ADVERTISEMENT

ಕಾಂಗ್ರೆಸ್‌ ಐತಿಹಾಸಿಕ ಗೆಲುವಿನ ಹಿಂದೆ ಇದೆ ದ.ಕ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಪಾತ್ರ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2023, 10:50 IST
Last Updated 14 ಮೇ 2023, 10:50 IST
   

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಈ ಐತಿಹಾಸಿಕ ಗೆಲುವಿನ ಹಿಂದೆ ಮಾಜಿ ಐಎಎಸ್‌ ಅಧಿಕಾರಿಯೊಬ್ಬರ ಪಾತ್ರವೂ ಇದೆ. ಕಾಂಗ್ರೆಸ್‌ ಪಕ್ಷ ಯಾವ ಹಂತದಲ್ಲೂ ಎಡವದೇ, ಯೋಜಿತವಾಗಿ ಕೆಲಸ ಮಾಡುವಂತೆ ಮಾಡಿದ ಶ್ರೇಯ ಇವರ ತಂಡಕ್ಕೂ ಸಲ್ಲಬೇಕು. ಅವರೇ ಕಾಂಗ್ರೆಸ್‌ ವಾರ್ ರೂಮ್‌ನ ಮುಖ್ಯಸ್ಥ ಶಶಿಕಾಂತ ಸೆಂಥಿಲ್.

ತಮಿಳುನಾಡು ಮೂಲದವರಾದ ಸೆಂಥಿಲ್, ಈ ಹಿಂದೆ ಚಿತ್ರದುರ್ಗ, ರಾಯಚೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ದಕ್ಷ ಅಧಿಕಾರಿಯಾಗಿ ಜನರ ಮೆಚ್ಚುಗೆಗೂ ಪಾತ್ರವಾಗಿದ್ದರು. ಸಿಎಎ ಹಾಗೂ ಎನ್‌ಆರ್‌ಸಿ ಹೋರಾಟದ ವೇಳೆಯಲ್ಲಿ ಪ್ರತಿಭಟನಾರ್ಥವಾಗಿ 2019ರಲ್ಲಿ ಐಎಎಸ್‌ಗೆ ರಾಜೀನಾಮೆ ನೀಡಿದ್ದರು. ಬಳಿಕ 2020ರಲ್ಲಿ ಕಾಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

2022ರಲ್ಲಿ ಇವರನ್ನು ಕರ್ನಾಟಕ ಕಾಂಗ್ರೆಸ್‌ ವಾರ್‌ ರೂಂನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ವಿಧಾನಸಭೆ ಚುನಾವಣೆಗೆ ಬೇಕಾದ ತಂತ್ರಗಾರಿಗೆ ಮಾಡುವ ಜಬಾಬ್ದಾರಿ ಇವರಿಗೂ ವಹಿಸಲಾಗಿತ್ತು. ರಾಜ್ಯದ ಹಲವು ಕಡೆ ಕೆಲಸ ಮಾಡಿದ್ದ ಅನುಭವ ಇದ್ದಿದ್ದರಿಂದ ಇವರಿಗೆ ಈ ಹುದ್ದೆ ವಹಿಸಲಾಗಿತ್ತು.

ADVERTISEMENT
ಕಾಂಗ್ರೆಸ್‌ ಗ್ಯಾರಂಟಿಯಲ್ಲೂ ಇದೆ ಸೆಂಥಿಲ್‌ ಪಾಲು
ಚುನಾವಣೆಯ ಪ್ರಣಾಳಿಕೆ ಘೋಷಣೆ ಮಾಡುವುದಕ್ಕೂ ಮುನ್ನ ಕಾಂಗ್ರೆಸ್‌ ಘೋಷಿಸಿದ ಐದು ಗ್ಯಾರಂಟಿಯಲ್ಲಿ ಸೆಂಥಿಲ್‌ ಅವರ ಪಾತ್ರ ಕೂಡ ಇತ್ತು. ರಾಯಚೂರು ಹಾಗೂ ಚಿತ್ರದುರ್ಗದಂತಹ ಹಿಂದುಳಿದ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಇದ್ದ ಕಾರಣ, ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಯೋಜನೆ ರೂಪಿಸುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಜನರಿಂದ ಅಭಿಪ್ರಾಯ ಪಡೆದು, ಯೋಜನೆ ರೂಪಿಸಿ, ಹೈಕಮಾಂಡ್‌ ಅನುಮತಿ ಪಡೆದು ಅದನ್ನು ಜಾರಿ ಮಾಡುವ ಜಬಾಬ್ದಾರಿ ಸೆಂಥಿಲ್‌ ಅವರ ತಂಡಕ್ಕೆ ಇತ್ತು.

ಹಣದುಬ್ಬರ, ಜನರ ಆದಾಯ ಕುಸಿತ, ಶಿಕ್ಷಣದ ವ್ಯಾಪಾರೀಕರಣ ಹಾಗೂ ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮುಂತಾದ ವಿಷಯಗಳ ಬಗ್ಗೆ ಜನರಿಂದ ಮಾಹಿತಿ ಸಂಗ್ರಹಿಸಿ, ಗ್ಯಾರಂಟಿ ಯೋಜನೆಗಳ ರೂಪುರೇಶೆ ತಯಾರಿ ಮಾಡಿದ್ದರು. ಕಾಂಗ್ರೆಸ್‌ ವಾರ್‌ ರೂಮ್‌ ಅನ್ನು ವ್ಯವಸ್ಥಿತವಾಗಿ ರೂಪಿಸಿದ್ದರು. ಎದುರಾಳಿಗಳ ಟೀಕೆಗೆ ಸಮರ್ಥ ತಿರುಗೇಟು ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಅಕ್ರಮಣಕಾರಿಯಾದ ಪ್ರಚಾರ, ಮಾಧ್ಯಮ ನಿರ್ವಹಣೆ, ನಾಯಕರ ಸಮನ್ವಯತೆಯ ಎಲ್ಲವೂ ವಾರ್‌ ರೂಂನಿಂದಲೇ ಅಂತಿಮಗೊಳ್ಳುತ್ತಿತ್ತು.

ಗ್ರಾಮ, ತಾಲೂಕು ಹಾಗೂ ನಗರ ಪ್ರದೇಶದ ಜನರ ಸಮಸ್ಯೆಗಳು, ಅವರ ಅಗತ್ಯಗಳನ್ನು ಅಧ್ಯಯನ ಮಾಡಿ, ಅದಕ್ಕೆ ಅನುಗುಣವಾಗಿ ತಂತ್ರಗಾರಿಕೆ ರೂಪಿಸುವುದರಲ್ಲಿ ಕೂಡ ಈ ವಾರ್‌ ರೂಂನ ಪ್ರಮುಖ ಕೆಲಸಗಳಲ್ಲಿ ಒಂದು. ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೊ ಯಾತ್ರೆ ವೇಳೆಯೂ ಸೆಂಥಿಲ್‌ ತಂಡ ಇದೇ ರೀತಿಯ ಕೆಲಸ ಮಾಡಿತ್ತು.

ಬಜರಂಗದಳ ಬ್ಯಾನ್‌
ಬಜರಂಗದಳ ಹಾಗೂ ಪಿಎಫ್‌ಐ ಸಹಿತ ಸಮಾಜಘಾತುಕ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಹಳೆ ಮೈಸೂರು ಭಾಗದಿಂದ ಬಂದ ಪ್ರತಿಕ್ರಿಯೆಯನ್ನು ಆಧರಿಸಿ, ಬಜರಂಗದಳ ನಿಷೇಧವನ್ನು ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಸೇರಿಸುವುದಲ್ಲಿ ಸೆಂಥಿಲ್ ಅವರ ತಂಡ ಕೆಲಸ ಮಾಡಿತ್ತು. ಈ ಘೋಷಣೆಯಿಂದಾಗಿಯೆ ಶೇ 88 ರಷ್ಟು ಮುಸ್ಲಿಮರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದಾರೆ ಎನ್ನುವುದು ರಾಜಕೀಯ ಪಂಡಿತರ ತರ್ಕ. ಬಜರಂಗದಳ ನಿಷೇಧ ಘೋಷಣೆಯಿಂದಾಗಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಪರ ಇದ್ದ ಮುಸ್ಲಿಂ ಮತಗಳು ಕಾಂಗ್ರೆಸ್‌ ಕಡೆಗೆ ವಾಲಿದವು. ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದು ಇದಕ್ಕೆ ಒಂದು ಉದಾಹರಣೆ.
ಭಾರತ್‌ ಜೋಡೊ ಯಾತ್ರೆ ವೇಳೆ ಶಿಕ್ಷಣ, ಕೃಷಿ, ಕಾರ್ಖಾನೆ ಸೇರಿ ಸಮಾಜದ ವಿವಿಧ ಕ್ಷೇತ್ರಗಳ ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ರಚಿಸಲಾಗಿತ್ತು. ಇದರಲ್ಲೂ ಸೆಂಥಿಲ್ ಅವರ ತಂಡ ಕೆಲಸ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.