ಗದಗ: ‘ಕೇಂದ್ರದಿಂದ ಬಂದಿರುವ ಬರ ಪರಿಹಾರದ ಹಣವನ್ನು ರೈತರ ಅಕೌಂಟ್‌ಗೆ ಶೀಘ್ರ ಜಮೆ ಮಾಡಲಾಗುವುದು. ಅದೇ ರೀತಿ, ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಹಣಕ್ಕಾಗಿ ಹೋರಾಟವನ್ನೂ ಮುಂದುವರಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
‘ರಾಜ್ಯ ಸರ್ಕಾರ ಕೇಳಿದ್ದು ₹18,172 ಕೋಟಿ. ಕೇಂದ್ರ ಸರ್ಕಾರ ಕೊಟ್ಟಿದ್ದು ₹3,454 ಕೋಟಿ. ಅಂದರೆ, ನಾವು ಕೇಳಿದ್ದರಲ್ಲಿ ಶೇ 19ರಷ್ಟು ಹಣವನ್ನು ಮಾತ್ರ ಕೊಟ್ಟಿದೆ. ಇದು ಅನ್ಯಾಯ ಎಂದು ನಮ್ಮ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವನ್ನು ಮತ್ತೇ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಬರ ಪರಿಹಾರಕ್ಕೆ ಸಂಬಂಧಪಟ್ಟ ಎಲ್ಲ ವರದಿಗಳನ್ನು ಒಪ್ಪಿಸುವಂತೆ ಸೂಚಿಸಿದೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯದ 33.60 ಲಕ್ಷ ಮಂದಿ ರೈತರಿಗೆ ಮೊದಲ ಕಂತಿನಲ್ಲಿ ಬರ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ. ಈಗ ಕೇಂದ್ರದಿಂದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಹಾಕುತ್ತೇವೆ’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರದಿಂದ ಬಂದಿರುವ ಹಣವೆಲ್ಲವನ್ನೂ ರೈತರಿಗೆ ಕೊಡಲಾಗುವುದು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇದಾವುದಕ್ಕೂ ಒಂದು ನಯಾಪೈಸೆ ಬಳಸುವುದಿಲ್ಲ. ಇದನ್ನೆಲ್ಲಾ ರಾಜ್ಯದ ಬೊಕ್ಕಸದಿಂದಲೇ ನಿಭಾಯಿಸಲಾಗುವುದು ಎಂದರು.
ರಾಜ್ಯಕ್ಕೆ ಬರ ಪರಿಹಾರ ತಂದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ’ ಎಂದು ಹರಿಹಾಯ್ದರು.
‘ರಾಜ್ಯದ ರೈತರು ಬೆಳೆದ ಅನ್ನ ತಿಂದು, ಅವರ ಮತಗಳಿಂದ ಗೆದ್ದು ದೆಹಲಿಗೆ ಹೋದ ಬಿಜೆಪಿ ಸಂಸದವರು ಅನ್ನದಾತ ಕಷ್ಟದಲ್ಲಿದ್ದರೂ ಬರ ಪರಿಹಾರ ಕೊಡಿ ಅಂತ ಒಂದು ಮಾತು ಕೇಳಲಿಲ್ಲ. ಆ ಧೈರ್ಯವೂ ಅವರಿಗೆ ಇಲ್ಲ. ಬದಲಾಗಿ, ಕರ್ನಾಟಕ ಸರ್ಕಾರ ಮನಿವಿ ಕೊಟ್ಟಿಲ್ಲ. ಮನವಿ ಕೊಡಲು ವಿಳಂಬ ಮಾಡಿತು. ಕೇಂದ್ರದಿಂದ ರಾಜ್ಯಕ್ಕೆ ಒಂದು ನಯಾಪೈಸೆ ಬಾಕಿ ಬರಬೇಕಿಲ್ಲ ಅಂತ ವಾದ ಮಾಡಿಕೊಂಡು ಬಂದರು’ ಎಂದು ಚಾಟಿ ಬೀಸಿದರು.
‘ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರವನ್ನು ಕೋರ್ಟ್‌ಗೆ ಎಳೆದು, ರಾಜ್ಯಕ್ಕೆ ಬರಬೇಕಿದ್ದ ಬರ ಪರಿಹಾರವನ್ನು ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಪಡೆದುಕೊಂಡಿದೆ. ಈಗ ಪರಿಹಾರದ ಹಣವನ್ನು ನಾವು ತಂದಿದ್ದೇವೆ ಎಂದು ಬಿಜೆಪಿಯವರು ಡ್ರಾಮಾ ಮಾಡುತ್ತಿದ್ದಾರೆ. ಜನರನ್ನು ಪ್ರತಿದಿನ ಯಾಮಾರಿಸಲು ಸಾಧ್ಯವಿಲ್ಲ. ಜನ ಜಾಗೃತರಾಗಿದ್ದು, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.