ADVERTISEMENT

ಚಾಮರಾಜನಗರ: ‘ಕೈ’ಗೆ ಜೈ, ತೊನೆದಾಡಿದ ‘ತೆನೆ’, ಕಮರಿದ ‘ಕಮಲ’

​ಪ್ರಜಾವಾಣಿ ವಾರ್ತೆ
Published 13 ಮೇ 2023, 17:24 IST
Last Updated 13 ಮೇ 2023, 17:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಜಯದ ನಗೆ ಬೀರಿದೆ. ಗೆಲುವಿನ ಭಾರಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಮೂರು ಗೆಲುವಿನೊಂದಿಗೆ ಕಾಂಗ್ರೆಸ್‌ ಜಿಲ್ಲೆಯ ರಾಜಕೀಯದ ಮೇಲಿನ ತನ್ನ ಹಿಡಿತವನ್ನು ಬಲಗೊಳಿಸಿದೆ. ಜೆಡಿಎಸ್‌ ಹನೂರು ಕ್ಷೇತ್ರದಲ್ಲಿ ಇನ್ನಷ್ಟು ಸದೃಢವಾಗಿದೆ. ಐದು ವರ್ಷಗಳಿಂದ ಪ್ರಬಲವಾಗುತ್ತಾ ಸಾಗಿದ್ದ ಬಿಜೆಪಿ ಜಿಲ್ಲೆಯಲ್ಲಿ ದುರ್ಬಲಗೊಂಡಿದೆ.

ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್‌.ಕೃಷ್ಣಮೂರ್ತಿ ಮತ್ತು ಎಚ್‌.ಎಂ.ಗಣೇಶ್‌ ಪ್ರಸಾದ್‌ ಗೆಲುವಿನ ದಡ ಸೇರಿದ್ದರೆ, ಹನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಂ.ಆರ್‌.ಮಂಜುನಾಥ್‌ ಜಯ ಸಾಧಿಸಿದ್ದಾರೆ.

ADVERTISEMENT

ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಚಿವ ವಿ.ಸೋಮಣ್ಣ ಸೋಲಿನ ಕಹಿ ಉಂಡಿದ್ದಾರೆ.

ನಾಲ್ವರು ಹಾಲಿ ಶಾಸಕರಲ್ಲಿ ಚಾಮರಾಜನಗರ ಕ್ಷೇತ್ರದ ಸಿ. ಪುಟ್ಟರಂಗಶೆಟ್ಟಿಗೆ ಮಾತ್ರ ವಿಜಯಲಕ್ಷ್ಮಿ ಒಲಿದಿದ್ದು, ಕೊಳ್ಳೇಗಾಲದ ಎನ್‌.ಮಹೇಶ್‌, ಗುಂಡ್ಲುಪೇಟೆಯ ಸಿ.ಎಸ್‌.ನಿರಂಜನಕುಮಾರ್‌ ಮತ್ತು ಹನೂರು ಕ್ಷೇತ್ರದ ಆರ್‌.ನರೇಂದ್ರ ಅವರು ಭಾರಿ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಎ.ಆರ್‌.ಕೃಷ್ಣಮೂರ್ತಿ, ಗುಂಡ್ಲುಪೇಟೆಯಲ್ಲಿ ಎಚ್‌.ಎಂ.ಗಣೇಶ್‌ ಪ್ರಸಾದ್‌ ಅವರು ಹಾಲಿ ಶಾಸಕರ ವಿರುದ್ಧ ದಾಖಲೆಯ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಸೋಮಣ್ಣಗೆ ಮುಖಭಂಗ: ವಿ.ಸೋಮಣ್ಣ ಸ್ಪರ್ಧೆಯಿಂದ ರಾಜ್ಯದ ಗಮನಸೆಳೆದಿದ್ದ ಚಾಮರಾಜನಗರ ಕ್ಷೇತ್ರದಲ್ಲಿ, ‘ಹ್ಯಾಟ್ರಿಕ್‌’ ವೀರ ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಸತತ ನಾಲ್ಕನೇ ಬಾರಿಗೆ ವಿಜಯಶಾಲಿಯಾಗಿದ್ದಾರೆ. 7,533 ಮತಗಳಿಂದ ಸೋಮಣ್ಣ ಅವರನ್ನು ಮಂಡಿಯೂರುವಂತೆ ಮಾಡಿದ್ದಾರೆ.

ಪುಟ್ಟರಂಗಶೆಟ್ಟಿ ಅವರು 83,858 ಮತಗಳನ್ನು ಪಡೆದಿದ್ದಾರೆ. ವಿ.ಸೋಮಣ್ಣ 76,325 ಮತಗಳನ್ನು ಗಳಿಸಿದ್ದಾರೆ.

ಬಿಎಸ್‌ಪಿ ಅಭ್ಯರ್ಥಿ ಹ.ರಾ.ಮಹೇಶ್‌, ಮತಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದು, 6,461 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ 1082 ಮತಗಳು ಬಿದ್ದಿವೆ.

ಎಆರ್‌ಕೆಗೆ ದಾಖಲೆ ಗೆಲುವು: ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ.ಆರ್‌.ಕೃಷ್ಣಮೂರ್ತಿ ಅವರು ದಾಖಲೆಯ 59,519 ಮತಗಳ ಅಂತರದಿಂದ ಹಾಲಿ ಶಾಸಕ, ಬಿಜೆಪಿಯ ಎನ್‌.ಮಹೇಶ್‌ ಅವರನ್ನು ಸೋಲಿಸಿದ್ದಾರೆ. ಆ ಮೂಲಕ, 19 ವರ್ಷಗಳ ಚುನಾವಣಾ ರಾಜಕೀಯ ಸೋಲಿನ ಕಹಿಯನ್ನು ಮರೆತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪ್ರಬಲ ಸ್ಪರ್ಧೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮತಗಳಿಕೆಯನ್ನು ನೋಡಿದರೆ ಇದು ಏಕಮುಖ ಸ್ಪರ್ಧೆಯಾಗಿದೆ. ಕೃಷ್ಣಮೂರ್ತಿ ಅವರು 1,08,363 ಮತಗಳನ್ನು ಪಡೆದಿದ್ದರೆ, ಎನ್‌.ಮಹೇಶ್‌ ಅವರು 48,844 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ. ಆಡಳಿತ ವಿರೋಧಿ ಅಲೆ ಮಹೇಶ್‌ ಅವರನ್ನು ಕಂಗೆಡುವಂತೆ ಮಾಡಿದೆ.

ಜೆಡಿಎಸ್‌ ಅಭ್ಯರ್ಥಿ ಬಿ.ಪುಟ್ಟಸ್ವಾಮಿ, ಕಾಂಗ್ರೆಸ್‌, ಬಿಜೆಪಿಗೆ ಪೈಪೋಟಿ ನೀಡಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ. 3,855 ಮತಗಳನ್ನು ಪಡೆದಿರುವ ಅವರು ಮತಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಎನ್‌.ಮಹೇಶ್‌ ವಿರುದ್ಧ ಬಂಡಾಯ ಎದ್ದು ಸ್ಪರ್ಧಿಸಿದ್ದ ಕಿನಕಹಳ್ಳಿ ರಾಚಯ್ಯ ಅವರಿಗೆ 1,519 ಮತಗಳು ಬಿದ್ದಿವೆ. 1,671 ಮಂದಿ ಮತದಾರರು ನೋಟಾ ಗುಂಡಿ ಒತ್ತಿದ್ದಾರೆ.

ನಿರಂಜನಗೆ ಹೀನಾಯ ಸೋಲು: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿದ್ದ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎಂ.ಗಣೇಶ್‌ ಪ್ರಸಾದ್‌ ದಾಖಲೆಯ 36,675 ಮತಗಳ ಅಂತರದಿಂದ ಹಾಲಿ ಶಾಸಕ, ಬಿಜೆಪಿಯ ಸಿ.ಎಸ್‌.ನಿರಂಜನಕುಮಾರ್‌ ಅವರನ್ನು ಸೋಲಿಸಿದ್ದಾರೆ.

ತುರುಸಿನ ಸ್ಪರ್ಧೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಆಡಳಿತ ವಿರೋಧಿ ಅಲೆ, ಬಂಡಾಯದ ಬಿಸಿ ಎದುರಿಸಿದ್ದ ನಿರಂಜನಕುಮಾರ್‌ 71,119 ಮತಗಳನ್ನು ಗಳಿಸಿದ್ದರೆ, ಗಣೇಶ್‌ ‍ಪ್ರಸಾದ್‌ 1,07,794 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದ ಎಂ.ಪಿ.ಸುನಿಲ್‌ ಹೆಚ್ಚು ಮತಗಳನ್ನು ಪಡೆಯಲು ವಿಫಲರಾಗಿದ್ದಾರೆ. ಅವರಿಗೆ 2,227 ಮತಗಳು ಬಿದ್ದಿವೆ. ಜೆಡಿಎಸ್‌ನ ಕಡಬೂರು ಮಂಜುನಾಥ್‌ಗೆ 1850 ಮತಗಳು ಬಂದಿವೆ. ನೋಟಾ ಮತಗಳು 1,538 ದಾಖಲಾಗಿವೆ.

‘ಹ್ಯಾಟ್ರಿಕ್‌’ ಸಾಧಕನಿಗೆ ಸೋಲು: ಹನೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹಾಲಿ ಶಾಸಕ, ಕಾಂಗ್ರೆಸ್‌ನ ಆರ್‌.ನರೇಂದ್ರ ಅವರು ಜೆಡಿಎಸ್‌ನ ಎಂ.ಆರ್‌.ಮಂಜುನಾಥ್‌ ವಿರುದ್ಧ 17,654 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಬಿಜೆಪಿಯ ಪ್ರೀತನ್‌ ನಾಗಪ್ಪ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್‌ನ ಎಂ.ಆರ್.ಮಂಜುನಾಥ್‌ ಅವರು 75,632 ಮತಗಳನ್ನು ಪಡೆದರೆ, ನರೇಂದ್ರ 57,978 ಮತಗಳನ್ನು ಗಳಿಸಿದ್ದಾರೆ.

ಬಿಜೆಪಿಯ ಡಾ. ಪ್ರೀತನ್‌ ನಾಗಪ್ಪ 35,870 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ಹರೀಶ್‌ ಕೆ. 2,515 ಮತ್ತು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ಜಾನ್‌ ಪೀಟರ್‌ ಅವರಿಗೆ 1,596 ಮತಗಳು ಬಂದಿವೆ.

ವಿಜೇತರು ಏನಂತಾರೆ?

ಅಭಿವೃದ್ಧಿಗೆ ಜನರ ಬೆಂಬಲ

ಕ್ಷೇತ್ರದಲ್ಲಿ 15 ವರ್ಷಗಳಿಂದ ನಡೆದಿರುವ ಅಭಿವೃದ್ಧಿ ಕೆಲಸಗಳು ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ಕ್ಷೇತ್ರದ ಜನರು ಬೆಂಬಲ ನೀಡಿದ್ದಾರೆ. ಬಿಜೆಪಿಯವರ ದುಡ್ಡನ್ನು ಜನರು ತಿರಸ್ಕರಿಸಿದ್ದಾರೆ. ಕ್ಷೇತ್ರದಲ್ಲಿ ಸತತ ನಾಲ್ಕನೇ ಗೆಲುವು ನೀಡಿದ ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇನೆ.

–ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಕ್ಷೇತ್ರದ ವಿಜೇತ ಅಭ್ಯರ್ಥಿ

ಜನತೆಗೆ ಗೆಲುವು ಅರ್ಪಣೆ

ನಾನು ಒಂದು ಮತದಿಂದ ಸೋತವನು. ಹಾಗಾಗಿ, ನನಗೆ ಒಂದು ಮತದ ಬೆಲೆಯೂ ತಿಳಿದಿದೆ. ಕ್ಷೇತ್ರದ ಜನರು ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಈ ಗೆಲುವನ್ನು ನಾನು ಅವರಿಗೆ ಅರ್ಪಿಸುತ್ತೇನೆ.

ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಜೊತೆಗೆ ಕ್ಷೇತ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಡಿರುವ ಕೆಲಸಗಳು, ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಯೋಜನೆ ಗೆಲುವಿಗೆ ಸಹಕಾರಿಯಾಗಿದೆ. ಬಿಜೆಪಿ ಆಡಳಿತ ವಿರೋಧಿ ಅಲೆಯೂ ಕೆಲಸ ಮಾಡಿದೆ.

–ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ ಕ್ಷೇತ್ರದ ವಿಜೇತ ಅಭ್ಯರ್ಥಿ

ಎಲ್ಲರ ಸಹಕಾರದಿಂದ ಜಯ

ನನ್ನ ತಂದೆ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅಧಿಕಾರದ ಅವಧಿಯಲ್ಲಿ ನಡೆದಿದ್ದ ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಸಹಕಾರಿಯಾಯಿತು. ಕ್ಷೇತ್ರದ ಶಾಸಕರ ಆಡಳಿತ ವಿರೋಧಿ ಧೋರಣೆ, ಅಭಿವೃದ್ಧಿ ಕೆಲಸಗಳಲ್ಲಿನ ಹಿನ್ನಡೆಯಿಂದ ಜನರು ಬದಲಾವಣೆ ಬಯಸಿ, ಅವಕಾಶ ನೀಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದೇನೆ. ಈ ವೇಳೆ ಜನರು ನನ್ನ ಬೆಂಬಲಿಸುವ ಭರವಸೆ ನೀಡಿದ್ದರು. ಅಲ್ಲದೇ ನಮ್ಮ ತಂದೆ ಜೊತೆ ಇದ್ದ ಎಲ್ಲ ಹಿರಿಯ ಮುಖಂಡರು ನನ್ನ ಜೊತೆಯಲ್ಲಿದ್ದರು. ದಿವಂಗತ ಆರ್. ಧ್ರುವನಾರಾಯಣ ಕೂಡ ರಾಜಕೀಯವಾಗಿ ಬೆಳೆಯಲು ಸಹಕಾರಿಯಾಗಿದ್ದರು. ಎಲ್ಲರ ಸಹಕಾರದಿಂದ ಗೆಲುವು ಬಂದಿದೆ.

–ಎಚ್‌.ಎಂ.ಗಣೇಶ್‌ ಪ್ರಸಾದ್‌, ಗುಂಡ್ಲುಪೇಟೆ ವಿಜೇತ ಅಭ್ಯರ್ಥಿ

ಮಾದರಿ ಕ್ಷೇತ್ರ ನಿರ್ಮಾಣ ಮಾಡುವೆ

ಕ್ಷೇತ್ರದ ಜನರಿಗೆ ನೀಡಿದ ಭರವಸೆಯಂತೆ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಉತ್ತಮ ಆಸ್ಪತ್ರೆ, ರಸ್ತೆಗಳಿಲ್ಲ. ಇದರಿಂದ ಹಲವೆಡೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ತೊಂದರೆಯುಂಟಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಳಿಗೆ ಜನರು ಹೊರ ಜಿಲ್ಲೆಗಳಿಗೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಐದು ವರ್ಷಗಳಿಂದ ಕ್ಷೇತ್ರದಾದ್ಯಂತ ಸುತ್ತಾಟ ನಡೆಸಿ, ಪ್ರತಿ ಮನೆ-ಮನೆಗೂ ಭೇಟಿ ನೀಡಿದಾಗ ಈ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಹೀಗಾಗಿ, ಇವುಗಳತ್ತ ಗಮನಹರಿಸಿ, ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡುತ್ತೇನೆ.

-ಎಂ.ಆರ್‌.ಮಂಜುನಾಥ್‌, ಹನೂರು ವಿಜೇತ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.