ADVERTISEMENT

ಮೇಲುಕೋಟೆ ಕ್ಷೇತ್ರ: ವಿಧಾನಸೌಧದತ್ತ ಏಕೈಕ ಯುವ ರೈತ ಪ್ರತಿನಿಧಿ

ಸರ್ವೋದಯ ಕರ್ನಾಟಕ ಪಕ್ಷದಿಂದ ಗೆದ್ದ 2ನೇ ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಎಂ.ಎನ್.ಯೋಗೇಶ್‌
Published 13 ಮೇ 2023, 19:40 IST
Last Updated 13 ಮೇ 2023, 19:40 IST
ದರ್ಶನ್‌ ಪುಟ್ಟಣ್ಣಯ್ಯ
ದರ್ಶನ್‌ ಪುಟ್ಟಣ್ಣಯ್ಯ   

ಮಂಡ್ಯ: ರೈತಸಂಘ, ಕಾಂಗ್ರೆಸ್‌ ಬೆಂಬಲಿತ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಗೆಲುವು ಕಂಡಿದ್ದು ರಾಜ್ಯದ ಏಕೈಕ ಯುವ ರೈತಪ್ರತಿನಿಧಿಯಾಗಿ ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದಾರೆ.

2005ರ ಬಸವ ಜಯಂತಿಯ ದಿನ ಲೇಖಕ ದೇವನೂರ ಮಹದೇವ ಅವರ ಅಧ್ಯಕ್ಷತೆಯಲ್ಲಿ ಹುಟ್ಟಿದ ಸರ್ವೋದಯ ಕರ್ನಾಟಕ ಪಕ್ಷ ಕೇವಲ ಇಬ್ಬರು ಶಾಸಕರನ್ನು ಕಂಡಿದೆ. ಅವರಿಬ್ಬರೂ ತಂದೆ– ಮಗ ಎಂಬುದು ವಿಶೇಷ. 2013ರಲ್ಲಿ ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಗೆದ್ದಿದ್ದರು. ಅವರ ಪುತ್ರ ದರ್ಶನ್‌ ಅಲ್ಲಿಂದಲೇ ಆಯ್ಕೆಯಾಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು 10,862 ಮತಗಳ ಅಂತದಲ್ಲಿ ಸೋತಿದ್ದಾರೆ.

ಮಂಡ್ಯ ಸೇರಿದಂತೆ 8 ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧಿಸಿತ್ತು. ಮೇಲುಕೋಟೆ ಹೊರತುಪಡಿಸಿ ಎಲ್ಲೆಡೆ ಠೇವಣಿ ನಷ್ಟವಾಗಿದೆ.

ADVERTISEMENT

2018ರ ಚುನಾವಣೆಯಲ್ಲಿ ದರ್ಶನ್‌ ಅವರು ಸ್ವರಾಜ್‌ ಇಂಡಿಯಾ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ತಂದೆಯ ಸಾವಿನ ಅನುಕಂಪವೂ ಕೈಹಿಡಿದಿರಲಿಲ್ಲ. ಈಗಿನ ಗೆಲುವು ಹಲವು ಬಣಗಳಾಗಿ ಒಡೆದು ಹೋಗಿರುವ ರೈತಸಂಘಕ್ಕೆ ಶಕ್ತಿ ತುಂಬಿದಂತಾಗಿದೆ.

ಕೆ.ಎಸ್‌.ಪುಟ್ಟಣ್ಣಯ್ಯ 1994ರಲ್ಲಿ ರೈತಸಂಘದಿಂದ ಸ್ಪರ್ಧಿಸಿ ಗೆದ್ದಿದ್ದರು. 1989ರಲ್ಲಿ ಬಾಬಾಗೌಡ ಪಾಟೀಲ ಬೆಳಗಾವಿ ಜಿಲ್ಲೆಯ ಕಿತ್ತೂರು, ಧಾರವಾಡ ಗ್ರಾಮೀಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ 1990ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಲ್ಲಿಯೇ ರೈತಸಂಘದಿಂದ ಗೆದ್ದಿದ್ದರು.

‘ರೈತ, ದಲಿತ, ಪ್ರಗತಿಪರ ಮನಸ್ಸುಗಳ ಒತ್ತಾಸೆಯಿಂದ ಪಕ್ಷ ಹುಟ್ಟಿಕೊಂಡಿತು. ನಾನು ನಿಮಿತ್ತ ಮಾತ್ರ. ಪುಟ್ಟಣ್ಣಯ್ಯ ಅವರ ರಚನಾತ್ಮಕ ರಾಜಕಾರಣದಿಂದ ಪಕ್ಷಕ್ಕೆ ಶಕ್ತಿ ಬಂದಿತ್ತು. ನನ್ನನ್ನು ಹಾಗೂ ಪುಟ್ಟಣ್ಣಯ್ಯ ಅವರನ್ನೂ ಮೀರಿಸುವ ಇಚ್ಛಾಶಕ್ತಿ ಹೊಂದಿರುವ ದರ್ಶನ್‌ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸುತ್ತಾರೆ. ಅವರ  ಗೆಲುವು ನನ್ನೊಳಗೆ ಭರವಸೆ ಮೂಡಿಸಿದೆ’ ಎಂದು ಪಕ್ಷದ ಸಂಸ್ಥಾಪಕರಾದ ಲೇಖಕ ದೇವನೂರ ಮಹಾದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.