ADVERTISEMENT

ಊರು ಕಟ್ಟುವವರಿಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ: ಪರವೂರು ಸೇರಿದವರ ಸಂಕಟ

ಪ್ರವೀಣ ಕುಮಾರ್ ಪಿ.ವಿ.
Published 14 ಏಪ್ರಿಲ್ 2023, 0:45 IST
Last Updated 14 ಏಪ್ರಿಲ್ 2023, 0:45 IST
ಮಂಗಳೂರು ಹೊರವಲಯದ ಕಾವೂರಿನ ಬಳಿಯ ಜ್ಯೋತಿನಗರದಲ್ಲಿ ವಲಸೆ ಕಾರ್ಮಿಕರ ಮನೆಗಳಿರುವ ಪ್ರದೇಶದಲ್ಲಿ ಓಣಿಯಂತಿರುವ ದಾರಿ  ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು ಹೊರವಲಯದ ಕಾವೂರಿನ ಬಳಿಯ ಜ್ಯೋತಿನಗರದಲ್ಲಿ ವಲಸೆ ಕಾರ್ಮಿಕರ ಮನೆಗಳಿರುವ ಪ್ರದೇಶದಲ್ಲಿ ಓಣಿಯಂತಿರುವ ದಾರಿ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್   

ಮಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ಮಹಾನಗರವಿದು. ಈ ನಗರವನ್ನು ಕಟ್ಟುವ ಕಾಯಕದಲ್ಲಿ ಪರವೂರಿನವರ ಕೊಡುಗೆಯೇ ಜಾಸ್ತಿ. ಹುಟ್ಟೂರನ್ನೇ ಬಿಟ್ಟು ಬಂದು, ಬೆವರು ಸುರಿಸಿ ಹಗಲಿರುಳು ದುಡಿಯುವ ಈ ಕಾಯಕ ಜೀವಿಗಳ ಸ್ಥಿತಿ ಮಾತ್ರ ಇಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’.

ನಗರದ ಹೊರವಲಯದ ಕುಂಜತ್ತಬೈಲ್‌, ಕಾವೂರಿನ ಜ್ಯೋತಿನಗರ, ಪಂಜಿಮೊಗರು, ಕೊಂಚಾಡಿ, ಬಸವನಗರ, ಮೂಡುಶೆಡ್ಡೆ, ವಾಮಂಜೂರು, ಮೂಲ್ಕಿ ಸಮೀಪದ ಲಿಂಗಪ್ಪಯ್ಯನ ಕಾಡು ಮೊದಲಾದ ಪ್ರದೇಶಗಳಲ್ಲಿ ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಇವುಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಕುಟುಂಬಗಳು ಸರ್ಕಾರ ಮಂಜೂರು ಮಾಡಿದ 3 ಸೆಂಟ್ಸ್‌ ಜಾಗದಲ್ಲಿ ಸ್ವಂತ ಸೂರನ್ನೂಕಟ್ಟಿಕೊಂಡಿವೆ. ಇಲ್ಲೇ ಪಡಿತರ ಚೀಟಿ, ಗುರುತಿನ ಚೀಟಿಯನ್ನೂ ಪಡೆದುಕೊಂಡಿವೆ.

‘ಊರು ತೊರೆದು ಮೂರು ದಶಕಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿದರೂ, ನಾವು ಇಲ್ಲಿನವರಾಗಲಿಲ್ಲ. ಅತ್ತ ಊರಿನವರ ಪಾಲಿಗೂ ಹೊರಗಿನವರಾಗಿ ಬಿಟ್ಟಿದ್ದೇವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ವಲಸೆ ಕಾರ್ಮಿಕರು. ಇದಕ್ಕೆ ಕಾರಣಗಳೂ ಇವೆ. ಇಲ್ಲಿನ ಶೇ 50ಕ್ಕಿಂತಲೂ ಹೆಚ್ಚು ವಲಸೆ ಕಾರ್ಮಿಕರು ಈಗಲೂ ಊರಿನಲ್ಲೇ ಮತದಾನ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳು ಬಸ್‌ ವ್ಯವಸ್ಥೆ ಮಾಡಿ, ಊರಿಗೆ ಕರೆದೊಯ್ಯುತ್ತಾರಂತೆ. ಇವರಲ್ಲಿ ಬಹುತೇಕರಿಗೆ ಇಲ್ಲಿ ಮತದಾನದ ಹಕ್ಕು ಇಲ್ಲ ಎಂಬ ಕಾರಣಕ್ಕೆ ಸ್ಥಳೀಯ ರಾಜಕಾರಣಿಗಳೂ ಇವರ ಗೋಳುಗಳಿಗೆ ಕಿವಿಗೊಡುತ್ತಿಲ್ಲ.

ADVERTISEMENT

‘ನಗರದ ವಿವಿಧ ಭಾಗಗಳಲ್ಲಿ ಹಂಚಿಹೋಗಿರುವ ವಲಸೆ ಕಾರ್ಮಿಕರಲ್ಲಿ ಒಗ್ಗಟ್ಟೂ ಇಲ್ಲ. ರಾಜಕಾರಣಿಗಳ ಮೇಲೆ ಒತ್ತಡ ಹೇರುವಷ್ಟು ಸಂಖ್ಯಾಬಲವು ನಮ್ಮಲ್ಲಿಲ್ಲ. ಬಡವನ ಸಿಟ್ಟು ದವಡೆಗೆ ಮೂಲ ಎಂಬ ಕಾರಣಕ್ಕೆ ನಾವು ಸಂಕಟಗಳನ್ನೆಲ್ಲ ನುಂಗಿಕೊಂಡು ಬದುಕುತ್ತಿದ್ದೇವೆ’ ಎನ್ನುತ್ತಾರೆ ಕಾರ್ಮಿಕರು.

‘ನಗರದ ಕೆಲವು ಭಾಗಗಳಲ್ಲಿ ಜಾಗ ನೀಡಿ ನಮಗೆ ಉಳಿದುಕೊಳ್ಳುವುದಕ್ಕೆ ಸರ್ಕಾರ ವ್ಯವಸ್ಥೆ ಮಾಡಿದೆ. ಆದರೆ, ಇಲ್ಲಿ ಉತ್ತಮ ಸೌಕರ್ಯಗಳಿಲ್ಲ. ಕಾಟಾಚಾರಕ್ಕೆ ರಸ್ತೆ ನಿರ್ಮಿಸಿದ್ದಾರೆ. ಅದಕ್ಕೆ ಚರಂಡಿಯೂ ಇಲ್ಲ. ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತದೆ. ‘ನಮ್ಮ ಕ್ಲಿನಿಕ್‌’ ಸೌಕರ್ಯ ಇಲ್ಲ’ ಎಂದು ಬೇಸರ ತೋಡಿಕೊಳ್ಳುತ್ತಾರೆ ಕಾವೂರಿನ ಹೇಮಯ್ಯ ಹಿರೇಮಠ.

‘ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದ ಬಳಿಕ ಯಾವೊಬ್ಬ ರಾಜಕಾರಣಿಯೂ ಈ ಪ್ರದೇಶಕ್ಕೆ ಬಂದಿಲ್ಲ. ನಮ್ಮ ಮನೆಗಳಿಗೆ ರಸ್ತೆ ಸಂಪರ್ಕವಿಲ್ಲ. ಇಳಿಜಾರಾಗಿರುವ ಓಣಿಯಲ್ಲೇ ಸಾಗಬೇಕು. ವೃದ್ಧರು, ಮಕ್ಕಳು ಓಡಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಜಾರುಬಂಡಿಯಂತಾಗುವ ಇಲ್ಲಿನ ದಾರಿಯಲ್ಲಿ ಬಿದ್ದು ಮಕ್ಕಳು ಗಾಯ ಮಾಡಿಕೊಂಡಿದ್ದಾರೆ. ಪಕ್ಕದ ಮನೆಯವರೊಬ್ಬರು ಬಿದ್ದು, ಕಾಲು ಮುರಿದಿದೆ.ಮೆಟ್ಟಿಲು ನಿರ್ಮಿಸಿ ಆ ಓಣಿಯನ್ನಾದರೂ ಒಪ್ಪ ಓರಣ ಮಾಡಿಕೊಡಿ ಎಂದರೆ ಯಾವ ಜನಪ್ರತಿನಿಧಿಯೂ ಕಿವಿಗೆ ಹಾಕಿಕೊಳ್ಳುವುದಿಲ್ಲ’ ಎಂದು ದೂರುತ್ತಾರೆ ಜ್ಯೋತಿನಗರದ ನಿವಾಸಿ ರೇಖಾ.

‘ದುಡಿಮೆ ಕಮ್ಮಿ– ಖರ್ಚೇ ಜಾಸ್ತಿ’

‘ಏಳೆಂಟು ವರ್ಷಗಳ ಹಿಂದೆ ಇಲ್ಲಿ ದುಡಿದ ದುಡ್ಡಿನಲ್ಲಿ ಸ್ವಲ್ಪವಾದರೂ ಉಳಿಸಲು ಸಾಧ್ಯವಾಗುತ್ತಿತ್ತು. ಈಗ ಜೀವನ ದುಬಾರಿಯಾಗಿದೆ. ನಮ್ಮ ಪಗಾರ ಅದಕ್ಕೆ ತಕ್ಕಂತೆ ಜಾಸ್ತಿಯಾಗಿಲ್ಲ. ಬದುಕು ಸಾಗಿಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಕಲಬುರಗಿಯಿಂದ ಬಂದು ನಗರದಲ್ಲಿ ನೆಲೆಸಿರುವ ಹಮಾಲಿ ಕಾರ್ಮಿಕ ಶರಣಪ್ಪ.

‘ಊರ ಜಾತ್ರೆಗೆ, ಯುಗಾದಿ, ದೀಪಾವಳಿ, ಸಂಕ್ರಾಂತಿ, ಪಂಚಮಿ ಸೇರಿ ವರ್ಷದಲ್ಲಿ ನಾಲ್ಕೈದು ಸಲ ಹಬ್ಬಕ್ಕೆ ಊರಿಗೆ ಹೋಗಬೇಕಾಗುತ್ತದೆ. ಹಬ್ಬಗಳ ಸಂದರ್ಭದಲ್ಲಿ ಬಸ್‌ ಟಿಕೆಟ್‌ ದರ ಜಾಸ್ತಿ ಮಾಡುತ್ತಾರೆ. ಕುಟುಂಬ ಸಮೇತ ಊರಿಗೆ ಹೋಗಿಬರಲು ಬಸ್‌ ಟಿಕೆಟ್‌ಗೆ ₹ 10 ಸಾವಿರಕ್ಕೂ ಹೆಚ್ಚು ಹಣ ಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.