ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಗುರುವಾರ ರಾತ್ರಿ ಪ್ರಕಟಿಸಿದೆ. ರಾಜ್ಯದ ಐವರು ಸಚಿವರ ಮಕ್ಕಳಿಗೆ ಮಣೆ ಹಾಕಲಾಗಿದೆ. ಮತ್ತೊಬ್ಬ ಸಚಿವರ ಪತ್ನಿಗೆ ಅವಕಾಶ ಕಲ್ಪಿಸಲಾಗಿದೆ. ಪಕ್ಷದ ನಾಯಕರ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಆದ್ಯತೆ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕುಟುಂಬವೇ ಪ್ರಧಾನವಾಗಿದ್ದರೆ, ಉಳಿದೆಲ್ಲ ಅಂಶಗಳು ಗೌಣವಾಗಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಕ್ಷೇತ್ರದಿಂದ ಈ ಸಲ ಸ್ಪರ್ಧಿಸುವುದಿಲ್ಲ. 2019ರ ಚುನಾವಣೆಯಲ್ಲಿ ಅವರು ಸೋತಿದ್ದರು. ಈ ಬಾರಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ. ಖರ್ಗೆ ಕುಟುಂಬದ ಮತ್ತೊಬ್ಬ ಸದಸ್ಯರ ರಾಜಕಾರಣ ಪ್ರವೇಶಕ್ಕೆ ಲೋಕಸಭಾ ಚುನಾವಣೆಯು ವೇದಿಕೆ ಕಲ್ಪಿಸಿದೆ.
25 ವರ್ಷಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರೊಬ್ಬರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡದಿರುವುದು ಇದೇ ಮೊದಲು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ‘ನನಗೀಗ 83 ವರ್ಷ. ನೀವು (ಪತ್ರಕರ್ತರು) 65 ವರ್ಷಕ್ಕೆ ನಿವೃತ್ತರಾಗುತ್ತೀರಿ. ಪಕ್ಷದ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರು ಹೇಳಿದರೆ ನಾನು ಖಂಡಿತವಾಗಿ ಸ್ಪರ್ಧೆ ಮಾಡುತ್ತೇನೆ’ ಎಂದು ಖರ್ಗೆ ಅವರು ಇತ್ತೀಚೆಗೆ ಹೇಳಿದ್ದರು. ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ದೇಶದಾದ್ಯಂತ ಪ್ರಚಾರ ನಡೆಸಬೇಕಾದ ಕಾರಣಕ್ಕೆ ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಕಲಬುರಗಿ ಕ್ಷೇತ್ರಕ್ಕೆ ಖರ್ಗೆ ಅವರ ಹೆಸರನ್ನು ಮಾತ್ರ ಪಕ್ಷದ ರಾಜ್ಯ ಘಟಕ ಶಿಫಾರಸು ಮಾಡಿತ್ತು.
ಸಚಿವರ ಬದಲು ಮಕ್ಕಳು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಚಿವರು ಹಿಂದೇಟು ಹಾಕಿದ್ದರು. ಹೀಗಾಗಿ, ಅವರ ಮಕ್ಕಳನ್ನು ಪಕ್ಷ ಕಣಕ್ಕಿಳಿಸಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಹೆಬ್ಬಾಳಕರ ಬೆಳಗಾವಿಯಿಂದ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ ಬಾಗಲಕೋಟೆಯಿಂದ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣದಿಂದ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್‌ನಿಂದ ಸ್ಪರ್ಧಿಸಲಿದ್ದಾರೆ. ಸೌಮ್ಯಾ ರೆಡ್ಡಿ ಹೊರತುಪಡಿಸಿದರೆ ಉಳಿದವರು ರಾಜಕಾರಣಕ್ಕೆ ಹೊಸಬರು. ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದ ಸೌಮ್ಯಾ ಅವರು 2023ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರು.
ದಾವಣಗೆರೆ ಕ್ಷೇತ್ರದಿಂದ ಗಣಿ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯು ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದೆ. ಕಳೆದ ಕೆಲವು ಚುನಾವಣೆಗಳಿಂದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬ ಮುಖಾಮುಖಿಯಾಗುತ್ತಿವೆ.
ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಯುವ ಮುಖಂಡ ಮನ್ಸೂರ್ ಅಲಿ ಖಾನ್ ಹುರಿಯಾಳು. ಅವರು ಕೇಂದ್ರದ ಮಾಜಿ ಸಚಿವ ಕೆ. ರಹಮಾನ್ ಖಾನ್ ಅವರ ಪುತ್ರ. ಕೊಪ್ಪಳದ ಅಭ್ಯರ್ಥಿಯಾಗಿರುವ ರಾಜಶೇಖರ್ ಹಿಟ್ನಾಳ್ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಸಹೋದರ.
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಪ್ತ ಪದ್ಮರಾಜ್ ಅವರಿಗೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಣೆ ಹಾಕಲಾಗಿದೆ. ಉಡುಪಿ– ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹುರಿಯಾಳು. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು ಕೆಲವು ವರ್ಷಗಳ ಹಿಂದೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಕೆಲವು ದಿನಗಳ ಹಿಂದೆ ಕೈ ಪಾಳಯಕ್ಕೆ ಮರಳಿದ್ದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸ್ಪರ್ಧಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಅವರು ಮಾದಿಗ ಸಮುದಾಯದ ಹಿರಿಯ ನಾಯಕರು. ಮೈಸೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂ. ಲಕ್ಷ್ಮಣ ಪಕ್ಷದ ಅಭ್ಯರ್ಥಿ.
ರಾಯಚೂರು ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅವರು ಕೆಲವು ತಿಂಗಳ ಹಿಂದೆ ನಿವೃತ್ತರಾಗಿದ್ದರು. ಧಾರವಾಡದಲ್ಲಿ ರಾಜಕೀಯ ಹಿನ್ನೆಲೆ ಇಲ್ಲದ ವಿನೋದ್ ಅಸೂಟಿ ಅವರಿಗೆ ಅವಕಾಶ ನೀಡಲಾಗಿದೆ. ಕುರುಬ ಸಮುದಾಯಕ್ಕೆ ಸೇರಿದವರು. ಅವರು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರನ್ನು ಎದುರಿಸಲಿದ್ದಾರೆ.
ಕಾಂಗ್ರೆಸ್ ಪಕ್ಷವು 24 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದಂತಾಗಿದೆ.
ಇಂದು ಸಿಇಸಿ ಸಭೆ: ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆ ಶುಕ್ರವಾರ ನಡೆಯಲಿದೆ. ಈ ಸಭೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಂಭವ ಇದೆ.
‘ಉದಯಪುರ ಘೋಷಣೆ’ಗೆ ಎಳ್ಳುನೀರು
2022ರ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವು ಉದಯಪುರದಲ್ಲಿ ಚಿಂತನ ಶಿಬಿರ ನಡೆಸಿತ್ತು. ಪಕ್ಷದ ಪುನರುಜ್ಜೀವನಕ್ಕೆ ಅನೇಕ ಉಪಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ‘ಉದಯಪುರ ಘೋಷಣೆ’ ಹೆಸರಿನಲ್ಲಿ ಅನೇಕ ಘೋಷಣೆಗಳನ್ನು ಮಾಡಲಾಗಿತ್ತು. ‘ಒಂದು ಕುಟುಂಬಕ್ಕೆ ಒಂದು ಟಿಕೆಟ್’ ಎಂಬ ಘೋಷಣೆಯೂ ಅದರಲ್ಲಿ ಸೇರಿತ್ತು. ಕನಿಷ್ಠ ಐದು ವರ್ಷ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದರೆ ಮಾತ್ರ ಕುಟುಂಬದ ಎರಡನೇ ಸದಸ್ಯನಿಗೆ ಟಿಕೆಟ್ ನೀಡಬಹುದು ಎಂಬ ಅಂಶವೂ ಈ ಘೋಷಣೆಯಲ್ಲಿ ಒಳಗೊಂಡಿದೆ.
ಕರ್ನಾಟಕ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ‘ಉದಯಪುರ ಘೋಷಣೆ’ಗೆ ಎಳ್ಳುನೀರು ಬಿಡಲಾಗಿದೆ. ‘ಗೆಲ್ಲುವ’ ಮಾನದಂಡವನ್ನು ಮುಂದಿಟ್ಟುಕೊಂಡು ಕುಟುಂಬ ಸದಸ್ಯರಿಗೆ ಟಿಕೆಟ್ ಹಂಚಿಕೆಯಲ್ಲಿ ಪ್ರಾಧಾನ್ಯ ನೀಡಲಾಗಿದೆ. ಈ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಜತೆಗೆ, ಮಕ್ಕಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಚಿವರದ್ದು ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.