ADVERTISEMENT

ಕಾಂಗ್ರೆಸ್‌ಗೆ 'ತಾರಾ' ನಾಯಕರಿಲ್ಲದೇ ಹತಾಶೆ: ಪರಣ್ಣ ಮುನವಳ್ಳಿ

​ಪ್ರಜಾವಾಣಿ ವಾರ್ತೆ
Published 3 ಮೇ 2023, 11:36 IST
Last Updated 3 ಮೇ 2023, 11:36 IST
ಪರಣ್ಣ ಮುನವಳ್ಳಿ
ಪರಣ್ಣ ಮುನವಳ್ಳಿ   

ಗಂಗಾವತಿ: ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತಾರಾ ನಾಯಕರಿಲ್ಲದ ಕಾರಣ ಕಾಂಗ್ರೆಸ್ ನಾಯಕರು ಹತಾಶೆಗೊಳಗಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಕರೆಸುವ ರಾಷ್ಟ್ರ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿಯಲ್ಲಿ ಸಾಕಷ್ಟು ಕೇಂದ್ರದ ನಾಯಕರಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ರಾಜ್ಯಕ್ಕೆ ಬಂದರೇ ತಪ್ಪೇನು? ಈ ಹಿಂದೆ ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಇದೀಗ ರಾಹುಲ್ ಗಾಂಧಿ ಪ್ರಚಾರಕ್ಕೆ ಬರುತ್ತಿಲ್ಲವೇ' ಎಂದು ಪ್ರಶ್ನಿಸಿದರು.

'ಚುನಾವಣೆಯಲ್ಲಿ ಗೆಲ್ಲಲು ಆಗದೆ, ಮೋದಿ, ಅಮೀತ್ ಶಾ, ಜೆ.ಪಿ ನಡ್ಡಾ, ಯೋಗಿ ಆದಿತ್ಯನಾಥ ವಿರುದ್ದ ಕಾಂಗ್ರೆಸ್ಸಿಗರು ದೂರುವ ಕೆಲಸಗಳು ಮಾಡುತ್ತಾರೆ. ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳಿಗೆ ಮೇಲ್ಛಾವಣಿ ಹಾಕಿಸಿದ್ದು ಅನ್ಸಾರಿ ಅಲ್ಲ. ಅಂದಿನ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ತಮ್ಮ ಸ್ವಂತ ಹಣದಿಂದ ಮೇಲ್ಛಾವಣಿ ಹಾಕಿಸಿದ್ದಾರೆ' ಎಂದು ಹೇಳಿದರು.

ADVERTISEMENT

ಅಧಿಕಾರಕ್ಕೆ ಬಂದರೆ ಬಜರಂಗ ದಳ ಸಂಘಟನೆ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಆಮೇಲೆ ನೋಡೊಣ. ಬಜರಂಗದಳ ಸಂಘಟನೆ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ' ಎಂದು ಹೇಳಿದರು.

'ಮೇ 4ರಂದು ಕನಕಗಿರಿ ರಸ್ತೆಯಲ್ಲಿನ ಹತ್ತಿಮಿಲ್ ಆವರಣದಲ್ಲಿ ನಡೆಯುವ ಬಿಜೆಪಿ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸವನಗೌಡ ಯತ್ನಾಲ್ ಪಾಟೀಲ ಅವರು ಭಾಗವಹಿಸುವರು. ಸದ್ಯದಲ್ಲೇ ಸುದೀಪ್, ಯಡಿಯೂರಪ್ಪ ಬರುವವರಿದ್ದು, ದಿನಾಂಕ ನಿಗದಿಯಾಗಿಲ್ಲ' ಎಂದರು.

'ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ನನ್ನ ವೈಯಕ್ತಿಕ ಸಮಸ್ಯೆಗಳಿಂದ ಬಿಜೆಪಿ ಪಕ್ಷದಿಂದ ದೂರುವಿದ್ದೆ. ಈಚೆಗೆ 1008 ರಂಭಾಪುರಿ ಜಗದ್ಗುರು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಮತ್ತು ನನ್ನ ಕೂರಿಸಿ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿದ್ದು, ಬಿಜೆಪಿ ಗೆಲುವಿಗೆ ಜಂಗಮ ಸಮಾಜದವರು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ' ಎಂದರು.

ಈಚೆಗೆ ಕೆಆರ್‌ಪಿಪಿಗೆ ಸೇರಲಾಗಿದೆ ಎಂಬ ವರದಿಯಲ್ಲಿದ್ದ ಜಂಗಮ ಸಮಾಜದ ಮುಖಂಡರು, ಸಂಗಾಪುರ ಗ್ರಾ.ಪಂ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಭೋವಿ ಸೇರಿದಂತೆ ಯುವಕರು ಬಿಜೆಪಿ ಸೇರ್ಪಡೆಯಾದರು.

ನೆಕ್ಕಂಟಿ ಸೂರಿಬಾಬು, ಪ್ರಭುಕಪಗಲ್, ವೀರಭದ್ರಪ್ಪ ನಾಯಕ, ಸಿದ್ದರಾಮಸ್ವಾಮಿ, ಸಂಗಯ್ಯಸ್ವಾಮಿ ಶಂಶಿಮಠ, ಹುಸೇನಪ್ಪ ಮಾದಿಗ, ಹನುಮಂತಪ್ಪ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.