ರಾಜರಾಜೇಶ್ವರಿನಗರ: ‘ಮೂರು ಬಾರಿ ಸೋಲಿಸಿದ್ದೀರಿ. ನಾಲ್ಕನೇ ಬಾರಿಗೆ ಸೋಲಿಸಬೇಡಿ. ಒಮ್ಮೆ ವಿಧಾನಸೌಧಕ್ಕೆ ಕಳುಹಿಸಿಕೊಡಿ. ನಿಮ್ಮ ಸೇವೆ ಮಾಡಿದಾಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಹೇಳುತ್ತಲೇ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಕಣ್ಣೀರು ಹಾಕಿದರು.
ಮಾಗಡಿ ರಸ್ತೆಯ ಅಂಜನಾನಗರ ಬಳಿಯ ಬಿಇಎಲ್ ಬಡಾವಣೆಯಲ್ಲಿ ನಡೆದ ಪ್ರಚಾರದಲ್ಲಿ ಅವರು ಮಾತನಾಡಿದರು. ‘ಈ ನೆಲದ ಋಣವನ್ನು ತೀರಿಸಲು, ಅಭಿವೃದ್ಧಿ ಕಾಮಗಾರಿ ನಡೆಸಲು, ನೊಂದವರು, ಕಾರ್ಮಿಕರು, ಎಲ್ಲ ವರ್ಗದ ಬಡವರು, ಜನಸಾಮಾನ್ಯರ ಸೇವೆಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ‘ಭ್ರಷ್ಟ, ಲೂಟಿಕೋರ, ಜಾತಿವಾದಿ, ಕೋಮುವಾದಿ ಬಿಜೆಪಿಯನ್ನು ಬೇರುಸಹಿತ ಕಿತ್ತುಹಾಕುವ ಮೂಲಕ ನಾಡನ್ನು ಕಟ್ಟುವ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಿ’ ಎಂದು ಕೋರಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ವಿಧಾನಸಭಾ ಚುನಾವಣೆ ನ್ಯಾಯಯುತವಾಗಿ ನಡೆಯುತ್ತಿಲ್ಲ, ಆಡಳಿತ ಪಕ್ಷದ ಅಣತಿಯಂತೆ ಕೆಲವು ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ, ಬಮೂಲ್ ಮಾಜಿ ನಿರ್ದೇಶಕ ಪಂಚಲಿಂಗಯ್ಯ, ಜೆಡಿಎಸ್ ನಾಯಕರಾದ ದೊಡ್ಡಮನೆ ವೆಂಕಟೇಶ್, ಚೇತನ್‍ಗೌಡ, ಜಿ.ಪಂ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಮಾಜಿ ಸದಸ್ಯೆ ಲತಾ ಹನುಮಂತೇಗೌಡ, ಕೇಶವಮೂರ್ತಿ, ನರಸಿಂಹಮೂರ್ತಿ, ಅರುಣ್‍ಗೌಡ ಅವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.