ADVERTISEMENT

ಅಥಣಿ ವಿಧಾನಸಭಾ ಕ್ಷೇತ್ರ: ‘ಸ್ವಾಭಿಮಾನ’ಕ್ಕೆ ಕಟ್ಟುಬಿದ್ದ ಮತದಾರ

ಸಂತೋಷ ಈ.ಚಿನಗುಡಿ
Published 13 ಮೇ 2023, 19:35 IST
Last Updated 13 ಮೇ 2023, 19:35 IST
 ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಅಥಣಿ (ಬೆಳಗಾವಿ ಜಿಲ್ಲೆ): ಶಿವಯೋಗಿಗಳ ನಾಡು, ಅಥಣಿಯ ಮತದಾರರು ಕೊನೆಗೂ ‘ಸ್ವಾಭಿಮಾನ’ಕ್ಕೇ ಕಟ್ಟುಬಿದ್ದರು. ಲಕ್ಷ್ಮಣ ಸವದಿ ಅವರನ್ನು 76,122 ಮತಗಳ ಅಂತರದಿಂದ ಗೆಲ್ಲಿಸಿದರು. ಪಕ್ಷ ಬದಲಾಯಿಸಿದರೂ ಸವದಿ ಅವರ ವರ್ಚಸ್ಸಿಗೆ ಧಕ್ಕೆ ಬರದಂತೆ ತೀರ್ಪು ನೀಡಿದರು.

ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್‌ ಕೊಡಿಸಿ, ಗೆಲ್ಲಿಸಲು ಪಣ ತೊಟ್ಟಿದ್ದರು ರಮೇಶ ಜಾರಕಿಹೊಳಿ. ದೊಡ್ಡ ಹುದ್ದೆ ಕೊಟ್ಟರೂ ಪಕ್ಷ ಬಿಟ್ಟವರನ್ನು ಸೋಲಿಸಬೇಕೆಂಬ ಹಟ ತೊಟ್ಟಿದ್ದರು ಬಿಜೆಪಿ ರಾಷ್ಟ್ರಮಟ್ಟದ ನಾಯಕರು. ಸರ್ಕಾರದ ಸಾಧನೆ ಮುಂದಿಟ್ಟು ಮತ ಕೇಳಿದ್ದರು ಮಹೇಶ ಕುಮಠಳ್ಳಿ. ಈ ಮೂರು ಶಕ್ತಿಗಳು ಒಂದಾದರೂ ‘ಲಕ್ಷ್ಮಣ ರೇಖೆ’ ದಾಟುವುದಿರಲಿ; ಹತ್ತಿರ ಸುಳಿಯಲು ಕೂಡ ಆಗಲಿಲ್ಲ.

ಈ ಬಾರಿಯೂ ಮಹೇಶ ಕುಮಠಳ್ಳಿಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅಲ್ಲಿ ತಮ್ಮ ಕುಟುಂಬದ ಅಸ್ತಿತ್ವವೇ ಉಳಿಯುವುದಿಲ್ಲ ಎಂಬ ಆತಂಕ ಸವದಿ ಅವರಿಗಿತ್ತು. ಟಿಕೆಟ್‌ ಕೈತಪ್ಪಿದರೆ ಅಲೆಮಾರಿ ಆಗುತ್ತೇನೆ ಎಂಬ ಕಳವಳ ಕುಮಠಳ್ಳಿ ಅವರಿಗೆ ಇತ್ತು. ಹೀಗಾಗಿ, ಇಬ್ಬರೂ ತಮ್ಮತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜಿದ್ದಾಜಿದ್ದಿಗೆ ಬಿದ್ದಿದ್ದರು.

ADVERTISEMENT

ಕೋವಿಡ್‌ ಸಂದರ್ಭದಲ್ಲಿ ಸುಮಾರು ₹ 7 ಕೋಟಿಗೂ ಅಧಿಕ ಮೊತ್ತದ ಆಹಾರ ಕಿಟ್‌, ಔಷಧಿಗಳನ್ನು ಲಕ್ಷ್ಮಣ ಹಂಚಿಕೆ ಮಾಡಿದ್ದರು. ಸವದಿ ಕುಟುಂಬಕ್ಕೇ ನಿಷ್ಠರಾದ ಸುಮಾರು 40 ಸಾವಿರ ಮತ ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೂ ಸೇರಿಕೊಂಡವು. 40 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು, ಕರಿಮಸೂರಿ ಏತನೀರಾವರಿ ಯೋಜನೆಯಂಥ ಹಲವು ಕಾಮಗಾರಿಗಳು ಅವರಿಗೆ ಬಲ ತಂದವು.

ಕುಮಠಳ್ಳಿ ಸೋಲಿಗೆ ಕಾರಣ: ಕುಮಠಳ್ಳಿ ನೆಪಮಾತ್ರ; ರಮೇಶ ಜಾರಕಿಹೊಳಿಯೇ ಅಭ್ಯರ್ಥಿ ಎಂಬ ಸಂದೇಶ ಕ್ಷೇತ್ರದಲ್ಲಿ ರವಾನೆಯಾಯಿತು. ಅಧಿಕಾರವನ್ನು ಮತ್ತೊಬ್ಬರ ಕೈಯಲ್ಲಿ ಕೊಡುವ ಬದಲು ಸವದಿ ಅವರನ್ನೇ ಬೆಂಬಲಿಸೋಣ ಎಂಬ ನಿರ್ಧಾರಕ್ಕೆ ಯುವ ಮತದಾರರು ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.