಾಡಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದ ಬಿ.ಸಿ.ಪಾಟೀಲ ಮತ್ತು ಯು.ಬಿ.ಬಣಕಾರ ಅವರು ಈ ಬಾರಿ ಚುನಾವಣಾ ಕಣದಲ್ಲಿ ಎದುರಾಳಿಗಳಾಗಿದ್ದರು.
ಚುನಾವಣಾ ಕಣದಲ್ಲಿ ಬಿ.ಸಿ.ಪಾಟೀಲ ಹಾಗೂ ಯು.ಬಿ. ಬಣಕಾರ ಪರಸ್ಪರ ಎದುರಾಳಿಗಳಾಗುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಈಗಾಗಲೇ ಒಟ್ಟು ನಾಲ್ಕು ಬಾರಿ ಬೇರೆ ಬೇರೆ ಪಕ್ಷಗಳಿಂದ ಸೆಣಸಾಡಿದ್ದು, ಬಿ.ಸಿ.ಪಾಟೀಲ 3 ಬಾರಿ ಮತ್ತು ಯು.ಬಿ.ಬಣಕಾರ 1 ಬಾರಿ ಗೆಲುವಿನ ನಗೆ ಬೀರಿದ್ದರು. 5ನೇ ಬಾರಿಯ ಸ್ಪರ್ಧೆಯಲ್ಲಿ ಯು.ಬಿ.ಬಣಕಾರ ಅವರು ಪಾಟೀಲರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಬಿಜೆಪಿಯ ಬಣಕಾರ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಜೆಡಿಎಸ್, ಬಿಜೆಪಿಯಿಂದ ತಲಾ ಒಂದು ಬಾರಿ ಹಾಗೂ 2 ಬಾರಿ ಕಾಂಗ್ರೆಸ್‍ನಿಂದ ಗೆದ್ದಿರುವ ಬಿ.ಸಿ.ಪಾಟೀಲ ಈ ಚುನಾಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಇಬ್ಬರು ಅಭ್ಯರ್ಥಿಗಳ ಪಕ್ಷಗಳು ಅದಲು-ಬದಲಾಗಿದ್ದು ಈ ಬಾರಿಯ ವಿಶೇಷ.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಬಿ.ಸಿ.ಪಾಟೀಲ ಅವರು ಅಂದಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಯು.ಬಿ.ಬಣಕಾರ ವಿರುದ್ಧ ಕೇವಲ ‘555’ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಸಲವೂ ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಗೆಲ್ಲುತ್ತಾರೆ ಎನ್ನಲಾಗಿತ್ತು. ಆದರೆ, ಈ ಬಾರಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿ ಭರ್ಜರಿ ಗೆಲುವನ್ನು ಬಣಕಾರ ಅವರು ಪಡೆದಿದ್ದಾರೆ.
ಅಲಿಖಿತ ಸಾದರ ಲಿಂಗಾಯತ ಕ್ಷೇತ್ರವೆನಿಸಿರುವ ಹಿರೇಕೆರೂರಿನಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸು ಮತ್ತು ಜಾತಿಯ ಬಲ ಹೆಚ್ಚಾಗಿ ಕೆಲಸ ಮಾಡುತ್ತದೆ ಎಂಬುದು ಮೊತ್ತೊಮ್ಮೆ ಸಾಬೀತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.