ಬೆಳಗಾವಿ: ಭಾಷಾಭಿಮಾನವೇ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೂರಣ. ಭಾಷೆ ಮೂಲಕವೇ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುತ್ತ ಬಂದಿರುವ ಇಲ್ಲಿ ಕಣ ರಂಗೇರಿದೆ. ಕ್ಷೇತ್ರ ಪುನರ್ ವಿಂಗಡಣೆಯ ಕಾರಣ ಶಾಸಕರು ಅದಲು– ಬದಲಾಗಿದ್ದಾರೆ.
ಸದ್ಯ ದಕ್ಷಿಣ ಕ್ಷೇತ್ರದ ಪ್ರತಿನಿಧಿಸುತ್ತಿರುವ ಅಭಯ ಪಾಟೀಲ ಮೂರು ಬಾರಿ ಶಾಸಕರಾಗಿದ್ದಾರೆ. 2004ರಲ್ಲಿ ಹಿರೇಬಾಗೇವಾಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗ, ದಕ್ಷಿಣ ಕ್ಷೇತ್ರದಿಂದ ಗೆದ್ದರು. ಇದೇ ಕ್ಷೇತ್ರದಲ್ಲಿ 20013ರಲ್ಲಿ ಸಂಭಾಜಿ ಪಾಟೀಲ ವಿರುದ್ಧ ಸೋಲುಂಡರು. 2018ರಲ್ಲಿ ಮತ್ತೆ ಗೆದ್ದರು.
ಈ ಬಾರಿಯೂ ಅವರು ಗೆಲುವಿನ ಓಟ ಮುಂದುವರಿಸುತ್ತಾರೆಯೇ ಅಥವಾ ಕಾಂಗ್ರೆಸ್, ಮಹಾರಾಷ್ಟ್ರ ಏಕೀಕರಣ ಸಮಿತಿ ಅದಕ್ಕೆ ಅಡ್ಡಗಾಲು ಹಾಕುವುದೇ ಎಂಬುದು ಕುತೂಹಲ ಮೂಡಿಸಿದೆ.
ನಗರ ಮಾತ್ರವಲ್ಲದೆ, ಕೆಲವು ಹಳ್ಳಿಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಭಾಷಾ ರಾಜಕಾರಣದ ಮೂಲಕವೇ ಅಭ್ಯರ್ಥಿಗಳು ಗೆಲುವು ಸಾಧಿಸುತ್ತ ಬಂದಿದ್ದಾರೆ. ಈ ಬಾರಿಯೂ ಭಾಷೆ ಹೆಸರಿನಲ್ಲಿ ಮತದಾರರನ್ನು ಓಲೈಸುವ ಪ್ರಕ್ರಿಯೆ ಎಲ್ಲ ಪಕ್ಷಗಳಿಂದಲೂ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠರು, ನೇಕಾರರು, ಮುಸ್ಲಿಮರು, ಪರಿಶಿಷ್ಟ ಸಮುದಾಯ ಮತಗಳನ್ನು ಸೆಳೆಯಲು ಪ್ರಯತ್ನ ಮುಂದುವರಿದಿದೆ.
ಅಭಯ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಖಾತ್ರಿ ಎಂಬಂತಿದೆ. ಆದರೆ, ಪಕ್ಷದ ಇನ್ನೊಂದು ಗುಂಪು ಕಿರಣ ಜಾಧವ ಅವರನ್ನು ಮುಂದಿಟ್ಟುಕೊಂಡು ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಲು ತಂತ್ರಗಾರಿಕೆ ಹೆಣೆದಿದೆ.
ಕಳೆದ ಚುನಾವಣೆಯಲ್ಲಿ ಎಂ.ಡಿ.ಲಕ್ಷ್ಮಿನಾರಾಯಣ ವಿರುದ್ಧ ಗೆಲುವು ಕಂಡ ಅಭಯ ಪಾಟೀಲ, ಮತ್ತೊಂದು ಅವಕಾಶಕ್ಕಾಗಿ ಪ್ರಚಾರ ಚುರುಕುಗೊಳಿಸಿದ್ದಾರೆ. ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ, ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.
ಹಿಂದೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಮುಖಂಡ ಕಿರಣ ಜಾಧವ, ಈ ಸಲ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಮತದಾರರನ್ನು ಸೆಳೆಯಲು ಪ್ರಯತ್ನ ಮುಂದುವರಿಸಿದ್ದಾರೆ.
ಹೆಚ್ಚಿದ ಆಕಾಂಕ್ಷಿಗಳು: ಬಿಜೆಪಿಗೆ ಸ್ಪರ್ಧೆಯೊಡ್ಡಲು ಕಾಂಗ್ರೆಸ್ ಕೂಡ ತಂತ್ರ ರೂಪಿಸುತ್ತಿದೆ. ಆದರೆ, ಆ ಪಕ್ಷದಲ್ಲಿ ಪ್ರಬಲವಾದ ಅಭ್ಯರ್ಥಿಗಳಿಲ್ಲ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಅಭ್ಯರ್ಥಿ ಆಯ್ಕೆ ನಾಯಕರಿಗೂ ಸಂಕಷ್ಟ ತಂದಿಟ್ಟಿದೆ. ಕಾಂಗ್ರೆಸ್ ಗುರುವಾರ ಪ್ರಕಟಿಸಿದ ಎರಡನೇ ಪಟ್ಟಿಯಲ್ಲೂ ದಕ್ಷಿಣ ಕ್ಷೇತ್ರದಿಂದ ಯಾವೊಬ್ಬ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ.
ಮುಖಂಡರಾದ ಪ್ರಭಾವತಿ ಚಾವಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಮೇಶ ಗೋರಲ್, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ, ವಕೀಲ ಚಂದ್ರಹಾಸ ಅಣ್ವೇಕರ್, ರೇಖಾ ದೇಸಾಯಿ ಮತ್ತಿತರರು ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ.
ಬೆಳಗಾವಿ ಉತ್ತರ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ರಮೇಶ ಕುಡಚಿ ಸಹ ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ‘ಹಲವು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ನಮಗೇ ಟಿಕೆಟ್ ನೀಡಬೇಕು’ ಎಂದು ಹಲವರು ಬೇಡಿಕೆ ಇರಿಸಿದ್ದಾರೆ. ‘ನಿರ್ಣಾಯಕವಾಗಿರುವ ಸಮುದಾಯದ ಮತ್ತು ಜನಸಂಪರ್ಕ ಹೆಚ್ಚಿರುವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ, ಬಿಜೆಪಿಗೆ ಪೈಪೋಟಿ ನೀಡಬಹುದು’ ಎಂಬುದು ಕೈ ಪಡೆ ನಾಯಕರ ಲೆಕ್ಕಾಚಾರ.
ಎಂಇಎಸ್‌ನಿಂದಲೂ ಕಣಕ್ಕೆ: ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್, ಉದ್ಯಮಿ ಅಪ್ಪಾಸಾಹೇಬ ಗುರವ, ಶುಭಂ ಶೆಳಕೆ ಎಂಇಎಸ್‌ನಿಂದ ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ. ಆದರೆ, ಆ ಸಂಘಟನೆ ನೇಮಿಸಿದ 101 ಸದಸ್ಯರ ಸಮಿತಿ ಕ್ಷೇತ್ರದಾದ್ಯಂತ ಸಮೀಕ್ಷೆ ಕೈಗೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.
ಛಿದ್ರವಾದ ಎಂಇಎಸ್ ಕೋಟೆ
ದಕ್ಷಿಣ ಕ್ಷೇತ್ರದ ಕೆಲವು ಬಡಾವಣೆಗಳು ಹಾಗೂ ಗ್ರಾಮಗಳು ಈ ಹಿಂದೆ ಉಚಗಾಂವ ಕ್ಷೇತ್ರಕ್ಕೆ ಒಳಪಟ್ಟಿದ್ದವು. 1967ರಿಂದ 2004ರವರೆಗೆ ನಡೆದ 9 ಚುನಾವಣೆಗಳ ಪೈಕಿ 8ರಲ್ಲಿ ಎಂಇಎಸ್ ಅಭ್ಯರ್ಥಿಗಳೇ ಗೆದ್ದಿದ್ದರು.
ಕ್ಷೇತ್ರ ಪುನರ್‌ವಿಂಗಡಣೆಯಾದ ನಂತರ 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಅವರು ಎಂಇಎಸ್ ಅಭ್ಯರ್ಥಿ ಕಿರಣ ಸಾಯನಾಕ್ ವಿರುದ್ಧ ಗೆದ್ದರು. 2013ರ ಚುನಾವಣೆಯಲ್ಲಿ ಎಂಇಎಸ್‌ನ ಸಂಭಾಜಿ ಪಾಟೀಲ ಅವರು ಬಿಜೆಪಿಯ ಅಭಯ ಪಾಟೀಲ ಮಣಿಸಿದ್ದರು. ಎಂಇಎಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲೀಗ ರಾಷ್ಟ್ರೀಯ ಪಕ್ಷಗಳ ಅಬ್ಬರ ಜೋರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.