ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿಯ ಗಟ್ಟಿ ನೆಲೆ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಕ್ಷೇತ್ರವನ್ನು 30 ವರ್ಷಗಳಿಂದ ಗಟ್ಟಿಗೊಳಿಸಿದ್ದ ಜಗದೀಶ ಶೆಟ್ಟರ್ ಅವರೇ ಛಿದ್ರಗೊಳಿಸಲು ಪ್ರಯತ್ನಿಸಿದರಾದರೂ ಕೈಗೂಡಲಿಲ್ಲ. ಅವರು ಹೊತ್ತಿಸಿದ ‘ಲಿಂಗಾಯತರ ಸ್ವಾಭಿಮಾನಕ್ಕೆ ಧಕ್ಕೆ’ ಕಿಡಿಯೂ ನಂದಿ ಹೋಯಿತು. ‘ವ್ಯಕ್ತಿ ಮುಖ್ಯವೋ; ಪಕ್ಷ ಮುಖ್ಯವೋ’ ಎನ್ನುವ ಸಂಘರ್ಷದಲ್ಲಿ ಪಕ್ಷ ಮುಖ್ಯ ಎನ್ನುವ ಬಿಜೆಪಿಯ ಬಣ ಮೇಲುಗೈ ಸಾಧಿಸಿತು.
ಬಿಜೆಪಿ ಟಿಕೆಟ್ ವಂಚಿತ ಶೆಟ್ಟರ್ ಅವರು, ಕಾಂಗ್ರೆಸ್ ಸೇರಿ ಕಣಕ್ಕಿಳಿದರು. ‘ಲಿಂಗಾಯತ ನಾಯಕತ್ವವನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ಲಿಂಗಾಯತರ ಮತಗಳನ್ನು ಕ್ರೋಡೀಕರಿಸಲು ಪ್ರಯತ್ನಿಸಿದ್ದು ಫಲ ನೀಡಲಿಲ್ಲ. ಕಾಂಗ್ರೆಸ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿಯೂ ಶೆಟ್ಟರ್ ಪರ ಹೆಚ್ಚಿನ ಮತಗಳು ಬರಲಿಲ್ಲ.
ಶೆಟ್ಟರ್ ಬಹುವಾಗಿ ನೆಚ್ಚಿಕೊಂಡಿದ್ದ ಮಹಾನಗರ ಪಾಲಿಕೆಯ ಸದಸ್ಯರು ಮುಕ್ತವಾಗಿ ಕಾಣಿಸಿಕೊಳ್ಳಲಿಲ್ಲ. ಬಿಜೆಪಿಗೆ ಒಳಹೊಡೆತ ನೀಡಬಹುದು ಎನ್ನುವ ಲೆಕ್ಕಾಚಾರ ತಪ್ಪಿಹೋಯಿತು. ಕಾಂಗ್ರೆಸ್‌ನ ಕೆಲನಾಯಕರು ಸಾಥ್ ನೀಡದಿರುವುದೂ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಗೆ ಸಂಘಟನೆ ಬಲ: ‘ವ್ಯಕ್ತಿ ಮುಖ್ಯವಲ್ಲ; ಪಕ್ಷ ಮುಖ್ಯ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಎನ್ನುವ ಸಿದ್ಧಾಂತವನ್ನು ಬಿಜೆಪಿ ಈ ಚುನಾವಣೆಯಲ್ಲಿ ಮತ್ತಷ್ಟು ಗಟ್ಟಿಗೊಳಿಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿ, ಗೆಲ್ಲಿಸುವ ಮೂಲಕ ಈ ಮಾತನ್ನು ಸಾಬೀತುಪಡಿಸಿತು.
ಎಲ್ಲ ಸ್ಥಾನಮಾನ ನೀಡಿದ್ದರೂ ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದರು ಎಂದು ಪ್ರಚಾರ ಮಾಡಿತು. ಸಮುದಾಯದ ಮತಗಳು ಹೊರಹೋಗದಂತೆ ತಡೆಯಲು ಬಿ.ಎಸ್.ಯಡಿಯೂರಪ್ಪ ಅವರಿಂದ ಸಭೆ ನಡೆಸಿದ್ದು ಫಲ ನೀಡಿತು. ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯ, ರಾಷ್ಟ್ರನಾಯಕರು ಪ್ರಚಾರ ಮಾಡಿದ್ದು ಹಾಗೂ ಪ್ರಧಾನಿ ಮೋದಿ ಅವರ ಪ್ರಭಾವಳಿ ಕೂಡ ನೆರವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.